Advertisement

Politics: ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧ-ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಲ್ಲ: ಸಿಎಂ

09:05 PM Sep 10, 2023 | Team Udayavani |

ಬೆಂಗಳೂರು: “ರಾಜ್ಯದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಯಾರಿಗೂ ಕಾನೂನು ಕೈಗೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ನಗರದ ಅರಮನೆ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾಂಗ್ರೆಸ್‌ನ ಕಾರ್ಯಕಾರಿಣಿ ಸದಸ್ಯರಾಗಿ ನೇಮಕಗೊಂಡ ರಾಜ್ಯಸಭಾ ಸದಸ್ಯ ನಸೀರ್‌ ಹುಸೇನ್‌ ಅವರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಲ್ಪಸಂಖ್ಯಾತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಸಮಾಜದಲ್ಲಿ ಸಾಮರಸ್ಯ ಕದಡುವ ಪ್ರಯತ್ನ ಮಾಡುತ್ತಿವೆ. ಈಗಾಗಲೇ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಕೋಮುವಾದಿ ಶಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಆರೆಸ್ಸೆಸ್‌ ಹಾಗೂ ಹಿಂದೂ ಮಹಾಸಭಾದವರು ಸಂವಿಧಾನವನ್ನು ವಿರೋಧಿಸಿದವರು. ಹಿಂದೂ ರಾಜ್ಯ, ಹಿಂದೂ ರಾಷ್ಟ್ರ ಮಾಡಬೇಕು ಎಂಬುದು ಬಿಜೆಪಿಯ ಹಿಡನ್‌ ಅಜೆಂಡಾ. ನಾವು ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದ್ದೇವೆ. ಕೋಮುವಾದಿಗಳಿಗೆ ಕಾನೂನು ಕೈಗೆ ತೆಗೆದುಕೊಳ್ಳಲು ಬಿಡಲ್ಲ. ನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಕೋಮುವಾದಿ ಶಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದರು.

“ಅಲ್ಪಸಂಖ್ಯಾತರ ಬೆನ್ನಿಗೆ ನಿಲ್ತಿವಿ’
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಮೇ 13ಕ್ಕೂ ಮುನ್ನ ಕರ್ನಾಟಕದಲ್ಲಿ ಎಲ್ಲ ಧರ್ಮಿಯರೂ ಭಯದ ವಾತಾವರಣದಲ್ಲಿ ಬದುಕುತ್ತಿದ್ದರು. ಈಗ ರಾಜ್ಯದ ಅಲ್ಪಸಂಖ್ಯಾತರು ನಿರಾಳವಾಗಿ ಉಸಿರಾಡಬಹುದು, ನಮ್ಮ ಸರ್ಕಾರ ನಿಮಗೆ ಅನ್ಯಾಯ ಮಾಡಲು ಬಿಡುವುದಿಲ್ಲ. ಯಾವುದೇ ರೀತಿಯ ತೊಂದರೆಯಾದರೂ ನಾವು ಅಲ್ಪಸಂಖ್ಯಾತರ ಬೆನ್ನಿಗೆ ನಿಲ್ಲುತ್ತೇವೆ. ಕಾನೂನಿನ ಚೌಕಟ್ಟು ಮೀರಿ ಎಂದಿಗೂ ನಾವು ನಡೆಯುವುದಿಲ್ಲ.

ಬಿಜೆಪಿ ಸರ್ಕಾರ ಅಮಾಯಕ ಅಲ್ಪಸಂಖ್ಯಾತರ ಮೇಲೆ ಬಡವರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿತ್ತು. ನಾವು ಕಾನೂನು ತಜ್ಞರ ಬಳಿ ಚರ್ಚೆ ನಡೆಸಿ ಸುಳ್ಳು ಕೇಸುಗಳ ಕುರಿತು ಚರ್ಚೆ ನಡೆಸಲಿದ್ದೇವೆ ಎಂದು ಭರವಸೆ ನೀಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಯುವಜನರಿಗೆ ಹೆಚ್ಚು ಅವಕಾಶಗಳನ್ನು ನೀಡುತ್ತಿದೆ. ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಾಸೀರ್‌ ಹುಸೇನ್‌ ಅವರದ್ದು ಸಮರ್ಥವಾದ ಆಯ್ಕೆ, ಕಾಂಗ್ರೆಸ್‌ ಪಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಎಂದಿಗೂ ಕಡೆಗಣಿಸುವುದಿಲ್ಲ ಎಂದು ಹೇಳಿದರು.

Advertisement

ಕೇಂದ್ರ ಮಾಜಿ ಸಚಿವರಾದ ಕೆ. ರೆಹಮಾನ್‌ ಖಾನ್‌, ಸಲ್ಮಾನ್‌ ಖುರ್ಷಿದ್‌, ಸಚಿವರಾದ ಜಮೀರ್‌ ಅಹಮದ್‌ ಖಾನ್‌, ಪ್ರಿಯಾಂಕ್‌ ಖರ್ಗೆ, ಶಾಸಕ ಎನ್‌.ಎ. ಹ್ಯಾರಿಸ್‌ ಮತ್ತಿತರರು ಉಪಸ್ಥಿತರಿದ್ದರು.

ಕುರ್ಚಿ ಮಹತ್ವ ಹೇಳಿಕೊಟ್ಟ ಡಿಕೆಶಿ!
ನಾವಿಲ್ಲಿ ಕುರ್ಚಿಗಾಗಿ ಬಡಿದಾಡುತ್ತೇನೆ. ಆದರೆ, ನೀವು ಕುರ್ಚಿ ಇದ್ದೂ ನಿಂತಿದ್ದೀರಿ. ನಿಮಗೆ ಅದರ ಬೆಲೆ ಗೊತ್ತಿಲ್ಲ.
– ಡಿ.ಕೆ. ಶಿವಕುಮಾರ್‌ ಭಾನುವಾರ ಕಾರ್ಯಕರ್ತರಿಗೆ ಕುರ್ಚಿ ಮಹತ್ವ ತಿಳಿಸಿಕೊಟ್ಟಿದ್ದು ಹೀಗೆ.
ಕಾರ್ಯಕ್ರಮದಲ್ಲಿ ಮಾತಿಗಿಳಿದ ಅವರು, ನಿಮಗೆ ಕುರ್ಚಿ ಬೆಲೆ ಗೊತ್ತಿದ್ದಂತಿಲ್ಲ. ಕುರ್ಚಿಗಳಿದ್ದರೂ ನಿಂತಿದ್ದೀರಿ. ನಾವು ಇಲ್ಲಿ ಕುರ್ಚಿಗಾಗಿ ಬಡಿದಾಡುತ್ತಿದ್ದೇವೆ. ಅದು ನಿಮಗೆ ಗೊತ್ತಾ ಎಂದು ಪ್ರಶ್ನಿಸಿದರು.

ಮೋದಿ ನಮಗೆ ಪಾಠ ಮಾಡುತ್ತಾರಾ?
ಮೇಕ್‌ ಇನ್‌ ಇಂಡಿಯಾ, ಸ್ಕಿಲ್‌ ಇಂಡಿಯಾ ಎಂದೆಲ್ಲಾ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಇಂದು ಅದೇ “ಇಂಡಿಯಾ’ ಹೆಸರು ಬದಲಿಸಲು ಹೊರಟಿದ್ದಾರೆ. ದೇಶದ ಹೆಸರಿನಲ್ಲೂ ಜನರ ನಡುವೆ ಹುಳಿ ಹಿಂಡಲು ಯತ್ನಿಸುತ್ತಿದ್ದಾರೆ. ಆದರೆ, ನಾವು ಭಾರತ್‌ ಜೋಡೋ ಯಾತ್ರೆ ಮಾಡಿದವರು. ನಮಗೇ ಇವರು (ಪ್ರಧಾನಿ) ಇಂಡಿಯಾ-ಭಾರತದ ಬಗ್ಗೆ ನಮಗೆ ಪಾಠ ಹೇಳಿಕೊಡುತ್ತಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಅಮಾಯಕರ ರಕ್ಷಣೆಗೆ ಕ್ರಮ
ಡಿಜೆ ಹಳ್ಳಿ-ಕೆಜೆ ಹಳ್ಳಿ ಗಲಭೆ ವೇಳೆ ಹಿಂದಿನ ಸರ್ಕಾರ ಮನೆಯಲ್ಲಿದ್ದ ಬಡವರ ಮೇಲೆಲ್ಲಾ ಕೇಸುಗಳನ್ನು ಹಾಕಿದೆ. ಕಾನೂನಿನ ಅಡಿ ಅಂತಹ ಅಮಾಯಕರನ್ನು ರಕ್ಷಣೆ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ನೀವೆಲ್ಲಾ ನಮಗೆ ಶಕ್ತಿ ತುಂಬಿದ್ದೀರಿ. ಅಮಾಯಕರನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ. ತಪ್ಪಿತಸ್ಥರು ಶಿಕ್ಷೆ ಅನುಭವಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಬಹುತ್ವ ಭಾರತೀಯ ಸಂಸ್ಕೃತಿಯ ಜೀವಾಳ. ಇದೇ ಭಾರತದ ಮಣ್ಣಿನ ಸತ್ವ. ಬಹುತ್ವದ ನಾಶ ಎಂದರೆ ಅದು ನಮ್ಮ ಸಂವಿಧಾನದ ನಾಶ. ಸಾವಿರಾರು ವರ್ಷಗಳ ಭಾರತದ ಬಹುತ್ವ ಸಂಸ್ಕೃತಿಯನ್ನು ನಾಶ ಪಡಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕಾಗಿ ಆಕರ್ಷಕ ಪದಗಳನ್ನು, ಘೋಷಣೆಗಳನ್ನು ಕೊಡುತ್ತಿದ್ದಾರೆ. ಇದಕ್ಕೆ ಮರುಳಾದರೆ ಭಾರತದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಬೆಸುಗೆ ನಾಶವಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next