ಬಾಗಲಕೋಟೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ನಾವು ಭಾರತೀಯರು ಎಂಬ ಹೆಸರಿನಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟ ಧರಣಿ ಆರಂಭಿಸಿವೆ.
ವಿವಿಧ ಮುಸ್ಲಿಂ ಸಂಘಟನೆಗಳು, ಕರವೇ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಆರಂಭಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಬಿ. ನಾಡಗೌಡ ಮಾತನಾಡಿ, ಕೇಂದ್ರ ಸರ್ಕಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದಕ್ಕೆ ನಾವು ವಿರೋಧಿಸುತ್ತೇವೆ. ಪ್ರಧಾನಿ ನರೆಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಸೇರಿ ದೇಶದಲ್ಲಿ ಧರ್ಮ ಆಧಾರಿತ ಕಾಯ್ದೆಗಳು ಜಾರಿಗೆ ತರುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಜನರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದರೆ, ದೇಶ ವಿರೋಧಿ ಪಟ್ಟ ಕಟ್ಟುತ್ತಾರೆ. ಬಾರತೀಯರಾದ ನಾವು ಇಲ್ಲೇ ಹುಟ್ಟಿ ಬೆಳದಿದ್ದೆವೆ. ಬೇಕಾದರೆ ನೀವು ಪಾಕಿಸ್ತಾನಕ್ಕೆ ಹೋಗಿ ಎಂದು ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಡಾ|ಅಂಬೇಡ್ಕರ್ ಅವರು ಊರುಗಳಲ್ಲಿ ಕುದುರೆ ಟಾಂಗಾ ಹೊಡೆಯುವರು ನಗರಸಭೆ ಹಾಗೂ ಮಹಾನಗರ ಪಾಲಿಕೆಯ ಸದಸ್ಯರಾಗಬೇಕು ಎಂಬ ಆಸೆ ಅವರದ್ದಾಗಿತ್ತು. ಆದರೆ, ಮೋದಿ ಸರ್ಕಾರ ತಮ್ಮ ಅಧಿಕಾರದಿಂದ ಪ್ರಜಾಪ್ರಭುತ್ವದ ವ್ಯವರ್ಸತೆ ಹಾಳು ಮಾಡುತ್ತಿದೆ. ಜನಪರ ಆಡಳಿತ ನೀಡುವ ಬದಲು ಧರ್ಮ-ಜಾತಿ ನಡುವೆ ಒಡಕುಂಟು ಮಾಡುತ್ತಿದೆ ಆರೋಪಿಸಿದರು.
ಚುನಾವಣೆ ಆಯೋಗ, ಸುಪ್ರೀಂಕೋರ್ಟ್, ಆರ್‌ಬಿಐ ಸೇರಿದಂತೆ ಪ್ರಜಾಪ್ರಭುತ್ವ ಅಡಿಪಾಯವಾಗಿರುವ ಸಂವಿಧಾನಿಕ ಸಂಸ್ಥೆಗಳನ್ನು ಮೋದಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ದೇಶದ ಎಲ್ಲ ರಾಜ್ಯಗಳಲ್ಲಿ 12 ರಾಜ್ಯಗಳು ಈ ಕಾಯ್ದೆಯನ್ನು ಒಪ್ಪಿಕೊಂಡಿಲ್ಲ. ನಾವು ಈ ಕಾಯ್ದೆಯ ಬಗ್ಗೆ ಮಾತನಾಡಲಾಗುತ್ತಿಲ್ಲ ಅಂತಹ ಸ್ಥಿತಿ ಉಂಟಾಗಿದೆ ಎಂದು ಕೇಂದ್ರ ಸಚಿವರೆ ನಮ್ಮ ಬಳಿ ಹೇಳಿಕೊಂಡಿದ್ದಾರೆ. ಇಂತಹ ಸರ್ಕಾರದ ವಿರುದ್ಧ ಎಲ್ಲರೂ ಸೇರಿ ಧ್ವನಿ ಎತ್ತಬೇಕಾಗಿದೆ ಎಂದು ಆಕ್ರೋಶಗೊಂಡರು.
ಜಿಪಂ ಅಧ್ಯಕ್ಷೆ ಬಾಯಕ್ಕೆ ಮೇಟಿ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ. ಸೌದಾಗರ, ಮುಖಂಡರಾದ ಎ.ಡಿ. ಮೊಕಾಶಿ, ಮೈನುದಿನ್ ನಬಿವಾಲೆ, ಅಯುಬ ಪುಣೇಕರ, ನೂರಅಹ್ಮದ ಪಟ್ಟೆವಾಲೆ, ರಮೇಶ ಬದೂ°ರ, ಎ.ಎ. ದಂಡಿಯಾ ಮುಂತಾದವರು ಪಾಲ್ಗೊಂಡಿದ್ದರು.