ಕೇಂದ್ರ ಜಲ ಆಯೋಗ ತಯಾರಿಸಿರುವ ವರದಿಯೊಂದರಲ್ಲಿ ಭವಿಷ್ಯದಲ್ಲಿ ಬತ್ತಿ ಹೋಗಲಿರುವ ನದಿಗಳನ್ನು ಪಟ್ಟಿ ಮಾಡಲಾಗಿದೆ. ಕರ್ನಾಟಕದ ಜೀವನದಿ ಕಾವೇರಿಯ ಹೆಸರೂ ಇದೆ. ಕಛ…, ತಾಪಿ, ಸಬರ್ಮತಿ, ಗೋದಾವರಿ, ಕೃಷ್ಣಾ, ಮಹಾನದಿ ಸೇರಿ ಒಟ್ಟು 12 ನದಿಗಳು ಮುಂದೊಂದು ದಿನ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಈ ವರದಿ ಹೇಳಿದೆ. ನಿಜಕ್ಕೂ ಇದು ನಮ್ಮ ಕಣ್ಣು ತೆರೆಸಬೇಕಾದ ವರದಿ. ನಮ್ಮೊಳಗೊಂದು ಕಳವಳವನ್ನು ಈ ವರದಿ ಹುಟ್ಟುಹಾಕಬೇಕಿತ್ತು. ನಮ್ಮನ್ನಾಳುವವರನ್ನು ಗಂಭೀರ ಚಿಂತನೆಗೆ ಈಡು ಮಾಡಬೇಕಿತ್ತು. ವರದಿಯ ಬಗ್ಗೆ ಚರ್ಚೆಗಳಾಗಬೇಕಿತ್ತು. ನದಿಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಕುರಿತು ಚಿಂತನ ಮಂಥನಗಳಿಗೆ ಈ ವರದಿ ನಾಂದಿಯಾಗಬೇಕಿತ್ತು. ಆದರೆ ಇದ್ಯಾವುದೂ ಆಗಿಲ್ಲ, ಯಾರೂ ಈ ವರದಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎನ್ನುವುದು ಬೇಸರದ ಸಂಗತಿ.
ನದಿಗಳನ್ನು ಯಾವೆಲ್ಲ ರೀತಿಯಲ್ಲಿ ಕೆಡಿಸಬಹುದು ಎಂದು ತಿಳಿಯಬೇಕಾದರೆ ನಮ್ಮ ದೇಶದ ನದಿಗಳನ್ನೊಮ್ಮೆ ನೋಡಬೇಕು. ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕುಮಾರಧಾರ ನದಿಯನ್ನು ಯುವ ಸಂಘಟನೆಯೊಂದು ಸ್ವತ್ಛಗೊಳಿಸಿದಾಗ ಸಿಕ್ಕಿದ ಲೋಡುಗಟ್ಟಲೆ ತ್ಯಾಜ್ಯದ ರಾಶಿಯೊಂದೇ ಸಾಕು ನದಿ ಹಾಗೂ ಇತರ ಜಲಮೂಲಗಳನ್ನು ನಾವು ಎಷ್ಟು ಕಡೆಗಣಿಸಿದ್ದೇವೆ ಎಂದು ಅರಿತುಕೊಳ್ಳಲು. ಒಳ ಉಡುಪಿನಿಂದ ಹಿಡಿದು ಮದ್ಯದ ಬಾಟಲಿ ತನಕ ಎಲ್ಲ ತ್ಯಾಜ್ಯ ವಸ್ತುಗಳು ನದಿಯ ಒಡಲಲ್ಲಿದ್ದವು.
ನದಿಯೆಂದರೆ ತ್ಯಾಜ್ಯವನ್ನು ಸುರಿಯುವ ಗುಂಡಿ ಎಂಬ ನಮ್ಮ ಮನೋಧರ್ಮವೇ ನದಿಗಳು ಕೊಳಕಾಗಲು ಮುಖ್ಯ ಕಾರಣ.
ತಾಪಮಾನ ಏರಿಕೆ, ಮಳೆ ಕೊರತೆ ಇತ್ಯಾದಿ ಕಾರಣಗಳಿಂದ ನದಿ ಹಾಗೂ ಇನ್ನಿತರ ಜಲ ಮೂಲಗಳಲ್ಲಿ ನೀರಿನ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಕಳೆದೊಂದು ದಶಕದಲ್ಲಿ ನಮ್ಮ ನದಿಗಳ ನೀರಿನ ಮಟ್ಟದಲ್ಲಿ ಶೇ. 27 ಕುಸಿತವಾಗಿದೆ. ಭವಿಷ್ಯದಲ್ಲಿ ನೀರು ನಾವು ಎದುರಿಸಲಿರುವ ಬಹುದೊಡ್ಡ ಸಮಸ್ಯೆ ಎಂಬುದನ್ನು ಈ ಮಾದರಿಯ ಹಲವು ವರದಿಗಳು ಸೂಚಿಸುತ್ತಿವೆ. ದೇಶದ ಅರ್ಧಕ್ಕರ್ಧ ನದಿಗಳು ಮಲಿನಗೊಂಡಿವೆ ಎನ್ನುವುದು ಸರಕಾರವೇ ಒಪ್ಪಿಕೊಂಡಿರುವ ಸತ್ಯ. ನದಿ ಮಾಲಿನ್ಯದ ವಿಚಾರ ಬಂದಾಗಲೆಲ್ಲ ಗಂಗಾ ನದಿ ಸ್ವತ್ಛತೆ ವಿಷಯ ಪ್ರಸ್ತಾವಕ್ಕೆ ಬರುತ್ತದೆ. ಆರು ರಾಜ್ಯಗಳ ಜೀವನಾಧಾರ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಮಹತ್ವವನ್ನು ಹೊಂದಿರುವ ಗಂಗಾ ನದಿಯನ್ನು ಸ್ವತ್ಛಗೊಳಿಸಲು ಕೇಂದ್ರ ಸರಕಾರ ಅವಿರತ ಪ್ರಯತ್ನಗಳನ್ನು ಮಾಡುತ್ತಿದ್ದರೂ ಅದರ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿಲ್ಲ. ಅನೇಕ ಸಲ ಸರ್ವೋತ್ಛ ನ್ಯಾಯಾಲಯವೇ ಗಂಗಾ ನದಿಯ ಒಂದು ಹನಿ ನೀರು ಕೂಡಾ ಸ್ವತ್ಛವಾಗಿಲ್ಲ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡದ್ದಿದೆ.
ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ಹೊಸ ಬೆಳವಣಿಗೆಯಲ್ಲ. ಹಲವು ವರ್ಷಗಳ ಹಿಂದೆಯೇ ಈ ಕುರಿತು ಅಧ್ಯಯನ ನಡೆಸಿ ಸಂಬಂಧಪಟ್ಟವರ ಗಮನ ಸೆಳೆಯಲಾಗಿತ್ತು. ನದಿಗಳ ಜಲಮೂಲದ ಅತಿಯಾದ ಶೋಷಣೆಯೇ ನೀರಿನ ಮಟ್ಟ ಕಡಿಮೆಯಾಗಲು ಕಾರಣ. ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ನಗರೀಕರಣದ ಮೊದಲ ಬಲಿಪಶುವೇ ನದಿ ಎನ್ನುವುದು ತಿಳಿಯದ ಸಂಗತಿಯಲ್ಲ. ಆದರೆ ಅಭಿವೃದ್ಧಿಯ ನಾಗಾಲೋಟದಿಂದ ಪರಿಸರದ ಮೇಲಾಗುತ್ತಿರುವ ಹಾನಿಯ ಬಗ್ಗೆ ಗಮನ ಹರಿಸುವಷ್ಟು ವ್ಯವಧಾನವಾಗಲಿ, ಇಚ್ಛಾಶಕ್ತಿಯಾಗಲಿ ನಮ್ಮನ್ನಾಳುವವರಿಗೆ ಇಲ್ಲ.
ಜಲ ಆಯೋಗದ ವರದಿ ಪ್ರಮುಖ 12 ನದಿಗಳ ಹೆಸರನ್ನಷ್ಟೇ ಪಟ್ಟಿ ಮಾಡಿದೆ. ವಾಸ್ತವ ವಿಚಾರ ಏನೆಂದರೆ ಈಗಾಗಲೇ ಸಾವಿರಾರು ಚಿಕ್ಕಪುಟ್ಟ ನದಿಗಳು ಬತ್ತಿ ಹೋಗಿ ಅಸ್ತಿತ್ವ ಕಳೆದುಕೊಂಡಿವೆ. ಒಂದು ಕಾಲದಲ್ಲಿ ವರ್ಷದ 365 ದಿನವೂ ಸಮೃದ್ಧವಾಗಿ ಹರಿಯುತ್ತಿದ್ದ ನಮ್ಮ ನೇತ್ರಾವತಿ ನದಿಯ ಈಗಿನ ಪರಿಸ್ಥಿತಿಯೇ ಇದಕ್ಕೊಂದು ಉದಾಹರಣೆ. ನದಿಯಲ್ಲಿ ನೀರೇ ಇಲ್ಲದಿದ್ದರೂ ಈ ನದಿಯನ್ನು ತಿರುಗಿಸುವ ಬೃಹತ್ ಯೋಜನೆಯೊಂದು ಎಲ್ಲ ವಿರೋಧಗಳನ್ನು ಮೆಟ್ಟಿನಿಂತು ಜಾರಿಯಾಗುತ್ತಿದೆ. ಈ ಯೋಜನೆ ಯಾರ ಲಾಭಕ್ಕಾಗಿ ಎನ್ನುವುದು ಕೂಡಾ ಈಗ ರಹಸ್ಯವಾಗಿ ಉಳಿದಿಲ್ಲ.
ನೀರು ದೀರ್ಘಾವಧಿಯಲ್ಲಿ ನಮ್ಮನ್ನು ಬಹಳವಾಗಿ ಕಾಡಲಿರುವ ಒಂದು ಸಮಸ್ಯೆ. ಆದರೆ ಪ್ರಸ್ತುತ ಚುನಾವಣೆಯಲ್ಲಿ ಯಾವ ಪಕ್ಷವೂ ನೀರಿನ ಬಗ್ಗೆ ಮಾತನಾಡುತ್ತಿಲ್ಲ. ಶೇ.75 ಮನೆಗಳ ಆವರಣದಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲ ಎಂದು ನೀತಿ ಆಯೋಗವೇ ಹೇಳಿದ್ದರೂ ಯಾವ ನಾಯಕನೂ ಈ ಬಗ್ಗೆ ಯಾವುದೇ ವಾಗ್ಧಾನ ನೀಡುತ್ತಿಲ್ಲ. ರೈತರ ಎಲ್ಲ ಸಮಸ್ಯೆಗಳ ಮೂಲವೇ ನೀರು. ಆದರೆ ರಾಜಕೀಯ ಪಕ್ಷಗಳೆಲ್ಲ ಸಾಲಮನ್ನಾ, ನಗದು ವರ್ಗಾವಣೆಯಂಥ ಪುಕ್ಕಟೆ ಯೋಜನೆಗಳ ಮೂಲಕ ರೈತನನ್ನು ಖುಷಿಪಡಿಸಲು ಪ್ರಯತ್ನಿಸುತ್ತಿವೆಯೇ ಹೊರತು ಮೂಲ ಸಮಸ್ಯೆಯನ್ನು ಬಗೆಹರಿಸುವ ಕಾರ್ಯಯೋಜನೆಯನ್ನು ಹಾಕಿಕೊಳ್ಳುತ್ತಿಲ್ಲ. ನದಿಗಳೂ ಸೇರಿದಂತೆ ಎಲ್ಲ ಜಲಮೂಲಗಳನ್ನು ಸಂರಕ್ಷಿಸುವುದು ಈಗಿನ ತುರ್ತು ಅಗತ್ಯ.