Advertisement

ಬೋರ್‌ವೆಲ್‌ಗೆ ಬಿದ್ದ ಕಾರ್ಮಿಕನ ರಕ್ಷಣೆ

11:17 PM Feb 16, 2020 | Team Udayavani |

ಕುಂದಾಪುರ/ಉಪ್ಪುಂದ: ಮರವಂತೆಯ ಹೊರ ಬಂದರು ಪ್ರದೇಶದಲ್ಲಿ ಹ್ಯಾಂಡ್‌ ಬೋರ್‌ವೆಲ್‌ ತೆರೆಯುವ ಸಂದರ್ಭ ಆಕಸ್ಮಿಕವಾಗಿ ಒಳಗೆ ಬಿದ್ದ ಕಾರ್ಮಿಕರೊಬ್ಬರನ್ನು ಸತತ 6 ತಾಸುಗಳ ಕಾರ್ಯಾಚರಣೆ ಮೂಲಕ ಯಶಸ್ವಿಯಾಗಿ ಮೇಲೆತ್ತಿದ ಘಟನೆ ಭಾನುವಾರ ಸಂಭವಿಸಿದೆ. ಉಪ್ಪುಂದ ಫಿಶರೀಸ್‌ ಕಾಲನಿಯ ಕಂಪ್ಲಿಮನೆ ಸುಬ್ಬ ಖಾರ್ವಿಯವರ ಪುತ್ರ ರೋಹಿತ್‌ ಖಾರ್ವಿ (35) ಸತತ 6 ಗಂಟೆಗಳ ಕಾಲ ಹೋರಾಡಿ, ಮೇಲೆ ಬಂದವರು.

Advertisement

ಘಟನೆ ನಡೆದುದು ಹೇಗೆ?: ಭಾನುವಾರ ಬೆಳಗ್ಗೆ ಮರವಂತೆಯ ಹೊರ ಬಂದರು ಪ್ರದೇಶದ ಎನ್‌ಎಸ್‌ಕೆ ಸಂಸ್ಥೆಯ ಕಾರ್ಮಿಕರು ನೆಲೆಸಿರುವ ಜಾಗದಲ್ಲಿ ಹ್ಯಾಂಡ್‌ಪಂಪ್‌ ಬಳಸಲು ಕೊಳವೆ ಬಾವಿ ತೆಗೆಯಲಾಗುತ್ತಿತ್ತು. ಈ ಕಾರ್ಯದಲ್ಲಿ ರೋಹಿತ್‌ ಖಾರ್ವಿ ಮತ್ತು ಇನ್ನು 3 ಮಂದಿ ತೊಡಗಿಸಿಕೊಂಡಿದ್ದರು.

ರೋಹಿತ್‌ ಹಾಗೂ ಮತ್ತೂಬ್ಬರು ಕೆಳಗಿಳಿದಿದ್ದು, ಇನ್ನಿಬ್ಬರು ಮೇಲೆ ಇದ್ದರು. ಈ ವೇಳೆ ಸುತ್ತಲಿನ ಮಣ್ಣು ಕೊರೆಯುತ್ತಿದ್ದಂತೆ ಸಡಿಲವಾದ ಮಣ್ಣು ಕುಸಿಯಿತು. ಕೆಳಗಿದ್ದ ಒಬ್ಬರು ಮಣ್ಣು ಕುಸಿಯುತ್ತಿದ್ದಂತೆ ಮೇಲೆ ಬಂದರಾದರೂ ರೋಹಿತ್‌ ಅವರ ಕಾಲು ಮಣ್ಣಿನಲ್ಲಿ ಸಿಲುಕಿ ಸಿಲುಕಿಕೊಂಡಿತು. ಈ ವೇಳೆ, ಅವರ ಮೇಲೆ ಮಣ್ಣು ಕುಸಿದು ಮಣ್ಣಿನಡಿ ಸಿಲುಕಿಕೊಂಡರು. ಕೂಡಲೇ ಅಲ್ಲಿದ್ದವರು ಮೇಲೆತ್ತಲು ಪ್ರಯತ್ನಪಟ್ಟರೂ ಸಾಧ್ಯವಾಗದೆ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು.

6 ತಾಸು ಕಾರ್ಯಾಚರಣೆ: ಬೆಳಗ್ಗೆ 11.30ರ ಸುಮಾರಿಗೆ ಸುದ್ದಿ ತಿಳಿದ ತಕ್ಷಣ ಕುಂದಾಪುರದ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ, ವೈದ್ಯರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ರಕ್ಷಣ ಕಾರ್ಯಾಚರಣೆ ಆರಂಭಿಸಿ 6 ತಾಸಿನ ಬಳಿಕ ರೋಹಿತ್‌ನ ಶರೀರಕ್ಕೆ ಬೆಲ್ಟ್ ಅಳವಡಿಸಿ ಕ್ರೇನ್‌ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next