ಕೊಪ್ಪಳ: ಮಾದಕ ವಸ್ತುಗಳಿಂದ ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಎಡಿಸಿ ಸಾವಿತ್ರಿ ಕಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ಸಂರಕ್ಷಣೆಗೆ ತಯಾರಿಸಿರುವ ಮಾದಕ ವಸ್ತುಗಳಿಂದ ಮತ್ತು ಮಾದಕ ವಸ್ತು ಸಾಗಾಣಿಕೆಯಲ್ಲಿ ಮಕ್ಕಳ ರಕ್ಷಣೆ ಕುರಿತಾದ ಜಂಟಿ ಕ್ರಿಯಾಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾದಕ ವಸ್ತುಗಳನ್ನು ಮಕ್ಕಳು ಬಳಸದಂತೆ ಕ್ರಮ ಕೈಗೊಳ್ಳಬೇಕು. ಸಧ್ಯ ಜಾರಿಯಲ್ಲಿರುವ ವಿವಿಧ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಶಾಲಾ, ಕಾಲೇಜು ಮತ್ತು ಶೈಕ್ಷಣಿಕ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ ನಿಷೇಧಿಸಬೇಕು. ಮಾದಕ ವ್ಯಸನಿ ಮಕ್ಕಳ ಚಿಕಿತ್ಸೆ, ಪುನರ ವಸತಿಗಾಗಿ ಜಾರಿಯಲ್ಲಿರುವ ವಿವಿಧ ಯೋಜನೆ ಸೇವೆಯಡಿ ತರಬೇಕು ಎಂದರು.
ಶೈಕ್ಷಣಿಕ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮತ್ತು ಔಷಧಾಲಯಗಳಲ್ಲಿ ಮಕ್ಕಳಿಗೆ ಮಾದಕ ವಸ್ತುಗಳು ಲಭ್ಯವಾಗದಂತೆ ಕಣ್ಗಾವಲನ್ನು ವೃದ್ಧಿಸಬೇಕಾಗಿದೆ. ಮಕ್ಕಳಿಗೆ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಣಿಕೆ ನಿಷೇಧಕ್ಕಾಗಿ ವಿವಿಧ ಕಾನೂನುಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಬಲಪಡಿಸುವ ಜತೆಗೆ ಅವು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಎಲ್ಲಾ ಶಾಲೆಗಗಳಲ್ಲಿ ಸಿಸಿಟಿವಿ ಅಳವಡಿಸಿ, ಅದರ ಮೇಲ್ವಿಚಾರಣೆ ಮಾಡಬೇಕು.
ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳಿಂದ (ಪಿ.ಎಸ್.ಐ) ಸಿಸಿಟಿವಿಗಳ ಪರಿಶೀಲನೆ ಮತ್ತು ಮೇಲ್ವಿಚಾರಣೆ ಮಾಡಬೇಕು. ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವುದು. ಶಾಲೆಗಳಿಗೆ ಅನುಮತಿ ಮತ್ತು ನವೀಕರಿಸುವ ವೇಳೆ ಎಲ್ಲಾ ಅಂಶಗಳನ್ನು ಪಾಲಿಸಿದ ಬಗ್ಗೆ ವರದಿ ಪರಿಶೀಲಿಸಿ ಅನುಮತಿ ನೀಡಬೇಕು. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ಭದ್ರತೆಯಲ್ಲಿ ಕಾನೂನಿನಲ್ಲಿರುವ ಅವಕಾಶಗಳ ಜಾರಿಗೊಳಿಸಬೇಕು. ಶೈಕ್ಷಣಿಕ ಸಂಸ್ಥೆಗಳ ವ್ಯಾಪ್ತಿಯ 100 ಮೀಟರ್ ಒಳಗೆ ಇರುವ ಅಂಗಡಿ ಅಥವಾ ಶಾಪ್ ಗಳ ಪರಿಶೀಲನೆಗೆ ಕ್ರಮ ಜರುಗಿಸಬೇಕು. ಮಾದಕ ವಸ್ತುಗಳಿಂದ ಮಕ್ಕಳ ರಕ್ಷಣೆಗೆ ಕುರಿತಂತೆ ವಿಶೇಷವಾಗಿ ವಸತಿ ಶಾಳೆಗಳ ಮಕ್ಕಳ ಬಗ್ಗೆ ಸಂಬಂಧಪಟ್ಟ ವಸತಿ ನಿಲಯ ಪಾಲಕರು ಕಾಳಜಿ ವಹಿಸಬೇಕು. ಕೋಟಾ ಕಾಯ್ದೆ ಬಗ್ಗೆ ಶಾಲೆ, ಕಾಲೇಜು ಮತ್ತು ಶೈಕ್ಷಣಿಕೆ ಸಂಸ್ಥೆಗಳ ಹೂರಗಡೆ ಗೋಡೆಬರಹ ಬಿಡಿಸುವುದು ಸೇರಿದಂತೆ ಈ ಎಲ್ಲಾ ಅಂಶಗಳ ಪಾಲನೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ, ಡಿವೈಎಸ್ಪಿ ಶರಣಪ್ಪ ಸುಬೇದಾರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ನಿಲೋಫರ್ ಎಸ್.ರಾಮಪೂರಿ, ಬಾಲ ನ್ಯಾಯ ಮಂಡಳಿ ಸದಸ್ಯ ಶೇಖರಗೌಡ ಜಿ.ರಾಮತ್ನಾಳ, ಡಿಡಿಪಿಯು ಮೃಣಲಾ ಸಾಹುಕಾರ, ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ.ನಂದಕುಮಾರ ಎಚ್, ಯುನಿಸ್ಸೆಫ್ ಜಿಲ್ಲಾ ಸಂಯೋಜಕ ಹರೀಶ್ ಜೋಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುರೇಶ ಕೊಕರೇ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.