Advertisement

ಬಸ್‌ಪಾಸ್‌ ದರ ಏರಿಕೆ ವಿರೋಧಿಸಿ ಪ್ರತಿಭಟನೆ

09:53 PM Jun 14, 2019 | Team Udayavani |

ಮೈಸೂರು: ರಾಜ್ಯ ಸರ್ಕಾರ ಪುಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಬಸ್‌ ಪಾಸ್‌ ಶುಲ್ಕವನ್ನು ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿ ಜಮಾವಣೆಗೊಂಡ ನಗರದ ವಿವಿಧ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮ್ಮಿಶ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೆಎಸ್‌ಆರ್‌ಟಿಸಿಯು ಬಸ್‌ಪಾಸ್‌ ಶುಲ್ಕವನ್ನು 100 ರೂ.ನಿಂದ 200ರೂ.ವರೆಗೆ ಏರಿಕೆ ಮಾಡಲು ನಿರ್ಧರಿಸಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ. ಅಲ್ಲದೇ ರಾಜ್ಯಾದ್ಯಂತ ತೀವ್ರ ಬರದ ಪರಿಸ್ಥಿತಿ ಎದುರಾಗಿ ಜನತೆ ಕಂಗಾಲಾಗಿರುವ ಸನ್ನಿವೇಶದಲ್ಲಿ ಬಸ್‌ಪಾಸ್‌ ಶುಲ್ಕ ಏರಿಕೆ ಮಾಡಿದೆ. ಇದರಿಂದ ಶಾಲಾ-ಕಾಲೇಜುಗಳನ್ನು ಬಿಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.

ರೈತಪರ, ಜನಪರ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್‌-ಜಾ.ದಳ ಮೈತ್ರಿ ಸರ್ಕಾರ ಉಚಿತ ಬಸ್‌ ಪಾಸ್‌ ನೀಡುವುದಾಗಿ ಹೇಳಿ ನಂತರ ಅ ಪ್ರಸ್ತಾಪವನ್ನು ಕೈಬಿಟ್ಟು, ಈಗ ಬಸ್‌ ಪಾಸ್‌ ದರವನ್ನು ಏರಿಕೆ ಮಾಡಿ ರೈತರ, ಬಡವರ ಮಕ್ಕಳಿಗೆ ಮೋಸ ಮಾಡಿದೆ ಎಂದು ಕಿಡಿಕಾರಿದ ವಿದ್ಯಾರ್ಥಿಗಳು ಈ ಕೂಡಲೇ ಸರ್ಕಾರ ನಿರ್ಧರಿಸಿರುವ ಬಸ್‌ಪಾಸ್‌ ದರ ಏರಿಕೆಯನ್ನು ಕೈಬಿಡಬೇಕು.

ಇಲ್ಲದಿದ್ದರೆ ಪ್ರತಿಭಟನೆಗಳನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಖಜಾಂಚಿ ಅಸಿಯಾ ಬೇಗಂ, ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ಬಿ.ಎನ್‌.ಆಕಾಶ್‌ ಕುಮಾರ್‌ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next