Advertisement

ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ: ಸಿಎಂ ಸಿದ್ದರಾಮಯ್ಯ

05:49 PM Sep 26, 2023 | Team Udayavani |

ಮೈಸೂರು: ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ ಎಂದು ನೂತನ ಡಿವೈಎಸ್ ಪಿ ಮತ್ತು ಅಬಕಾರಿ ಡಿವೈಎಸ್ ಪಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

Advertisement

ಇಲ್ಲಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ 37ನೇ ತಂಡದ ಪ್ರೊಬೆಷನರಿ ಪೊಲೀಸ್ ಉಪಾಧೀಕ್ಷಕರು ಮತ್ತು ಅಬಕಾರಿ ಉಪಾಧೀಕ್ಷಕರು ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಅಸಮಾನತೆ, ಜಾತಿ ತಾರತಮ್ಯ ಇರುವ ಸಮಾಜದಲ್ಲಿ ಅಶಕ್ತರಿಗೂ ನ್ಯಾಯ ಸಿಗುವಂತಾಗಬೇಕು. ಕೇವಲ ಬಲಾಡ್ಯರಿಗೆ ಮಾತ್ರ ನ್ಯಾಯ ಸಿಗುವಂತಾದರೆ ಇಷ್ಟೆಲ್ಲಾ ತರಬೇತಿ ಪಡೆದು ಪ್ರಯೋಜನ ಆಗುವುದಿಲ್ಲ. ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಅತ್ಯಂತ ಕಡಿಮೆ ಇರುವುದನ್ನು ಪ್ರಸ್ತಾಪಿಸಿ ಇದು ಸರಿಯಾಗಬೇಕಿದೆ ಎಂದರು.

ಸುಳ್ಳು ಮತ್ತು ದ್ವೇಷದ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಅತ್ಯಂತ ನಿಷ್ಠುರವಾಗಿ ವರ್ತಿಸಿ ಪ್ರತಿಯೊಬ್ಬರ ಸಂವಿಧಾನ ಬದ್ದ ಹಕ್ಕುಗಳನ್ನು ರಕ್ಷಿಸುವ ಸವಾಲು ನಿಮ್ಮ ಮೇಲಿದೆ. ದ್ವೇಷ ಕಾರುವವರಿಗೆ ಎಷ್ಟೇ ರಾಜಕೀಯ ಶಕ್ತಿ ಇದ್ದರೂ ಅವರನ್ನು ಮಟ್ಟ ಹಾಕದಿದ್ದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ.

ಶಾಂತಿ-ಸುವ್ಯವಸ್ಥೆ ಇಲ್ಲದ ಸಮಾಜ, ನಾಡು, ದೇಶ ಅಭಿವೃದ್ಧಿ ಹೊಂದಲು, ಪ್ರಗತಿ ಪಥದಲ್ಲಿ ಮುಂದೆ ಸಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಿ ಎಂದು ಕರೆ ನೀಡಿದರು.

Advertisement

ಕರ್ನಾಟಕ ಪೊಲೀಸ್ ಅಕಾಡೆಮಿ ತರಬೇತಿಯಲ್ಲಿ ಉನ್ನತ ಪ್ರತಿಷ್ಠೆ ಗಳಿಸಿದೆ. ಇಲ್ಲಿ ಶಿಸ್ತಿನ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು ಪ್ರಶಿಕ್ಷಣಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.

ಸಾರ್ವಜನಿಕ ಜೀವನದಲ್ಲಿ ಇರುವವರೆಗೆ ನಾವು ಸಾಮಾಜಿಕ ಜವಾಬ್ದಾರಿಯನ್ನು, ಜನಸ್ನೇಹಿಗಳಾಗಿರುವುದನ್ನು ಮರೆಯಬಾರದು. ಜನರ ಕಷ್ಟಗಳನ್ನು ಆಲಿಸುವ ಮತ್ತು ಪರಿಹಾರ ಹುಡುಕುವ ತಾಳ್ಮೆ ಇಟ್ಟುಕೊಂಡವರು ಮಾತ್ರ ಸಾರ್ವಜನಿಕ‌ ಜೀವನದಲ್ಲಿರುವ ಅರ್ಹತೆ ಪಡೆದುಕೊಳ್ಳುತ್ತಾರೆ ಎಂದರು.

ಜನರು ನಿಮ್ಮ ಮೇಲೆ ಇಟ್ಟ ವಿಶ್ವಾಸವನ್ನು ಜವಾಬ್ದಾರಿಯಿಂದ ನಿರ್ವಹಿಸಿ. ಪೊಲೀಸರು ಅನೇಕ ಸಂದರ್ಭಗಳಲ್ಲಿ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಎಂಥಾದ್ದೇ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ಕರ್ತವ್ಯ ನಿರ್ವಹಿಸಬೇಕು ಎಂದರು.

ಗೃಹ ಸಚಿವ ಜಿ.ಪರಮೇಶ್ವರ್ ಅವರು ಅಧ್ಯಕ್ಷತೆ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next