Advertisement
ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾದರೆ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಬಗ್ಗೆ 3 ತಿಂಗಳಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂಬ ತನ್ನ ಆದೇಶವನ್ನೇ ಸರ್ಕಾರ ಪಾಲಿಸುತ್ತಿರಲಿಲ್ಲ. ಇನ್ನೊಂದೆಡೆ, ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವಾಗ ಯಾವುದೇ ಕಾರಣಕ್ಕೂ ಹುದ್ದೆ ರಹಿತವಾಗಿ ಅವರನ್ನು ಇಡುವಂತಿಲ್ಲ ಎಂಬ ಆದೇಶವೂ ಅನೇಕ ಸಂದರ್ಭದಲ್ಲಿ ದಕ್ಷ ಅಧಿಕಾರಿಗಳ ಪಾಲಿಗೆ ಅನ್ವಯವಾಗುತ್ತಿರಲಿಲ್ಲ.
ಸುಪ್ರೀಂ ಕೋರ್ಟ್ ಆದೇಶದಂತೆ ಭ್ರಷ್ಟಾಚಾರ ತಡೆ ಅಧಿನಿಯಮ 1988ರ ಪ್ರಕರಣ 19 ಮತ್ತು ದಂಡ ಪ್ರಕ್ರಿಯಾ ಸಂಹಿತೆ 1973ರ ಪ್ರಕರಣ 197ರ ಅಡಿ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿಕೊಂಡ ಸರ್ಕಾರಿ ಅಧಿಕಾರಿಗಳು, ನೌಕರರ ವಿರುದ್ಧ ಮೊಕದ್ದಮೆ ಹೂಡಲು (ಪ್ರಾಸಿಕ್ಯೂಷನ್) ಅನುಮತಿ ನೀಡುವ ಬಗ್ಗೆ 3 ತಿಂಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಸರ್ಕಾರ 2001 ಮತ್ತು 2015ರಲ್ಲಿ 2 ಬಾರಿ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶ ಕೇವಲ ಕಡತಗಳಿಗೆ ಸೀಮಿತವಾಗಿತ್ತೇ ಹೊರತು ಬಹುತೇಕ ಪ್ರಕರಣಗಳಲ್ಲಿ ಅದರಲ್ಲೂ ಅಧಿಕಾರಿಗಳ ಮಟ್ಟದಲ್ಲಿ ಜಾರಿಯಾಗುತ್ತಲೇ ಇರಲಿಲ್ಲ.
Related Articles
Advertisement
ಪ್ರಕರಣ-2ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ 2013ರಲ್ಲಿ ಆದೇಶ ಹೊರಡಿಸಿದ್ದ ಸರ್ಕಾರ, ವರ್ಗಾವಣೆ ಅಥವಾ ನಿಯೋಜನೆ ಮೇಲೆ ಅಧಿಕಾರಿಗಳನ್ನು ಕಳುಹಿಸುವಾಗ ಯಾವುದೇ ಕಾರಣಕ್ಕೂ ಹುದ್ದೆರಹಿತವಾಗಿರಬಾರದು. ನಿಗದಿತ ಹುದ್ದೆಯೊಂದಿಗೆ ಆತನನ್ನು ನಿಯೋಜಿಸಬೇಕು ಎಂದು ಹೇಳಿತ್ತು. ಒಂದು ವೇಳೆ ಹುದ್ದೆ ತೋರಿಸದಿದ್ದಲ್ಲಿ ಅದಕ್ಕೆ ಲಿಖೀತ ಕಾರಣಗಳನ್ನು ನೀಡಬೇಕು ಎಂದೂ ಸ್ಪಷ್ಟಪಡಿಸಿತ್ತು. ಈ ಕುರಿತು ಎಚ್ಚರಿಸುವ 2017ರಲ್ಲಿ ಸುತ್ತೋಲೆ ಪ್ರಕಟಿಸಿತ್ತು. ಹೀಗಿದ್ದರೂ ಸರ್ಕಾರದ ಆದೇಶ ಪಾಲನೆಯಾಗುತ್ತಿರಲಿಲ್ಲ. ಅದರಲ್ಲೂ ದಕ್ಷ ಅಧಿಕಾರಿಗಳನ್ನು ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗುತ್ತಿತ್ತು. ಕೆಲವರಂತೂ ತಿಂಗಳುಗಟ್ಟಲೆ ಯಾವುದೇ ಹುದ್ದೆ ಅಥವಾ ಕೆಲಸ ಇಲ್ಲದೆ ಇರಬೇಕಿತ್ತು. ಇತ್ತೀಚೆಗೆ ಈ ಅಂಶ ಹೈಕೋರ್ಟ್ ಗಮನಕ್ಕೆ ಬಂದಾಗ, ವರ್ಗಾವಣೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಮತ್ತೂಂದು ಸುತ್ತೋಲೆ ಹೊರಡಿಸಿರುವ ಸರ್ಕಾರ, ಅಧಿಕಾರಿ, ನೌಕರರ ವರ್ಗಾವಣೆ ಅಥವಾ ನಿಯೋಜನೆ ಸಂದರ್ಭದಲ್ಲಿ ಅವರಿಗೆ ಕಡ್ಡಾಯವಾಗಿ ಹುದ್ದೆಗಳನ್ನು ನಿಗದಿಪಡಿಸಬೇಕು. ಹುದ್ದೆಗಳನ್ನು ನಿಗದಿಪಡಿಸದೇ ಇದ್ದಲ್ಲಿ ಅದಕ್ಕೆ ಲಿಖೀತ ಕಾರಣ ಕೊಡಬೇಕು. ಒಂದು ವೇಳೆ ಹುದ್ದೆ ನಿಗದಿಪಡಿಸದೇ ಇದ್ದಲ್ಲಿ ಅಥವಾ ಲಿಖೀತ ಕಾರಣ ಕೊಡದೇ ಇದ್ದಲ್ಲಿ ಅಂತಹ ಅಧಿಕಾರಿ, ನೌಕರ ತನ್ನ ಇಲಾಖಾ ಮುಖ್ಯಸ್ಥರನ್ನು ಭೇಟಿಯಾಗಿ ವಿಷಯ ಗಮನಕ್ಕೆ ತರಬೇಕು. ಇಲಾಖಾ ಮುಖ್ಯಸ್ಥರು ಆ ಅಧಿಕಾರಿ, ನೌಕರನಿಗೆ ಹುದ್ದೆ ನೀಡಬೇಕು. ಇಲ್ಲದೇ ಇದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ
ಸಾಮಾನ್ಯವಾಗಿ ಸರ್ಕಾರದ ಆದೇಶ ಜಾರಿಯಾಗದೇ ಇದ್ದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ನ್ಯಾಯಾಲಯ ಆದೇಶ ಪಾಲಿಸಲು ನಿರ್ದೇಶನ ನೀಡಿದಾಗ ಅದನ್ನು ಪಾಲಿಸದೇ ಇದ್ದಲ್ಲಿ ನ್ಯಾಯಾಂಗ ನಿಂದನೆ ಆರೋಪ ಎದುರಿಸಬೇಕಾಗುತ್ತದೆ. ಇದೀಗ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲು ಮೂರು ತಿಂಗಳ ಕಾಲಮಿತಿ ನಿಗದಿಪಡಿಸಿರುವುದು ಮತ್ತು ವರ್ಗಾವಣೆ ಸಂದರ್ಭದಲ್ಲಿ ಸರ್ಕಾರಿ ನೌಕರ, ಅಧಿಕಾರಿಗಳಿಗೆ ಹುದ್ದೆಗಳನ್ನು ಕಡ್ಡಾಯವಾಗಿ ನೀಡಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಲಾಗಿದ್ದು, ಅದರಲ್ಲಿ ಕೋರ್ಟ್ ಆದೇಶದ ಬಗ್ಗೆಯೂ ಉಲ್ಲೇಖೀಸಿರುವುದರಿಂದ ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಹೀಗಾಗಿ ಈ ಆದೇಶಗಳನ್ನು ಪಾಲಿಸಲೇ ಬೇಕಾಗುತ್ತದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಿರಿಯ ಅಧಿಕಾರಿ ಹೇಳುತ್ತಾರೆ. – ಪ್ರದೀಪ್ ಕುಮಾರ್ ಎಂ.