Advertisement

ನನೆಗುದಿಗೆ ಬಿದ್ದ ಬ್ರಹ್ಮಾವರ ಕೃಷಿ ಕಾಲೇಜು ಪ್ರಾರಂಭಕ್ಕೆ ಸರಕಾರಕ್ಕೆ ಪ್ರಸ್ತಾವ

11:36 PM Oct 19, 2019 | Sriram |

ಉಡುಪಿ: ಕಳೆದ 9 ವರ್ಷಗಳ ಹಿಂದೆ ಅನುಮೋದನೆಗೊಂಡು ನನೆಗುದಿಗೆ ಬಿದ್ದ ಬ್ರಹ್ಮಾವರ ಕೃಷಿ ಕಾಲೇಜನ್ನು ಪ್ರಾರಂಭಿಸಲು ಅಗತ್ಯವಿರುವ ಕ್ರಮಕೈಗೊಳ್ಳುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

Advertisement

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಸುಮಾರು 48.5 ಕೋ.ರೂ. ವೆಚ್ಚದ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ಡೀನ್‌ ಹುದ್ದೆ 1, ಸಹಾಯಕ ಪ್ರಾಧ್ಯಾಪಕರು 32, ಸಹ ಸಹಾಯಕ ಪ್ರಾಧ್ಯಾಪಕರು 3, ಪ್ರಾಧ್ಯಾಪಕರು 7, ಸಹ ಕುಲಪತಿ 1, ಸಹಾಯಕ ಆಡಳಿತಾಧಿಕಾರಿ 1 ಸೇರಿದಂತೆ ಒಟ್ಟು 99 ಶಿಕ್ಷಕ ಹಾಗೂ ಶಿಕ್ಷಕೇತರ, ಡಿ ಗ್ರೂಪ್‌ ನೌಕರರ ಹುದ್ದೆಗಳ ಮಂಜೂರಾತಿ ಬೇಡಿಕೆ ಇಟ್ಟಿದ್ದಾರೆ.

ಕೃಷಿ ಶಿಕ್ಷಣದ ಕೊರತೆ
ವೈಜ್ಞಾನಿಕ ಕೃಷಿಗೆ ಚಾಲನೆ ದೊರೆಯಬೇಕಾದರೆ ಕೃಷಿ ಸಂಶೋಧನ ಕೇಂದ್ರ, ಕಾಲೇಜುಗಳು ಅಗತ್ಯ. ಆದರೆ ಉಡುಪಿ, ದ.ಕ., ಕೊಡುಗು ಜಿಲ್ಲೆಗಳಲ್ಲಿ ಯಾವುದೇ ಕೃಷಿ ಕಾಲೇಜು ಹಾಗೂ ತೋಟಗಾರಿಕಾ ಕಾಲೇಜುಗಳಿಲ್ಲ. ವಿದ್ಯಾರ್ಥಿಗಳು ಕೃಷಿ ವಿಜ್ಞಾನ ಕಲಿಕೆಯಿಂದ ವಂಚಿತ ರಾಗುತ್ತಿದ್ದಾರೆ.

2010ರಲ್ಲಿ ಕೃಷಿ ಕಾಲೇಜು ಘೋಷಣೆ
2010ರಲ್ಲಿ ಬ್ರಹ್ಮಾವರದಲ್ಲಿ ನಡೆದ ಕರಾವಳಿ ಹಸಿರು ಕವಚ ಯೋಜನೆಯ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಬ್ರಹ್ಮಾವರಕ್ಕೆ ಕೃಷಿ ಕಾಲೇಜು ಘೋಷಣೆ ಮಾಡಿದ್ದರು. ಕಾಲೇಜು ಸ್ಥಾಪನೆಗಾಗಿ ಸುಮಾರು 10 ಕೋ.ರೂ. ಅನುದಾನ ಘೋಷಿಸಿದ್ದು, ಪ್ರಾರಂಭಿಕ ಕಾರ್ಯಗಳಿಗೆ 2010ರಲ್ಲಿ 5 ಕೋ.ರೂ. ಅನುದಾನ ಬಿಡುಗಡೆಯಾಗಿತ್ತು.

ಕೈ ತಪ್ಪಿದ ಅವಕಾಶ
ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಪ್ರಾರಂಭಿಸಲು ಸರಕಾರ ಆದೇಶ ನೀಡಿದ ಸಮಯದಲ್ಲಿ ಬ್ರಹ್ಮಾವರ ಕೃಷಿ ಕೇಂದ್ರ ಬೆಂಗಳೂರು ಕೃಷಿ ವಿವಿಯಿಂದ ಬೇರ್ಪಟ್ಟು ಶಿವಮೊಗ್ಗ ಕೃಷಿ ವಿವಿಯೊಂದಿಗೆ ಸೇರ್ಪಡೆಯಾಗಿತ್ತು. ಈ ಸಂದರ್ಭ ಶಿವಮೊಗ್ಗ ವಿವಿಯಲ್ಲಿ ಕುಲಪತಿ ನೇಮಕಾತಿ ಹಾಗೂ ಬ್ರಹ್ಮಾವರ ಕೃಷಿ ಕಾಲೇಜು ಅನುದಾನ ಪಡೆಯಲು ಬೆಂಗಳೂರು ವಿವಿ ಆಸಕ್ತಿ ತೋರಿಸದ ಕಾರಣ ದಿಂದ ಕೃಷಿ ಕಾಲೇಜು ಪ್ರಾರಂಭ ಕನಸಾಗಿ ಉಳಿಯಿತು.

Advertisement

ಆಚಾರ್ಯರಿಂದ ಮನವಿ
2012ರಲ್ಲಿ ಶಾಸಕ ಕೆ. ರಘುಪತಿ ಭಟ್‌ ಹಾಗೂ ಸಚಿವ ವಿ.ಎಸ್‌. ಆಚಾರ್ಯ ಅವರು ಅಂದಿನ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ‌ರಿಗೆ ಕಾಲೇಜು ಸ್ಥಾಪನೆಗೆ ಅಗತ್ಯವಿರುವ ಅನುದಾನ ಬಜೆಟ್‌ನಲ್ಲಿ ಕಾಯ್ದಿರಿಸುವಂತೆ ಮನವಿಯನ್ನು ಸಲ್ಲಿಸಿದ್ದರು. ಇದೀಗ 7 ವರ್ಷಗಳ ಬಳಿಕ ಮತ್ತೆ ಕೃಷಿ ಕಾಲೇಜಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಪೂರಕವಾದ ಸೌಲಭ್ಯವಿದೆ
ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಪೂರಕವಾದ ಸೌಲಭ್ಯಗಳಿವೆ. ಪ್ರತ್ಯೇಕ ವಿದ್ಯಾರ್ಥಿ ನಿಲಯ ವ್ಯವಸ್ಥೆಯಿದೆ.
 -ಡಾ| ಎಸ್‌.ಯು. ಪಾಟೀಲ್‌, ಕೃಷಿ ಸಂಶೋಧನೆ, ವಿಸ್ತರಣೆ ಸಹಾಯಕ ನಿರ್ದೇಶಕ, ಬ್ರಹ್ಮಾವರ

ಕೃಷಿ ಕಾಲೇಜು ಅಗತ್ಯ
ಜಿಲ್ಲೆಯಲ್ಲಿ ಕೃಷಿಯಿಂದ ಜನರು ವಿಮುಖರಾಗಿದ್ದರಿಂದ ಕೃಷಿ ಭೂಮಿ ಬಳಕೆ ಯಾಗದೇ ಹಾಗೆ ಬಿದ್ದಿದೆ. ಔದ್ಯಮಿಕ ಮಾದರಿ ವೈಜ್ಞಾನಿಕ ಕೃಷಿ ಪದ್ಧತಿ ಅನುಷ್ಠಾನಕ್ಕೆ ಬಂದರೆ ವಿದ್ಯಾ ವಂತ ಯುವಕರನ್ನು ಕೃಷಿ ಕಡೆ ಆಕರ್ಷಿಸಲು ಸಾಧ್ಯ. ಜಿಲ್ಲೆಗೊಂದು ಕೃಷಿ ಕಾಲೇಜು ಇರಬೇಕು ಎನ್ನು ವುದು ಸರಕಾರದ ನೀತಿಯಿದ್ದರೂ ಕರಾವಳಿಯಲ್ಲಿ ಇನ್ನೂ ಕೃಷಿ ಕಾಲೇಜು ಪ್ರಾರಂಭವಾಗಿಲ್ಲ.

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next