Advertisement

ಉಸಿರುಗಟ್ಟಿಸುವ ರಕ್ಷಣಾ ಕವಚಗಳು

11:47 AM Apr 08, 2020 | Suhan S |

ಬೆಂಗಳೂರು: ನೆತ್ತಿಸುಡುವ ಬಿಸಿಲ ಧಗೆಯಲ್ಲಿ ಮೈತುಂಬ ಹೊದ್ದ ಬಟ್ಟೆಗಳು, ಅದರ ಮೇಲೆ ಮತ್ತೂಂದು ಪ್ಲಾಸ್ಟಿಕ್‌ ಷರ್ಟ್‌ ಮತ್ತು ಪ್ಯಾಂಟ್‌, ನಂತರ ಪ್ಲಾಸ್ಟಿಕ್‌ ಗೌನ್‌, ಮುಖದ ತುಂಬಾ ಮಾಸ್ಕ್ ಮತ್ತು ಪ್ಲಾಸ್ಟಿಕ್‌ ಕವರ್‌ ಹೊದ್ದು ವ್ಯಕ್ತಿಯೊಬ್ಬರನ್ನು ತಪಾಸಣೆ ಮಾಡಿ, ತಮ್ಮ ಜಾಗಕ್ಕೆ ಹೋಗಿ ಕುಳಿತಾಗ ಮೈಯೆಲ್ಲಾ ಬೆವರಿನಿಂದ ಒದ್ದೆಯಾಗಿತ್ತು!

Advertisement

– ಈ ಪ್ರಕ್ರಿಯೆ ನಿತ್ಯ ಐದಾರು ತಾಸುಗಟ್ಟಲೆ ಕಳೆದೆರಡು ವಾರಗಳಿಂದ ನಿರಂತರವಾಗಿ ನಗರದ ಜ್ವರ ತಪಾಸಣಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ವೈದ್ಯಕೀಯ ಸಿಬ್ಬಂದಿಗಳದ್ದು. ಕೋವಿಡ್ 19 ವೈರಸ್‌ ಹರಡದಂತೆ ರಕ್ಷಣಾ ಕವಚಗಳೇ ಸಿಬ್ಬಂದಿಗೆ ಉಸಿರುಗಟ್ಟಿದ ವಾತಾವರಣವನ್ನು ಸೃಷ್ಟಿಸಿವೆ. ಹಾಗಂತ, ಕಿತ್ತುಬಿಸಾಕುವಂತೆಯೂ ಇಲ್ಲ. ಕೇವಲ ಆ ಉಸಿರುಗಟ್ಟುವಿಕೆಯನ್ನು ಅನುಭವಿಸುವುದೊಂದೇ ಅವರಿಗಿರುವ ಆಯ್ಕೆ.

ಅಂದಹಾಗೆ, ಈ ರಕ್ಷಣಾ ಕವಚಗಳನ್ನು ಒಮ್ಮೆ ಮಾತ್ರ ಬಳಸಬಹುದು. ಅಲ್ಲದೆ, ಇದನ್ನು ಧರಿಸುವಾಗ ಮತ್ತು ಬಿಸಾಕುವಾಗ ಸಂಪೂರ್ಣ ಸ್ಯಾನಿಟೈಸ್‌ ಆಗಬೇಕು (ಶುಚಿತ್ವ ಕಾಪಾಡಿಕೊಳ್ಳಬೇಕು). ಹೀಗಾಗಿ, ಹಲವು ವೈದ್ಯರು ಹೆಚ್ಚು ನೀರು ಕುಡಿಯುತ್ತಿಲ್ಲ, ಮಧ್ಯಾಹ್ನ ಊಟವನ್ನೂ ಮಾಡುತ್ತಿಲ್ಲ!

ಪ್ರತಿ ಆರೋಗ್ಯ ಕೇಂದ್ರದಲ್ಲೂ ದಿನಕ್ಕೆ ಕನಿಷ್ಠ 25-30ಜನ ಜ್ವರ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಜ್ವರ ತಪಾಸಣೆ ಮಾಡುವ ವೈದ್ಯರಿಗೆ ಹಾಗೂ ಸಹಾಯಕ ಸಿಬ್ಬಂದಿಗೆ ಸೋಂಕಿನಿಂದ ರಕ್ಷಿಸಿಕೊಳ್ಳಲು ರಕ್ಷಣಾ ಕವಚಗಳನ್ನು ನೀಡಲಾಗಿದೆ. ನಗರದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಈ ರಕ್ಷಣಾ ಕವಚವನ್ನು ಹಾಕಿಕೊಂಡು ಕೆಲಸ ಮಾಡಲು ವೈದ್ಯರಿಗೆ ಕಷ್ಟವಾಗುತ್ತಿದೆ. ಪರಿಸ್ಥಿತಿಯನ್ನು ದೂರದೆ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಕೇಂದ್ರದಲ್ಲಿನ ವೈದ್ಯರೊಬ್ಬರು ತಿಳಿಸಿದರು.

ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಜೆ.ಸಿ ರಸ್ತೆಯ ಪಾಲಿಕೆಯ ಸಿದ್ದಯ್ಯ ರೆಫ‌ರಲ್‌ ಆಸ್ಪತ್ರೆಯ ಡಾ.ದೀಪ್ತಿ, ಒಮ್ಮೆ ರಕ್ಷಣಾ ಕವಚವನ್ನು ಧರಿಸಿದರೆ ಮತ್ತೆ ಅದನ್ನು ಬಳಸುವಂತಿಲ್ಲ. ಮಧ್ಯಾಹ್ನ ಊಟ ಮಾಡಬೇಕಾದರೆ, ಸಂರ್ಪೂಣ ಸ್ವಚ್ಛಗೊಳ್ಳ  ಬೇಕು. ಸಮಯ, ಕಿಟ್‌ ಎರಡೂ ವ್ಯರ್ಥವಾಗುತ್ತದೆ. ಹೀಗಾಗಿ, ನಮ್ಮ ದಿನಚರಿಯನ್ನು ಬದಲಾಯಿಸಿಕೊಂಡಿದ್ದೇವೆ. ಈಗ ಮಧ್ಯಾಹ್ನ ಊಟ ಮಾಡುತ್ತಿಲ್ಲ ಎಂದು ತಿಳಿಸಿದರು.

Advertisement

ಮನೆಯವರಿಂದಲೂ ಅಂತರ!: ಜ್ವರ ತಪಾಸಣಾ ಕೇಂದ್ರದಲ್ಲಿ ಕೆಲಸ ಮಾಡುವ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿ ದಿನಚರಿ ಬದಲಾಗಿದೆ. ಆಸ್ಪತ್ರೆಗೆ ಬರುವಾಗ ಹಾಗೂ ಮನೆಗೆ ಹೋಗುವ ಮುನ್ನ ಅವರ ಬ್ಯಾಗ್‌, ವೈದ್ಯಕೀಯ ಪರಿಕರ, ಮೊಬೈಲ್‌, ವಾಹನದ ಕೀ ಎಲ್ಲವನ್ನೂ ಸ್ವಚ್ಛಗೊಳಿಸುವುದು, ಸಮವಸ್ತ್ರವನ್ನೂ ಸ್ಯಾನಿಟೈಸರ್‌ ಮಾಡುತ್ತಿದ್ದೇವೆ. ಅಲ್ಲದೆ, ಮನೆಯವ ರೊಂದಿಗೂ 2ರಿಂದ 3ಮೀಟರ್‌ ಅಂತರ ಕಾಯ್ದು ಕೊಳ್ಳು ತ್ತಿದ್ದೇವೆ ಎನ್ನುತ್ತಾರೆ ಮತ್ತೂಬ್ಬ ಸಿಬ್ಬಂದಿ ಡಾ.ಶೃತಿ. ಸಾಮಾನ್ಯವಾಗಿ ಹವಾನಿಯಂತ್ರಿತ ವ್ಯವಸ್ಥೆ ಅಥವಾ ಕೂಲರ್‌ ಇದ್ದ ಕಡೆಗಳಲ್ಲಿ ಈ ರಕ್ಷಣಾ ಕವಚಗಳನ್ನು ಹೊದ್ದು ಕೆಲಸ ಮಾಡಲು ಅಷ್ಟೇನೂ ಸಮಸ್ಯೆ ಆಗದು. ಆದರೆ, ಈ ಬೇಸಿಗೆಯಲ್ಲಿ ನಿರಂತರ ವಾಗಿ ಪ್ಲಾಸ್ಟಿಕ್‌ ಹೊದಿಕೆಗಳನ್ನು ಹಾಕಿಕೊಂಡಿರುತ್ತೇವೆ. ತುಂಬಾ ಕಷ್ಟವಾಗುತ್ತದೆ. ಆದರೆ, ಅನಿವಾರ್ಯವಾಗಿದ್ದರಿಂದ ಸಹಿಸಿಕೊಳ್ಳಲೇಬೇಕು. ಈ ಮಧ್ಯೆ ತಪಾಸಣೆ ಮಾಡುವಾಗಲೂ ಸಹಜವಾಗಿ ಭಯವಾಗುತ್ತದೆ ಎಂದು ವಿದ್ಯಾಪೀಠ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್‌ ವಿ. ಸುನೀಲ್‌ ತಿಳಿಸಿದರು.

1,913 ಜನರ ಪರೀಕ್ಷೆ :  ಪಾಲಿಕೆ ವ್ಯಾಪ್ತಿಯ 31 ಆರೋಗ್ಯ ಕೇಂದ್ರಗಳಲ್ಲಿ ಏ.5ರವರೆಗೆ ಒಟ್ಟು 1,913 ಜನರಿಗೆ ಜ್ವರ ತಪಾಸಣೆ ಮಾಡಲಾಗಿದ್ದು, ಇದರಲ್ಲಿ 30 ಜನರಿಗೆ ಕೊರೊನಾ ತಪಾಸಣೆ ಮಾಡಲು ವೈದ್ಯರು ಶಿಫಾರಸು ಮಾಡಿದ್ದರು. ಅದರಲ್ಲಿ ನಾಲ್ವರಿಗೆ ಕೊರೊನಾ ತಪಾಸಣೆ ಮಾಡಲಾಗಿದ್ದು, ಇಬ್ಬರ ವರದಿ ನೆಗೆಟಿವ್‌ ಬಂದಿದೆ. ಇನ್ನು ಇಬ್ಬರನ್ನು ಹೋಟೆಲ್‌ನಲ್ಲಿ ಇರಿಸಲಾಗಿದೆ. ಆದರೆ, ಈವರೆಗೆ ಯಾವುದೇ ಕೊರೊನಾ ಸೋಂಕು ದೃಢಪಟ್ಟಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಪಾಲಿಕೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನೀರು, ಊಟ ಬಿಟ್ಟು  ಸೇವೆ :  ಪಾಲಿಕೆ ವ್ಯಾಪ್ತಿಯಲ್ಲಿನ 31 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ರೆಫ‌ರಲ್‌ ಆಸ್ಪತ್ರೆಗಳಲ್ಲಿನ ವೈದ್ಯರು, ಸಹಾಯಕರು ಹಾಗೂ ರಕ್ತ ಮತ್ತು ಗಂಟಲು ದ್ರವ ಮಾದರಿ ಪರೀಕ್ಷೆ ಮಾಡುವ ಸಿಬ್ಬಂದಿ ನೀರು, ಊಟ ಬಿಟ್ಟು ಸೇವೆ ನೀಡುತ್ತಿದ್ದಾರೆ. ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಹಾಗೂ ಮುಂಜಾಗ್ರತಾ ಕ್ರಮವಾಗಿ ಪಾಲಿಕೆ 31 ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್‌ 29ರಿಂದ ಜ್ವರ ತಪಾಸಣಾ ಶಿಬಿರ ಪ್ರಾರಂಭಿಸಲಾಗಿದೆ.

ಜನ ಅನವಶ್ಯಕವಾಗಿ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅವರಿಗೆ ಧೈರ್ಯ ತುಂಬುತ್ತಿದ್ದೇವೆ. ಥರ್ಮಲ್‌ ಸ್ಕ್ರೀನಿಂಗ್‌ ಯಂತ್ರ ನೋಡಿ ಕೋವಿಡ್ 19 ತಪಾಸಣೆ ಎಂದು ಭಾವಿಸುತ್ತಾರೆ. ಇದು ಕೇವಲ ಜ್ವರ ತಪಾಸಣೆ ಮಾಡುವ ಯಂತ್ರ ಎಂದು ವಿವರಿಸುತ್ತಿದ್ದೇವೆ.  ಡಾ.ನವ್ಯಾ, ಬನಶಂಕರಿ ಆರೋಗ್ಯ ಕೇಂದ್ರ

 

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next