Advertisement

ಬೆಜ್ಜ ಯಕ್ಷೋತ್ಸವದಲ್ಲಿ ಸಾಧಕ ಸಮ್ಮಾನ

03:43 PM Apr 07, 2017 | Team Udayavani |

ಮಂಜೇಶ್ವರ -ಹೊಸಂಗಡಿಗೆ ಸನಿಹದ ಹಳ್ಳಿ ಬೆಜ್ಜ. ಇಲ್ಲಿ ನಾಡಿನ ಹೆಮ್ಮೆಯ ಕಲೆ ಯಕ್ಷಗಾನ ಕಲಾ ಪ್ರದರ್ಶನ ನಡೆದು ಬಂದ ದಾರಿ ರೋಚಕವಾದದ್ದು.

Advertisement

ಎಂಬತ್ತರ ದಶಕದಲ್ಲಿ ಬೆಜ್ಜ ಪರಿಸರದ ಕಲಾ ಪ್ರೇಮಿಗಳು ತಮ್ಮಷ್ಟಕ್ಕೇ ವಾರದ ಕೂಟಗಳನ್ನು ನಡೆಸುತ್ತಿದ್ದರು. ಬಳಿಕ ಸ್ಥಳೀಯ ವೃತ್ತಿಕಲಾವಿದರನ್ನು ಕರೆಸಿ ನಾಟ್ಯ ತರಗತಿ ಆರಂಭಿಸಿದರು. 1992ರಿಂದ ಬೆಜ್ಜಗುತ್ತು ನಾರಾಯಣ ಹೆಗ್ಡೆ ಮನೆಯವರು ಮುಖ್ಯವಾಗಿ ಉದ್ಯಮಿ ರಾಮಚಂದ್ರ ಹೆಗ್ಡೆಯವರ ನೇತೃತ್ವದಲ್ಲಿ ವಿವಿಧ ಮೇಳಗಳ ಬಯಲಾಟಗಳನ್ನು ಆಯೋಜಿಸುತ್ತಾ ಬಂದರು. 2006ರಲ್ಲಿ ರಾಮಚಂದ್ರ ಹೆಗ್ಡೆ ಕೀರ್ತಿಶೇಷರಾದಾಗ ಅವರ ಸಹೋದರ ಮೋಹನ ಹೆಗ್ಡೆ ಕಲಾಪ್ರೇಮಿಗಳ ಸೇರುವಿಕೆಯೊಂದಿಗೆ ರಾಮಚಂದ್ರ ಹೆಗ್ಡೆ ವೇದಿಕೆ ಎಂಬ ಕಲಾ ವೇದಿಕೆಯನ್ನು ರಚಿಸಿ ಯಕ್ಷೋತ್ಸವವನ್ನು ಮುನ್ನಡೆಸುತ್ತಾ ಬಂದಿದ್ದಾರೆ. 2006ರಿಂದ ವರ್ಷಕ್ಕೊಬ್ಬ ಹಿರಿಯ ಕಲಾವಿದರಿಗೆ ನಿಧಿ ಸಹಿತ ಸಮ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ.

ಇದೀಗ ಎಪ್ರಿಲ್‌ 7, 2017ರಂದು ರಾತ್ರಿ ಬೆಜ್ಜ ಯಕ್ಷೋತ್ಸವದ ಬೆಳ್ಳಿ ಹಬ್ಬ ಜರಗಲಿದ್ದು, “ಬೆಳ್ಳಿ ಗೆಜ್ಜೆ’ ಸ್ಮತಿ ಸಂಚಿಕೆ ಬಿಡುಗಡೆಗೊಳ್ಳಲಿದೆ. ಸಾಲಿಗ್ರಾಮ ಮೇಳದವರಿಂದ “ಸತ್ಯ ಹರಿಶ್ಚಂದ್ರ ಲವಕುಶ’ ಯಕ್ಷಗಾನ ಬಯಲಾಟ ಜರಗಲಿದೆ. ಬಡಗುತಿಟ್ಟಿನ ಖ್ಯಾತ ಭಾಗವತ ಸುರೇಶ ಶೆಟ್ಟಿ ಅವರಿಗೆ ಬೆಳ್ಳಿಹಬ್ಬ ವಿಶೇಷ ಸಮ್ಮಾನ ಹಾಗೂ ತೆಂಕುತಿಟ್ಟಿನ ಹಿರಿಯ ಕಲಾವಿದ ಬೇತ ಕುಂಞ ಕುಲಾಲ್‌ ಅವರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನಗೊಳ್ಳಲಿದೆ.

ಸುರೇಶ ಶೆಟ್ಟಿ  ಶಂಕರನಾರಾಯಣ
ಸುಶ್ರಾವ್ಯ ಕಂಠದ ಭಾಗವತ ಸುರೇಶ ಶೆಟ್ಟಿ ಪೌರಾಣಿಕ -ಸಾಮಾಜಿಕ ಎರಡೂ ಬಗೆಯ ಯಕ್ಷಗಾನ ಪ್ರಸಂಗಗಳ ಭಾಗವತಿಕೆಯಲ್ಲಿ ನಿಪುಣರು. ಕುಂದಾಪುರ ತಾಲೂಕಿನ ಹಿಲಿಯಾಣದವರಾದ ಶೆಟ್ಟರು ಕಾಳಿಂಗ ನಾವಡರ ಭಾಗವತಿಕೆಯಿಂದ ಪ್ರಭಾವಿತರಾಗಿ ಯಕ್ಷಗಾನದತ್ತ ಸೆಳೆಯಲ್ಪಟ್ಟರು. ಕೋಟದ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ಭಾಗವತ ಕೆ.ಪಿ. ಹೆಗ್ಡೆಯವರಲ್ಲಿ ಭಾಗವತಿಕೆ ಕಲಿತರು. ಕಮಲಶಿಲೆ, ಹಾಲಾಡಿ, ಸಾಲಿಗ್ರಾಮ, ಪೆರ್ಡೂರು, ಮುಂತಾದ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ ಶೆಟ್ಟರು ಪೆರ್ಡೂರು ಮೇಳವೊಂದರಲ್ಲೇ ಸುಮಾರು 20 ವರ್ಷ ಭಾಗವತರಾಗಿ ಮೆರೆದವರು. 

ಬೇತ ಕುಂಞ ಕುಲಾಲ್‌
73ರ ಹರೆಯದ ಬೇತ ಕುಂಞ ಕುಲಾಲ್‌ ತೆಂಕುತಿಟ್ಟಿನ  ಪ್ರಾತಿನಿಧಿಕ ಕಲಾವಿದ ರಲ್ಲಿ ಓರ್ವರು. ಯಾವುದೇ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುವ ವಿದ್ಯೆ ಇವರಿಗೆ ಕರತಲಾಮಲಕ. ಸಾಂಪ್ರದಾಯಿಕ ವೇಷಗಳ ಬಗ್ಗೆ ನಿಖರ ಮಾಹಿತಿ ಹೊಂದಿರುವ ಬೇತ ಕುಂಞ ಹಲವಾರು ಕಮ್ಮಟಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗ ವಹಿಸಿದ್ದಾರೆ. ಸುಂಕದಕಟ್ಟೆ ಮೇಳದಲ್ಲಿ ಸುದೀರ್ಘ‌ ಕಾಲ ಪೀಠಿಕೆ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. 

Advertisement

ಕುರಿಯ ವಿಠಲ ಶಾಸ್ತ್ರಿಗಳಿಂದ ಯಕ್ಷಗಾನ ತರಬೇತಿಯನ್ನು ಪಡೆದು ರಂಗ ಪ್ರವೇಶಿಸಿ ಹಂತ ಹಂತವಾಗಿ ಬೆಳೆದು ಬಂದವರು. ಧರ್ಮಸ್ಥಳ, ಮೂಲ್ಕಿ, ಸೌಕೂರು, ಕುತ್ಯಾಳ, ಸುಬ್ರಹ್ಮಣ್ಯ, ಮೇಳಗಳ ತಿರುಗಾಟ ನಡೆಸಿ 33 ವರ್ಷಗಳ ಕಾಲ ಸುಂಕದಕಟ್ಟೆ ಮೇಳವೊಂದರಲ್ಲೇ ದುಡಿದಿದ್ದಾರೆ.

ಯೋಗೀಶ ರಾವ್‌ ಚಿಗುರುಪಾದೆ

Advertisement

Udayavani is now on Telegram. Click here to join our channel and stay updated with the latest news.

Next