ಕುಂಬಳೆ: ಜುಲೈ ಹದಿನಾರನ್ನು ವಿಶ್ವದಾದ್ಯಂತ ಹಾವುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಹಾವುಗಳನ್ನು ಸಂರಕ್ಷಿಸುವುದರೊಂದಿಗೆ ಅವುಗಳ ಬಗ್ಗೆ ಜನ ಸಾಮಾನ್ಯರಲ್ಲೂ ಹೆಚ್ಚೆಚ್ಚು ತಿಳುವಳಿಕೆ ಮೂಡುವಂತಾಗಬೇಕೆಂಬ ಮಹತ್ತರ ಉದ್ದೇಶ ದಿನಾಚ ರಣೆಯದ್ದು. ಈ ನಿಟ್ಟಿನಲ್ಲಿ ಕುಂಬಳೆ ಯ ಹೋಲಿ ಫ್ಯಾಮಿಲಿ ಶಾಲೆಯ ಮಕ್ಕಳಿಂದ ವಿನೂತನ ಕಾರ್ಯ ಕ್ರಮವೊಂದು ಜರಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕರಪತ್ರ ವಿತರಣೆ
ಎಲ್ಲ ಹಾವುಗಳು ಕಚ್ಚುವ ಸ್ವಭಾವದವುಗಳಲ್ಲ. ವಿಷದ ಹಾವುಗಳು ಕಚ್ಚಿದರೂ ಹೆಚ್ಚು ವಿಷವನ್ನು ಉಗು ಳುವುದಿಲ್ಲ. ಯಾವುದೇ ಹಾವು ಕಚ್ಚಿದರೂ ಧೈರ್ಯಗೆಡಬಾರದು. ಆಧುನಿಕವಾಗಿ ಉತ್ತಮ ಚಿಕಿತ್ಸೆ ಇದೀಗ ಲಭ್ಯವಿದೆ. ಹಾವುಗಳು ಆಹಾರ ಶೃಂಖಲೆಯ ಪ್ರಧಾನ ಕೊಂಡಿಗಳಾಗಿವೆ ಎಂಬಿತ್ಯಾದಿ ವಿವರವನ್ನೊಳಗೊಂಡ ಕರಪತ್ರಗಳನ್ನು ಹಂಚಿದರು. ಹೀಗೆ ಹೋಲಿ ಫ್ಯಾಮಿಲಿ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕುಂಬಳೆ ಪೇಟೆಯಲ್ಲಿ ವಿಶ್ವ ಹಾವು ದಿನಾಚರಣೆಯನ್ನು ಅರ್ಥವತ್ತಾಗಿ ಆಚರಿಸಿದರು.
ಬಸ್ಸು ಪ್ರಯಾಣಿಕರಿಗೆ, ಆಟೋ ಚಾಲಕರಿಗೆ, ವ್ಯಾಪಾರಸ್ಥರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ಪತ್ರವನ್ನು ಹಂಚಿದರು. ಮಾತ್ರವಲ್ಲ ಹಾವುಗಳನ್ನು ಕಂಡರೆ ಹೊಡೆದು ಬಡಿದು ಕೊಲ್ಲಬಾರದು. ಅವುಗಳಿಗೂ ಜೀವಿಸಲು ಈ ಭೂಮಿಯಲ್ಲಿ ಹಕ್ಕಿದೆ ಎಂಬ ಸಂದೇಶವನ್ನು ಪ್ರಚಾರ ಮಾಡಿ ಮಕ್ಕಳು ಮಾತನಾಡಿದರು.
ಕೇರಳ ರಾಜ್ಯ ಅರಣ್ಯ ಮತ್ತು ವನ್ಯಜೀವಿ ಇಲಾಖೆ ಹಾಗೂ ಮಲಬಾರ್ ಎವಾರ್ನೆಸ್ ಆ್ಯಂಡ್ ರೆಸ್ಕೂé ಸೆಂಟರ್ ಫಾರ್ ವೈಲ್ಡ್ ಕಣ್ಣೂರು ಜೊತೆಗೂಡಿ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಸದಸ್ಯರು ಕಾರ್ಯಕ್ರಮ ಸಂಯೋಜಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿ.ಎಲಿಜಬೆತ್ ಕಾರ್ಯಕ್ರಮ ಉದ್ಘಾಟಿಸಿದರು.
ಅಧ್ಯಾಪಕರಾದ ರಾಜು ಕಿದೂರು, ಕಾರ್ಮೆಲಿ ಜೋನ್ ಮತ್ತು ಜಯಶೀಲ ಸಹಕರಿಸಿದರು.
ಅರಿವು ಮೂಡಲಿ
ಹಾವುಗಳ ಕುರಿತಾದ ಮೂಢನಂಬಿಕೆಗಳನ್ನು ಹೋಗಲಾಡಿಸಲು ಇಂತಹ ಕಾರ್ಯಕ್ರಮಗಳು ಜರಗಬೇಕು. ವಿದ್ಯಾರ್ಥಿಗಳಿಗೆ ಹಾಗೂ ಯುವ ಜನರಿಗೆ ಹಾವು ಪ್ರಪಂಚದ ಅರಿವು ಮೂಡಿಸುವುದರಿಂದ ಜೈವಿಕ ವೈವಿಧ್ಯವನ್ನು ಕಾಪಾಡಲು ನಮ್ಮಿಂದ ಸಾಧ್ಯ.
-ರಾಮ ಪ್ರಕಾಶ್
ಉರಗ ತಜ್ಞರು, ಪೊಸಡಿಗುಂಪೆ