ಹುಳಿಯಾರು: ಹೋಬಳಿ ಪೋಚಕಟ್ಟೆ ಗ್ರಾಮದ ಪೋಚಕಟ್ಟೆ ಗೇಟ್‌ನಿಂದ ಉತ್ತರಕ್ಕೆ ಪೋಚಕಟ್ಟೆ ಗ್ರಾಮ, ಹುಳಿಯಾರು ಅಮಾನಿಕೆರೆ ಮತ್ತು ಕಸಬಾ ಗ್ರಾಮಗಳ ಆಯ್ದ ಸರ್ವೆ ನಂಬರ್‌ನ ಜಮೀನುಗಳಲ್ಲಿ ಹಾದು ಹೋಗುವ ನಿಯೋಜಿತ 150ಎ ಬೈಪಾಸ್ ರಸ್ತೆ ರದ್ದುಗೊಳಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ (ಹೊಸಹಳ್ಳಿ ಚಂದ್ರಣ್ಣ ) ಬಣದ ರೈತರು ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಜ್ಯ ರೈತ ಸಂಘದ ಅಧಕ್ಷ ಹೊಸಹಳ್ಳಿ ಚಂದ್ರಣ್ಣ ಮಾತನಾಡಿ, 150 ಎ ರಾಷ್ಟ್ರೀಯ ಹೆದ್ದಾರಿಗೆ ಚಿಕ್ಕನಾಯಕನಹಳ್ಳಿ ತಾಲೂಕು ಕೇಂದ್ರದಲ್ಲೇ ಇಲ್ಲದ ಬೈಪಾಸ್ ಹುಳಿಯಾರಿ ನಲ್ಲಿ ಮಾಡಲು ಹೊರಟಿದ್ದಾರೆ. ಇಲ್ಲಿ ಬೈಪಾಸ್ ರಸ್ತೆ ಮಾಡಿದರೆ ನೂರಾರು ಕುಟುಂಬಗಳು ಮನೆ, ಜಮೀನು ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ಹಾಗಾಗಿ ಈ ಹಿಂದೆಯೇ ಸಂಸದರು, ಸಚಿವರು, ಜಿಲ್ಲಾಧಿಕಾರಿಗೆ ಬೈಪಾಸ್ ಕೈ ಬಿಡಲು ಮನವಿ ಮಾಡಿದ್ದರೂ ಯಾರೊಬ್ಬರೂ ರೈತರ ಪರ ನಿಂತಿಲ್ಲ. ಹಾಗಾಗಿ ಚಳವಳಿಗೆ ಕರೆಕೊಟ್ಟಿದ್ದು, ಈಗ ಮನೆಗೊಬ್ಬರಂತೆ ಮಾತ್ರ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರು ಸೇರಿ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮಣ್ಣಿನೊಂದಿಗೆ ಅವಿನಾಭಾವ ಸಂಬಂಧ: ತಾಪಂ ಮಾಜಿ ಸದಸ್ಯ ಶಿವನಂಜಪ್ಪ ಮಾತನಾಡಿ, ಬೈಪಾಸ್ ರಸ್ತೆ ಹೋಗುವ ಗ್ರಾಮದ ಜಮೀನುಗಳು ಪಿತ್ರಾರ್ಜಿತವಾದ ನೂರಾರು ವರ್ಷಗಳಿಂದ ಸಾಗುವಳಿಗೆ ಒಳಪಟ್ಟಿದ್ದು, ವ್ಯವಸಾಯಕ್ಕೆ ಯೋಗ್ಯ ಫಲವತ್ತಾದ ಭೂಮಿಯಾಗಿದೆ. ಅಲ್ಲದೆ ಪಿತ್ರಾರ್ಜಿತ ಜಮೀನು ಗಳಾದ್ದರಿಂದ ಸಣ್ಣ, ಅತಿ ಸಣ್ಣ ರೈತಾಪಿ ಕುಟುಂಬಗಳ ಪಾಲಿಗೆ ಸರ್ವಸ್ವವಾಗಿದ್ದು, ಈ ಮಣ್ಣಿನೊಂದಿಗೆ ಜನತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಜೊತೆಗೆ ಇಲ್ಲಿನ ನಿವಾಸಿಗಳಿಗೆ ಇದೇ ಜೀವನಾಧಾರ. ಜಮೀನು ಸ್ವಾಧೀನ ಮಾಡಿಕೊಂಡರೆ ರೈತರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ ಎಂದರು.
ಜನರೂ ಕೈ ಜೋಡಿಸಲಿ: ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಆರ್. ಭೋಜರಾಜ್ ಮಾತನಾಡಿ, ಅಭಿವೃದ್ಧಿ ನೆಪದಲ್ಲಿ ಕೃಷಿ ಜಮೀನು ಸ್ವಾಧೀನ ಮಾಡಿಕೊಂಡು ರೈತರನ್ನು ಸರ್ಕಾರ ಒಕ್ಕಲೆಬ್ಬಿಸುತ್ತಿದೆ. ಹೀಗೆ ಫಲವತ್ತಾದ ಕೃಷಿ ಭೂಮಿಯಲ್ಲಿ ರಸ್ತೆ, ರೈಲು, ಕಾರ್ಖಾನೆ ಮಾಡಿದರೆ ಮುಂದೊಂದು ದಿನ ತುತ್ತು ಅನ್ನಕ್ಕೂ ದೇಶದ ಜನ ಪರದಾಡುವಂತಾಗುತ್ತದೆ. ಹಾಗಾಗಿ ಕೃಷಿ ಭೂಮಿ ಉಳಿಸಲು ರೈತರೊಂದಿಗೆ ಜನರೂ ಕೈ ಜೋಡಿಸುವ ಅಗತ್ಯವಿದೆ. ಹಠಕ್ಕೆ ಬಿದ್ದು ಬೈಪಾಸ್ ನಿರ್ಮಾಣಕ್ಕೆ ಮುಂದಾದರೆ ಉಗ್ರ ಪ್ರತಿಭಟನೆಗೆ ಮುಂದಾಗ ಬೇಕಾಗುತ್ತದೆ ಎಂದರು.
ಗೌಡಗೆರೆ, ಕೆ.ಸಿ.ಪಾಳ್ಯ, ಕೆಂಕೆರೆ, ಲಿಂಗಪ್ಪನ ಪಾಳ್ಯ, ಸೋಮಜ್ಜನಪಾಳ್ಯ, ಹುಳಿಯಾರು, ಪೋಷ ಕಟ್ಟೆ, ಬಳ್ಳೆಕಟ್ಟೆ ಗ್ರಾಮಗಳ ನೂರಾರು ರೈತರು ಪಾಲ್ಗೊಂಡಿದ್ದರು. ಹುಳಿಯಾರಿನ ರಾಮಗೋ ಪಾಸ್ ಸರ್ಕಲ್‌ನಿಂದ ಬಿ.ಎಚ್.ರಸ್ತೆ ಮೂಲಕ ನಾಡಕಚೇರಿಗೆ ಪ್ರತಿಭಟನಾ ಮೆರವಣಿಗೆ ಆಗ ಮಿಸಿ ಉಪತಹಶೀಲ್ದಾರ್ ಸೋಮೇಶ್‌ಗೆ ಮನವಿ ಕೊಟ್ಟು ಪ್ರತಿಭಟನೆ ಕೈ ಬಿಡಲಾಯಿತು.