ಹೆಸರು- ಶಿವಲಿಂಗ ಚಂದ್ರಪ್ಪ ಅಗಸರ
ಸ್ಥಳ- ನಾಗನೂರ ಕೆ.ಎಮ್ ಗ್ರಾಮ, ಹುಕ್ಕೇರಿ
ಸಿನ್ಸ್- 2010
Advertisement
ಪಕ್ಕದೂರಿನ ಫ್ಯಾಕ್ಟರಿಯಲ್ಲಿ ದಿನವಿಡಿ ದುಡಿದರೂ, ಕುಟುಂಬದ ತಿಂಗಳ ಖರ್ಚು ನೀಗಿಸುವುದು ದುಸ್ತರವಾಗುತ್ತಿತ್ತು. ಅಕ್ಕ, ತಮ್ಮ ತಾಯಿ ಹಾಗೂ ಪತ್ನಿ ಜೊತೆ ಸಮಾಲೋಚಿಸಿ ತೋಟದಾಗ ಎಲ್ಲರೂ ಕೂಡಿ ಕೆಲಸ ಮಾಡುವ ನಿರ್ಧಾರ ಕೈಗೊಂಡರು. ಹಾಗೆ, ವಿಷರಹಿತ ಕೃಷಿಯನ್ನು ಅಳವಡಿಸಿಕೊಂಡವರು, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಾಗನೂರ ಕೆ.ಎಮ್ ಗ್ರಾಮದ ಶಿವಲಿಂಗ ಚಂದ್ರಪ್ಪ ಅಗಸರ. ಇವರ ಕೃಷಿ ಪಥಕ್ಕೆ ಬಲ ತುಂಬಿದ್ದು, ಒಳಸುರಿ ಖರ್ಚು ಕಡಿಮೆ ಮಾಡುವ ನಿಟ್ಟಿನಲ್ಲಿ ಅನುಭವಿ, ಅಳವಡಿಕೆ ಮಾಡಿರುವ ಸಾವಯವ ಕೃಷಿಕರ ಒಡನಾಟ. ಕೊಳವೆ ಬಾವಿ ನೀರಿನ ಮೂಲ. ಒಟ್ಟು ಎರಡು ಎಕರೆ ಜಮೀನಿನಲ್ಲಿ ವಿವಿಧ ಬೆಳೆ ವಿನ್ಯಾಸದೊಂದಿಗೆ ಬೆಳೆ ಸಂಗೋಪನೆ, ಹೈನುಗಾರಿಕೆ ಹಾಗೂ ಎರೆಗೊಬ್ಬರ ಉತ್ಪಾದನೆ ಮೂಲಕ ಕೃಷಿಯಲ್ಲಿ ದೃಢ ಹೆಜ್ಜೆ ಊರಿದ್ದಾರೆ ಶಿವಲಿಂಗ ಅಗಸರ.
ನೆಲದ ಮೇಲೆ 18 ಅಡಿ ಉದ್ದ x 7ಅಡಿ ಅಗಲ x 2ಅಡಿ ಎತ್ತರ ವಿನ್ಯಾಸದ ಎರಡು ತೆರೆದ ಕಾಂಪೋಸ್ಟ್ ಘಟಕಗಳಿವೆ. 22ಅಡಿ ಉದ್ದ x 8ಅಡಿ ಅಗಲ x 3ಅಡಿ ಎತ್ತರ ವಿನ್ಯಾಸದ ಎರಡು ಎರೆಹುಳು ಗೊಬ್ಬರ ತಯಾರಿಕೆ ಸಿಮೆಂಟ್ ಜೋಡಿ ತೊಟ್ಟಿಗಳಿವೆ (ಒಟ್ಟು 4). ತೊಟ್ಟಿ ತುಂಬಲು ಬೇಕಾದ ಹಸಿತ್ಯಾಜ್ಯವನ್ನು ತಮ್ಮಲ್ಲಿ ಲಭ್ಯವಿರುವ ಹಾಗೂ ಅಕ್ಕಪಕ್ಕದ ರೈತರು ಹೊರ ಚೆಲ್ಲುವ ಸೋಯಾ, ಕಡಲೆ ತ್ಯಾಜ್ಯ, ಕಳೆಕಸ, ಕಬ್ಬಿನ ರವದೆಯನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ತಮ್ಮಲ್ಲಿ ಸಾಕಷ್ಟು ಲಭ್ಯ ಇರುವ ಸಗಣಿ ಬಳಕೆ ಮಾಡಿಕೊಳ್ಳುತ್ತಾರೆ. ಬಯೋಗ್ಯಾಸ್ ಬಗ್ಗಡ, ಸಗಣಿ ಹಾಗೂ ಸಂಪೂರ್ಣ ಹಸಿ ತ್ಯಾಜ್ಯದಿಂದ ಸಿದ್ಧಗೊಂಡ ಗೊಬ್ಬರ ನಸುಕಪ್ಪು ಬಣ್ಣ ಹೊಂದಿರುತ್ತದೆ. ಮೂರು ತಿಂಗಳಿಗೆ ಎಲ್ಲ ತೊಟ್ಟಿಗಳಿಂದ 2ರಿಂದ 3 ಟನ್ ಗೊಬ್ಬರ ಸಂಗ್ರಹವಾಗುತ್ತದೆ. ತೇವಾಂಶ ನಿರ್ವಹಣೆಗೆ ವಿದ್ಯುತ್‌ಚಾಲಿತ ಸಿಂಪಡಕಗಳನ್ನು ತೊಟ್ಟಿ ಮೇಲೆ ಅಳವಡಿಸಿದ್ದಾರೆ. ಒಮ್ಮೆ ತೊಟ್ಟಿ ಭರ್ತಿ ಮಾಡಿ, ಎರೆಹುಳು ಬಿಟ್ಟರೆ ಸಾಕು. ಸಗಣಿ ಪ್ರಮಾಣ ಹೆಚ್ಚಿರುವುದರಿಂದ ಉತ್ಕೃಷ್ಟ ಗೊಬ್ಬರ ಲಭ್ಯ. ತಮ್ಮ ಹೊಲಕ್ಕೆ ಬಳಸಿ, ಉಳಿದ ಗೊಬ್ಬರವನ್ನು ಮಾರಾಟ ಮಾಡುತ್ತಾರೆ.
Related Articles
ಐದು ಗುಂಟೆಯಲ್ಲಿ ಅವರೆ, ಮೆಣಸಿನಕಾಯಿ, ಬದನೆ, ಟೊಮೆಟೋ ಹಾಗೂ ರಾಜಗಿರಿ, ಪಾಲಕ್, ಮೆಂತೆ ಬೆಳೆ ಹಾಕಿದ್ದಾರೆ. ಈ ಕ್ಷೇತ್ರದ ಬದುವಿಗೆ ಒತ್ತೂತ್ತಾಗಿ ಮರಚೊಗಚೆ ಹಾಕಿದ್ದು ಬೆಳೆಗೆ ಭದ್ರತೆ ಹಾಗೂ ಜಾನುವಾರುಗಳಿಗೆ ಮೇವು ಸಿಗುತ್ತದೆ. ಇದರಿಂದ, ಬೆಳೆ ತಿನ್ನಲು ಲಗ್ಗೆ ಇಡುವ ನವಿಲುಗಳಿಂದ ರಕ್ಷಣೆ ಸಿಗುತ್ತದೆ ಎನ್ನುತ್ತಾರೆ ಇವರ ತಾಯಿ ಚಂದ್ರಮ್ಮ. ಐದು ತರಹದ ವಿಭಿನ್ನ ಅವರೆ ತಳಿ ಇವರ ಬಳಿಯಿದೆ. “ಮಣ್ಣು ತಾಕತ್ತಾಗ ಇದ್ದರ ಹುಳ ರೋಗ ಕಾಟ ಕಡಿಮಿ. ಅಕಸ್ಮಾತ ಬಂದರೂ ಬೇವಿನ ಕಷಾಯ, ಮೀನಾಮ್ರತ, ತತ್ತಿ- ಲಿಂಬೆರಸ, ಗೋಮೂತ್ರ, ದಶಪರ್ಣಿಸಾರ ಬಳಸಿ ನಿರ್ವಹಣೆ ಮಾಡುತ್ತೇವೆ’ ಎನ್ನುತ್ತಾರೆ ಸಹೋದರ ಈರಣ್ಣ. ಇವರ ಫಸಲುಗಳಿಗೆ ಸಮೀಪದ ಬೆಳಗಾವಿ ಹಾಗೂ ಸ್ಥಳೀಯ ಮಾರುಕಟ್ಟೆ ಆಧಾರ.
Advertisement
ಕೂಡಿ ದುಡಿದರೆ ಸುಖವುಂಟುಜಾನುವಾರುಗಳಿಗೆ ಮೇವು, ಅವುಗಳಿಂದ ಸಿಗುವ ಸಗಣಿಯಿಂದ ಉತ್ಕೃಷ್ಟ ಗೊಬ್ಬರ ಭೂಮಿಗೆ. ಹಾಲು- ಮನೆ ಬಳಕೆಗೆ ಮಾತ್ರವಲ್ಲದೆ ದಿನದ ಆದಾಯದ ಮೂಲ. ತರಕಾರಿ- ವಾರದ ಆದಾಯವಾದರೆ, ಎರೆಗೊಬ್ಬರ ಇನ್ನಿತರ ಬೆಳೆ ಮಾಸಿಕ, ವಾರ್ಷಿಕ ಲಾಭ. ಎರೆಗೊಬ್ಬರ, ಹಾಲು ಮಾರಾಟ ಹಾಗೂ ತೊಂಡೆ ಕೃಷಿಯಿಂದ ವಾರ್ಷಿಕ ಸರಾಸರಿ ನಾಲ್ಕು ಲಕ್ಷ ರೂ. ಆದಾಯ ಇವರದು. ಕಡಿಮೆ ಹಿಡುವಳಿಯಲ್ಲಿ ವ್ಯವಸ್ಥಿತ ಯೋಜನೆ ಮೂಲಕ ಕುಟುಂಬ ಸದಸ್ಯರೆಲ್ಲ ದುಡಿಮೆ ಮಾಡುವುದರೊಂದಿಗೆ ಸಂಸಾರದಲ್ಲಿ ಸಾಮರಸ್ಯ ಮೂಡಿ, ಸಂತೃಪ್ತ ಜೀವನ ನಡೆಸುವುದು ಸಾಧ್ಯವಾಗಿದೆ ಎನ್ನುವುದು ಶಿವಲಿಂಗ ಅಗಸರ ಅಭಿಪ್ರಾಯ.
ಹೆಚ್ಚಿನ ಮಾಹಿತಿಗೆ: 8749073323 (ಶಿವಲಿಂಗ ) ತೊಂಡೆಯಿಂದ 1.20 ಲಕ್ಷ ರೂ. ಆದಾಯ
2012ರಲ್ಲಿ 11ಗುಂಟೆ ಕ್ಷೇತ್ರದಲ್ಲಿ ತೊಂಡೆಯನ್ನು ನಾಟಿ ಮಾಡಿದ್ದು, ಪ್ರತಿ ಬೇಸಿಗೆಯಲ್ಲಿ ಚಾಟ್ನಿ ಮಾಡಿ ಚಿಗುರಲು ಬಿಡುತ್ತಾರೆ. ಹನಿ ನೀರಿನ ಮೂಲಕ ಯಥೇತ್ಛ ಎರೆಗೊಬ್ಬರ ಸಾರ, ಜೀವಸಾರ ದ್ರವ ಇದಕ್ಕೆ ಮೂಲ ಒಳಸುರಿ. ಕಾಯಿ ಲಭ್ಯತೆ ಮೇರೆಗೆ ವಾರಕ್ಕೆ ಒಂದರಿಂದ ಎರಡು ಬಾರಿ ಕಟಾವು ಮಾಡುತ್ತಾರೆ. ತಿಂಗಳಿಗೆ ಸರಾಸರಿ 10ರಿಂದ 11 ಕ್ವಿಂಟಾಲ್ ತೊಂಡೆಕಾಯಿ ಸಿಗುತ್ತದೆ. ಪ್ರಸ್ತುತ ಕ್ವಿಂಟಾಲ್‌ಗೆ 1600 ರೂ. ದರ ಸಿಗುತ್ತಿದೆ. ಕಳೆದ ವರ್ಷ 11 ಗುಂಟೆ ತೊಂಡೆ ಬೆಳೆಯಿಂದ ಖರ್ಚು ಕಳೆದು ರೂ. 1.20 ಲಕ್ಷ ನಿವ್ವಳ ಆದಾಯ ಸಿಕ್ಕಿದೆ. ಪ್ರಮುಖವಾಗಿ ಕಾಡುವ ಬೂದಿ ರೋಗ ನಿರ್ವಹಣೆಗೆ ಒಂದು ಪಂಪ್‌ಗೆ (16 ಲೀ.) ನುಗ್ಗೆ ತೊಪ್ಪಲಿನ ರಸ 1ಲೀ. 2 ಚಮಚ ಹಿಂಗು ಹಾಗೂ 1 ಲೀ. ಹುಳಿ ಮಜ್ಜಿಗೆ ಬೆರೆಸಿ ಸಿಂಪಡಣೆ ಮಾಡುತ್ತಾರೆ. – ಚಿತ್ರ- ಲೇಖನ: ಶೈಲಜಾ ಬೆಳ್ಳಂಕಿಮಠ