Advertisement

ಹೈಟೆಕ್‌ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ

01:08 PM May 07, 2022 | Team Udayavani |

ಹೊಳಲ್ಕೆರೆ: ರಾಜ್ಯ ಹಾಗೂ ಹೊರ ರಾಜ್ಯದ ಯುವತಿಯರನ್ನು ಬಳಸಿಕೊಂಡು ಹೈಟೆಕ್‌ ವೇಶ್ಯಾವಾಟಿಕೆ ನಡೆಸುತ್ತಿದ್ದ ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಹತ್ತಿರದ ಪ್ರಜ್ವಲ್‌ ಲಾಡ್ಜ್ ಮೇಲೆ ಮೈಸೂರು ಒಡನಾಡಿ ಸೇವಾ ಸಂಸ್ಥೆ ಸದಸ್ಯರು ಶುಕ್ರವಾರ ಜಿಲ್ಲಾ ಪೊಲೀಸರ ವರಿಷ್ಠಾಧಿಕಾರಿಗಳ ಸಹಕಾರದೊಂದಿಗೆ ದಾಳಿ ನಡೆಸಿ ಮೂವರು ಪುರುಷರನ್ನು ವಶಕ್ಕೆ ಪಡೆದು, ಓರ್ವ ಯುವತಿ ರಕ್ಷಣೆ ಮಾಡಲಾಗಿದೆ.

Advertisement

ಮೈಸೂರು ಒಡನಾಡಿ ಸಂಸ್ಥೆ ಖಚಿತ ಮಾಹಿತಿ ಪಡೆದು ಚಿತ್ರದುರ್ಗ ಡಿಸಿಐಬಿ ಇನ್‌ಸ್ಪೆಕ್ಟರ್‌ ಕಿರಣ್‌ ಕುಮಾರ್‌ ನೇತೃತ್ವದಲ್ಲಿ ಮಧ್ಯಾಹ್ನ ಪ್ರಜ್ವಲ್‌ ಲಾಡ್ಜ್ ಮೇಲೆ ದಾಳಿ ನಡೆಸಿದೆ. ಈ ವೇಳೆ ಲಾಡ್ಜ್ ಮ್ಯಾನೇಜರ್‌ ಹಗ್ಗದ ಸಹಾಯದಿಂದ ಜಿಗಿದು ಓಡಿ ಹೋಗಲು ಯತ್ನಿಸಿದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಲಾಡ್ಜ್ ಒಳಗೆ ಹೋಗಿ ಪರಿಶೀಲಿಸಿದಾಗ ಲಾಡ್ಜ್ ನ ಟಾಯ್ಲೆಟ್‌ ರೂಮಿನಲ್ಲಿ ಹೊರ ನೋಟಕ್ಕೆ ಗೋಡೆಯಂತೆ ಕಾಣಿಸುವ, ಗೋಡೆಯ ಒಳಗೆ ಅಡಗುತಾಣ ನಿರ್ಮಿಸಿಕೊಂಡು ಈ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಯೋಜಿತ ದಂಧೆ ಜಾಲ ಪತ್ತೆ

ಪಟ್ಟಣದಲ್ಲಿ ಇದೊಂದು ಯೋಜಿತ ರೀತಿಯಲ್ಲಿ ನಡೆಯುತ್ತಿರುವ ದಂಧೆ ಇದಾಗಿದೆ. ಹಲವಾರು ವರ್ಷಗಳಿಂದ ಇಲ್ಲಿ ದಂಧೆ ನಡೆಯುತ್ತಿತ್ತು ಎನ್ನಲಾಗಿದೆ. ಲಾಡ್ಜ್ನ ಹೊರಗಡೆ ಒಬ್ಬ ಹಾಗೂ ಮೊದಲ ಮಹಡಿಯ ರಿಸಪ್ಷನಿಸ್ಟ್‌ ಜಾಗದಲ್ಲಿ ಮೂವರನ್ನು ಕಣ್ಗಾವಲಿಗೆ ಇಟ್ಟುಕೊಳ್ಳಲಾಗಿತ್ತು. ಪೊಲೀಸರು ಬರುವುದು ಗೊತ್ತಾದ ಕೂಡಲೇ ರಿಸಪ್ಷನಿಸ್ಟ್‌ ಕಾಲ ಕೆಳಗೆ ಇದ್ದ ಸ್ವಿಚ್‌ ಒತ್ತಿದ ತಕ್ಷಣ ಅದು ಮೂರನೇ ಮಹಡಿಯಲ್ಲಿ ದೇವರ ನಾಮದೊಂದಿಗೆ ರಿಂಗ್‌ ಆಗುತ್ತೆ. ಕೂಡಲೇ ಯುವತಿಯರು ಟಾಯ್ಲೆಟ್‌ ರೂಮ್‌ ಒಳಗೆ ಹೋಗಿ ಟೈಲ್ಸ್‌ ಮೂಲಕ ಮಾಡಲ್ಪಟ್ಟ ಬಾಗಿಲನ್ನು ತೆಗೆದು ಅವಿತುಕೊಳ್ಳುತ್ತಿದ್ದದ್ದು ಗೊತ್ತಾಗಿದೆ.

ಈ ಸಂಬಂಧ ಪ್ರಕಣವನ್ನು ದಾಖಲಿಸಿಕೊಂಡಿರುವ ಹೊಳಲ್ಕೆರೆ ಪೊಲೀಸ್‌ ಸಿಪಿಐ ರವಿಶ್‌, ಪಿಎಸ್‌ಐ ಇಬ್ರಾನ್‌ 4 ಜನರನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಮೈಸೂರು ಒಡನಾಡಿ ಸೇವಾ ಸಂಸ್ಥೆಯ ರಕ್ಷಣಾ ತಂಡದಲ್ಲಿ ಪ್ರದೀಪ್‌, ಸುಜನ, ಶಶಾಂಕ್‌, ಸುಮಾ ಹಾಗೂ ಮಹಾಲಕ್ಷ್ಮೀ ಪಾಲ್ಗೊಂಡಿದ್ದರು.

Advertisement

ಅಡಿಕೆ ಬೆಳೆಯುವ ರೈತರೇ ಟಾರ್ಗೆಟ್‌

ಅಡಿಕೆ ಬೆಳೆ ಗಗನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಈ ಭಾಗ ಹಣವಂತ ಯುವಕರನ್ನು ಬಲೆ ಬೀಸುವ ಮೂಲಕ ಅವರನ್ನು ಬಳಸಿಕೊಂಡು ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿಸಿಕೊಂಡು ಹಣ ವಸೂಲಿ ದಂಧೆಗೆ ಇಲ್ಲಿ ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ.

ಲಾಡ್ಜ್ ನಲ್ಲಿ ವಿಶೇಷ ಅಡಗುತಾಣ

ಒಡನಾಡಿ ಸಂಸ್ಥೆ ನಿರ್ದೇಶಕರು ಕೆ.ವಿ. ಸ್ಟಾನ್ಲಿ, ಮಾತನಾಡಿ, ಯಾವುದೇ ಅನುಮಾನ ಬಾರದಂತೆ ಲಾಡ್ಜನಲ್ಲಿ ಉಸಿರಾಡುವುದಕ್ಕೂ ಅವಕಾಶವಿಲ್ಲದ ಅಡಗುದಾಣ ನಿರ್ಮಿಸಿಕೊಂಡು ವೇಶ್ಯಾವಾಟಿಕೆ ಮಾಡಲಾಗುತ್ತಿದೆ. ಇಂತಹ ಕೃತ್ಯಗಳನ್ನು ನಗರ ಪ್ರದೇಶಗಳ ಕೆಲವು ಲಾಡ್ಜ್ಗಳಲ್ಲಿ ಕಂಡುಬಂದಿವೆ. ಆದರೆ ಇದು ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಿಸಿರುವುದು ನಿಜಕ್ಕೂ ಆತಂಕಕಾರಿ ಎಂದರು.

ಚಿತ್ರದುರ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪರಶುರಾಮ್‌ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಸಿದ್ದೇವೆ. ಲಾಡ್ಜ್ ಗಳಲ್ಲಿ ಅಡಗು ತಾಣಗಳನ್ನು ನಿರ್ಮಿಸುವುದಕ್ಕೆ ಅವಕಾಶವಿಲ್ಲ. ಅಂತಹ ಲಾಡ್ಜ್ ಗಳನ್ನು ಗುರುತಿಸಿ ಶಾಶ್ವತವಾಗಿ ಮುಚ್ಚಬೇಕು ಎಂದು ಮಾನವ ಹಕ್ಕುಗಳ ಆಯೋಗ ಆದೇಶ ಮಾಡಿದೆ. ಇದನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿ ಅಂತಹ ಲಾಡ್ಜ್ ಗಳನ್ನು ಗುರುತಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next