Advertisement
9 ಮಂದಿ ಸದಸ್ಯರಿರುವ ಈ ಸಮಿತಿಗೆ ಬೆಂಗಳೂರಿನ ಹೆಬ್ಟಾಳದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರು ಅಧ್ಯಕ್ಷರಾಗಿದ್ದು, ಮೀನುಗಾರಿಕಾ ಕಾಲೇಜಿನ ನಿವೃತ್ತ ಪ್ರೊಫೆಸರ್ ಹಾಗೂ ಪ್ರಸ್ತುತ ನಿಟ್ಟೆ ವಿ.ವಿ.ಯ ಸಂಶೋಧನಾ ಮತ್ತು ಪೇಟೆಂಟ್ ವಿಭಾಗದ ಸಲಹೆಗಾರರಾಗಿರುವ ಪ್ರೊ| ಐ. ಕರುಣಾ ಸಾಗರ್ ಸಹ- ಅಧ್ಯಕ್ಷರಾಗಿರುತ್ತಾರೆ. ದ.ಕ. ಜಿ.ಪಂ. ಸಿಇಒ ಡಾ| ಕುಮಾರ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕರು, ಕೃಷಿ ವಿ.ವಿ. ಕುಲ ಸಚಿವರು, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿ.ವಿ.ಯ ಕುಲ ಸಚಿವರು, ಮೀನುಗಾರಿಕಾ ಕಾಲೇಜಿನ ಡೀನ್ ಪ್ರೊ| ಸೆಂಥಿಲ್ ವೇಲ್, ಕಾಲೇಜಿನ ಮುಖ್ಯಸ್ಥ ಡಾ| ಆಂಜನಪ್ಪ ಸಮಿತಿಯ ಸದಸ್ಯರಾಗಿರುತ್ತಾರೆ. ಮೀನುಗಾರಿಕಾ ನಿರ್ದೇಶನಾಲಯದ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಈ ಸಮಿತಿಯು ಮೀನುಗಾರಿಕಾ ಕಾಲೇಜನ್ನು ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯದಿಂದ ಪ್ರತ್ಯೇಕಿಸಿ ಮೀನುಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾನಿಲಯ ಸ್ಥಾಪಿಸುವ ಬಗ್ಗೆ ಅಥವಾ ಪ್ರಸ್ತುತ ಸಂಯೋಜನೆಗೊಂಡಿರುವ ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯದ ಅಧೀನದಲ್ಲಿಯೇ ಮುಂದುವರಿಸುವ ಬಗ್ಗೆ ವರದಿಯನ್ನು 2022ರ ಜನವರಿ 31 ರೊಳಗೆ ಸರಕಾರಕ್ಕೆ ಸಲ್ಲಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಒಂದೊಮ್ಮೆ ಮೀನುಗಾರಿಕಾ ಕಾಲೇಜನ್ನು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯದಿಂದ ಪ್ರತ್ಯೇಕಿಸಿ ಮೀನುಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಬಹುದಾದಲ್ಲಿ ಸೂಕ್ತ ಸಲಹೆ, ಸೂಚನೆಗಳನ್ನು ವರದಿಯಲ್ಲಿ ಉಲ್ಲೇಖೀಸಬೇಕು. ಅಲ್ಲದೆ ವರದಿ ಸಲ್ಲಿಸುವ ಮೊದಲು ಮೀನುಗಾರಿಕಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಮತ್ತು ಕಾಲೇಜಿನ ಪ್ರಸ್ತುತ ವಿದ್ಯಾರ್ಥಿಗಳ ಸಂಘದ ಅಭಿಪ್ರಾಯವನ್ನು ಪಡೆಯಬೇಕೆಂದು ಸೂಚಿಸಲಾಗಿದೆ.
Related Articles
ಮೀನುಗಾರಿಕಾ ಕಾಲೇಜನ್ನು ವಿ.ವಿ.ಯಿಂದ ಪ್ರತ್ಯೇಕಿಸಿ ಮಿನುಗಾರಿಕೆ ವಿಜ್ಞಾನ ವಿಶ್ವ ವಿದ್ಯಾನಿಲಯದ ಬದಲು ಮೀನುಗಾರಿಕಾ ಸಂಶೋಧನಾ ಮತ್ತು ತಂತ್ರಜ್ಞಾನ ಸಂಸ್ಥೆ (ಸ್ವಾಯತ್ತ)ಯನ್ನಾಗಿ ಸ್ಥಾಪಿಸುವ ಬಗ್ಗೆ ಪರಿಶೀಲಿಸಿ, ಸಾಧಕ ಬಾಧಕಗಳ ಬಗ್ಗೆ ವರದಿಯನ್ನು ಸಲ್ಲಿಸುವಂತೆ 7 ಮಂದಿ ಸದಸ್ಯರ ಸಮಿತಿಯನ್ನು ರಚಿಸಿ ಡಿ. 1ರಂದು ಸರಕಾರ ಆದೇಶ ಹೊರಡಿಸಿತ್ತು. ಆದರೆ ಈ ಸಮಿತಿಯ ಬಗ್ಗೆ ಗೊಂದಲ ಹಾಗೂ ಸರಕಾರದ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ಹಾಗಾಗಿ ಸರಕಾರ ಡಿ. 1ರ ಆದೇಶವನ್ನು ಹಿಂಪಡೆದು ಸೋಮವಾರ (ಡಿ.20) ಪುನರ್ ಆದೇಶವನ್ನು ಹೊರಡಿಸಿದೆ. ಈ ಪರಿಷ್ಕೃತ ಆದೇಶದಲ್ಲಿ ಮೀನುಗಾರಿಕಾ ಸಂಶೋಧನಾ ಮತ್ತು ತಂತ್ರಜ್ಞಾನ ಸಂಸ್ಥೆ (ಸ್ವಾಯತ್ತ) ಸ್ಥಾಪನೆಯ ಬಗ್ಗೆ ಪ್ರಸ್ತಾವ ಇಲ್ಲ. ಬದಲಾಗಿ ವಿಶ್ವ ವಿದ್ಯಾನಿಲಯ ಸ್ಥಾಪನೆಯ ಕುರಿತಂತೆ ವರದಿ ಸಲ್ಲಿಸಲು ಮಾತ್ರ ಪ್ರಸ್ತಾವ ಇದೆ. ಮೊದಲು ರಚಿಸಲಾಗಿದ್ದ ಸಮಿತಿಯಲ್ಲಿ 7 ಮಂದಿ ಇದ್ದರೆ, ಈಗಿನ ಸಮಿತಿಯಲ್ಲಿ 9 ಮಂದಿ ಇದ್ದಾರೆ.
Advertisement
ಗಮನ ಸೆಳೆದಿದ್ದ ಉದಯವಾಣಿಮಂಗಳೂರಿನ ಮೀನುಗಾರಿಕಾ ಕಾಲೇಜನ್ನು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯದಿಂದ ಪ್ರತ್ಯೇಕಿಸಿ ಮೀನುಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸುವ ಅಗತ್ಯತೆ ಕುರಿತಂತೆ ಉದಯವಾಣಿ ಈ ಹಿಂದೆ ವರದಿಯನ್ನು ಪ್ರಕಟಿಸಿತ್ತು. ಕರಾವಳಿ ಭಾಗದಲ್ಲಿ ಪ್ರಮುಖವಾಗಿ ನಡೆಯುತ್ತಿರುವ ಮೀನುಗಾರಿಕೆಗೆ ಸಂಬಂಧಿಸಿದ ವಿಶ್ವ ವಿದ್ಯಾನಿಲಯ ಕರಾವಳಿಯಲ್ಲಿದ್ದರೆ ಇಲ್ಲಿನ ಜನರಿಗೆ ಅನುಕೂಲ. ಅದು ದೂರದ ಬೀದರ್‌ನಲ್ಲಿರುವುದರಿಂದ ಮೀನುಗಾರರಿಗೆ ಯಾವುದೇ ರೀತಿಯಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಆದುದರಿಂದ ಅದು ಬೇಗನೆ ಮಂಗಳೂರಿಗೆ ಬರಬೇಕೆಂದು ಆಗ್ರಹಿಸಲಾಗಿತ್ತು.