ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಮುಸ್ಲಿಂ ಮಹಿಳೆಯರು ಶನಿವಾರ ಸಂಜೆ ಹಳೇ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ (ನಮಾಜ್) ಮಾಡಿದರು. ಸಿಎಎ, ಎನ್‌ಆರ್‌ಸಿ ಹಾಗೂ ಎನ್ ಪಿಆರ್ ವಿರೋಧಿ ಅಂಜುಮನ್ ಇಸ್ಲಾಂ ಸಂಸ್ಥೆ ಹಮ್ಮಿಕೊಂಡಿರುವ ನಿರಂತರ ಧರಣಿ ಭಾಗವಾಗಿ ಮಹಿಳೆಯರು ನಮಾಜ್ ಸಲ್ಲಿಸಿದರು. ಇದಕ್ಕೂ ಮೊದಲು ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಸಿಎಎ, ಎನ್‌ಆರ್‌ಸಿ ವಿರೋಧಿಸಿ ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ಆಗಮಿಸಿದರು.
ರಾಷ್ಟ್ರಧ್ವಜ ಹಾಗೂ ಕಪ್ಪು ಬಲೂನ್‌ಗಳನ್ನು ಹಾರಿಬಿಟ್ಟು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಸಿಎಎ, ಎನ್‌ಆರ್‌ಸಿಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಈ ಕಾಯ್ದೆಗಳು ದೇಶದ ಜನರಿಗೆ ಬೇಕಾಗಿಲ್ಲ. ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದರು.
ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ. ಧರ್ಮಗಳನ್ನು ಒಡೆದು ಆಳುವ ಕುತಂತ್ರ ಮಾಡುತ್ತಿದೆ. ದಿನ ಬೆಳಗಾದರೆ ರಾಜಕಾರಣಿಗಳು ವಿಷ ಕಾರುವ ಹೇಳಿಕೆ ನೀಡುತ್ತಿದ್ದಾರೆ. ಧರ್ಮಗಳ ನಡುವೆ ಕಂದಕ ನಿರ್ಮಿಸಿ ರಾಜಕಾರಣ ಮಾಡುವುದು ಸರಿಯಲ್ಲ. ಭಾರತದ ಮಣ್ಣಲ್ಲಿ ಹುಟ್ಟಿದ್ದೇವೆ, ಇದೇ ಮಣ್ಣಿನಲ್ಲಿ ಸಾಯುತ್ತೇವೆ ಎಂದು ಘೊಷಣೆ ಕೂಗಿದರು. ಅಂಜುಮನ್ ಇಸ್ಲಾಂ ಸಂಸ್ಥೆ ಹಮ್ಮಿಕೊಳ್ಳುವ ಹೋರಾಟದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರು ಪಾಲ್ಗೊಳ್ಳುವ ಕುರಿತು ನಿರ್ಧರಿಸಲಾಯಿತು.
ಮುಂಬೈನಿಂದ ಆಗಮಿಸಿದ್ದ ಫಾತೀಮಾ ಆಶ್ರಫ್ ಶೇಖ್ ಮಾತನಾಡಿ, ಕೇವಲ ಒಂದೇ ಒಂದು ಧರ್ಮವನ್ನು ಹೊರಗಿಟ್ಟು ಕಾಯ್ದೆ ಮಾಡಿರುವುದು ಮುಸ್ಲಿಂ ವಿರೋಧಿಯಲ್ಲವೇ? ದೇಶದ ಎರಡು ಕಣ್ಣುಗಳಂತೆ ಇರುವ ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ನಿಮ್ಮ ಬಣ್ಣದ ರಾಜಕಾರಣಕ್ಕೆ ಬಲಿಯಾಗುವಷ್ಟು ದಡ್ಡರು ದೇಶದಲ್ಲಿ ಯಾರಿಲ್ಲ. ಧರ್ಮದ ಆಧಾರದ ಮೇಲೆ ಹಿಂದೆಂದೂ ಪೌರತ್ವ ನೀಡಿದ ಉದಾಹರಣೆಗಳಿಲ್ಲ. ಮಹಿಳೆಯರು ಹೋರಾಟದ ಮುಂಚೂಣಿಗೆ ಬರಬೇಕು ಎಂದು ಹೇಳಿದರು.
ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಮಹ್ಮದ್ ಯೂಸೂಫ್ ಸವಣೂರು,ಅಲ್ತಾಫ್ ಕಿತ್ತೂರ, ಬಶೀರ್ ಅಹ್ಮದ, ದಾದಾಹಯತ್ ಖೈರಾತಿ, ಮುನಾಫ್ ದೇವಗಿರಿ ಇನ್ನಿತರರಿದ್ದರು.
ಮಹಿಳಾ ಪ್ರಮುಖರಾದ ಹಾಫಿಜಾ ಆಲಿಮಾ, ಸಫಿನಾ ಒಡ್ಡೋ, ಅಮ್ರಿನ್ ಬಾನು ಕಿಲ್ಲೇದಾರ, ಮಹಜಬೀನ್ ಕಮಾನಗರ್, ದಿಲಶಾದ್ ಖಾಜಿ ಆಲೀಮಾ, ಸಬೀಹಾ ಅಶ್ರಫೀ, ಆರೀಫತುನ್ನಿಸಾ ಆಸ್ಮಾ ನದಾಫ, ಸಲ್ಮಾ ಬೆಳವಣಕಿ, ತಬಸ್ಸುಮ್ ಸವಣೂರ, ಆರೀಫಾ ಪರವೀನ, ಫಸೀಯಾ ಜುನೂದಿ, ನಸ್ರಿನ್ ಕಾಲವಾಡ, ಸಲ್ಮಾ ಮಕಾನದಾರ ಇನ್ನಿತರರಿದ್ದರು.
ಇದೇ ಮೊದಲು! : ಅಂಜುಮನ್ ಇಸ್ಲಾಂ ಸಂಸ್ಥೆಯ 117 ವರ್ಷದ ಇತಿಹಾಸದಲ್ಲಿ ಮಹಿಳೆಯರು ಇಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದು ಇದೇ ಮೊದಲ ಬಾರಿಯಾಗಿದೆ. ಅಸರ್ ಹಾಗೂ ಮಗರೀಬ್ ನಮಾಜ್ ಮಾಡಿದ್ದು, ವಿವಿಧೆಡೆಯಿಂದ ಆಗಮಿಸಿದ್ದ ಮಹಿಳಾ ಸಂಪನ್ಮೂಲ ವ್ಯಕ್ತಿಗಳು ಸಿಎಎ, ಎನ್‌ಆರ್‌ಸಿಹಾಗೂ ಎನ್‌ಪಿಆರ್‌ನಿಂದ ಆಗುವ ಸಮಸ್ಯೆಗಳ ಕುರಿತು ಭಾಷಣ ಮಾಡಿದರು.