Advertisement

ಪುತ್ತೂರಿನಲ್ಲಿ ಮಣ್ಣು ಪರೀಕ್ಷೆ ಕೇಂದ್ರಕ್ಕೆ ಪ್ರಸ್ತಾವ

01:20 PM Feb 06, 2022 | Team Udayavani |

ಪುತ್ತೂರು: ಕೃಷಿಯಲ್ಲಿ ಮಣ್ಣಿನ ಗುಣ ಧರ್ಮಗಳನ್ನು ತಿಳಿಯುವ ಸಲುವಾಗಿ ಪುತ್ತೂರಿನಲ್ಲಿ ಮಣ್ಣು ಪರೀಕ್ಷಾ ಕೇಂದ್ರ ತೆರೆಯುವ ನಿಟ್ಟಿನಲ್ಲಿ ಪ್ರಸ್ತಾವ ಸಲ್ಲಿಸಲಾಗಿದೆ.

Advertisement

ಜಂಟಿ ಕೃಷಿ ನಿರ್ದೇಶಕರ ಮೂಲಕ ಕೃಷಿ ಆಯುಕ್ತರ ಕಚೇರಿಗೆ ಕೇಂದ್ರ ನಿರ್ಮಾಣದ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಜನಪ್ರತಿನಿಧಿಗಳು ಒತ್ತಡ ಹೇರಿದರೆ ಕೃಷಿ ಆಧಾರಿತ ತಾಲೂಕಿನ ಜನರ ಬಹುದಿನದ ಬೇಡಿಕೆ ಈಡೇರಲಿದೆ.

ಜಿಲ್ಲಾ ಕೇಂದ್ರದ ಆಸರೆ:

ರೈತರು ಮಣ್ಣಿನ ಗುಣಮಟ್ಟ ತಿಳಿಯದೆ ಯಥೇತ್ಛವಾಗಿ ರಸಗೊಬ್ಬರ ಬಳಸುತ್ತಿದ್ದಾರೆ. ಇದರಿಂದ ಭೂಮಿಯ ಸಾರ ಹಾಳಾಗುತ್ತಿದೆ. ಆದ್ದ ರಿಂದ ಈ ಪರೀಕ್ಷೆ ಕೇಂದ್ರದಲ್ಲಿ ಮಣ್ಣನ್ನು ವಿಶ್ಲೇಷಣೆಗೊಳಪಡಿಸಿ, ಪೋಷಕಾಂಶಗಳ ಲಭ್ಯತೆಯ ಬಗ್ಗೆ ಅರಿತುಕೊಳ್ಳಲಾಗುತ್ತದೆ. ಆದರೆ ಜಿಲ್ಲಾ ಕೇಂದ್ರದಲ್ಲಿ ಮಾತ್ರ ಪರೀಕ್ಷ ಕೇಂದ್ರಗಳಿರುವ ಕಾರಣ ಬಹುತೇಕ ಕೃಷಿಕರು ಇದರ ಉಸಾಬರಿಯೇ ಬೇಡ ಎಂದು ಸುಮ್ಮನಾಗುತ್ತಿದ್ದಾರೆ.

ವರದಿಗೆ ವಾರ ಕಾಯಬೇಕು :

Advertisement

ಪುತ್ತೂರು, ಸುಳ್ಯ ತಾ|ನ ಎರಡು ಸೊಸೈಟಿಗಳಲ್ಲಿ ಖಾಸಗಿ ಪರೀಕ್ಷ ಕೇಂದ್ರಗಳಿವೆ. ಆದರೆ ತಾ| ಕೇಂದ್ರದಲ್ಲಿ ಸರಕಾರಿ ಮಣ್ಣು ಪರೀಕ್ಷ ಕೇಂದ್ರ ಇಲ್ಲ. ಪುತ್ತೂರು, ಸುಳ್ಯದ ಕೃಷಿಕರು ಮಣ್ಣನ್ನು ತೆಗೆದುಕೊಂಡು ಜಿಲ್ಲಾ ಕೇಂದ್ರಕ್ಕೆ ತೆರಳಿದರೆ ಅಲ್ಲಿಂದ ವರದಿ ಸಿಗಲು ವಾರವೇ ಹಿಡಿಯುತ್ತದೆ. ಇಲಾಖೆಯ ಮೂಲಕ ಕಳು ಹಿಸುವ ಅವಕಾಶ ಇದ್ದರೂ, ನೇರವಾಗಿ ರೈತರು ಕೊಂಡು ಹೋಗಲೂಬಹುದು. ಇವೆರೆಡು ಪ್ರಕ್ರಿಯೆ ತತ್‌ಕ್ಷಣಕ್ಕೆ ಆಗದು. ಏಕೆಂದರೆ ಇಡೀ ಜಿಲ್ಲೆಯ ಕೃಷಿ ಭೂಮಿಗೆ ಸಂಬಂಧಿಸಿದ ಮಣ್ಣು ತಪಾಸಣೆ ಜಿಲ್ಲಾ ಕೇಂದ್ರದಲ್ಲಿ ನಡೆಯುವ ಕಾರಣ ಗುಣ ಮಟ್ಟದ ವರದಿ ಕೈ ಸೇರಲು ವಿಳಂಬವಾಗು ತ್ತಿದೆ.

ಮಣ್ಣು ಮಾದರಿ ಸಂಗ್ರಹ ಹೇಗೆ? :

ಮಣ್ಣಿನ ವಿಶ್ಲೇಷಣೆಗೆ ಸುಮಾರು ಅರ್ಧ ಕೆ.ಜಿ. ಮಣ್ಣು ಸಾಕಾಗುತ್ತದೆ. ಸಂಗ್ರಹಿಸಿದ ಎಲ್ಲ ಮಣ್ಣಿನ ಉಪ ಮಾದರಿಗಳನ್ನು ಮಿಶ್ರಣ ಮಾಡಿ ಅಗಲವಾದ ಪಾಲಿಥಿನ್‌ ಹಾಳೆಯ ಮೇಲೆ ಸುರಿದು, ಸಮವಾಗಿ ಹರಡಿ ನಾಲ್ಕು ಭಾಗಗಳಾಗಿ ಮಾಡಿ ಗುರುತು ಹಾಕಲಾಗುತ್ತದೆ. ಕೆಲವು ಪ್ರಕ್ರಿಯೆ ನಡೆದ ಬಳಿಕ ಪ್ಲಾಸ್ಟಿಕ್‌ ಚೀಲ ಅಥವಾ ಬಟ್ಟೆಯಲ್ಲಿ ಮಣ್ಣನ್ನು ತುಂಬಿ, ಅದರ ಮೇಲೆ ರೈತನ ಹೆಸರು, ಗ್ರಾಮ, ತಾಲೂಕು, ಮಣ್ಣಿನ ಮಾದರಿ ಅನುಕ್ರಮ ಸಂಖ್ಯೆ, ಸರ್ವೇ ನಂಬರ್‌, ಮಣ್ಣಿನ ನಮೂನೆ, ಮಾದರಿಯನ್ನು ತೆಗೆದ ಆಳ, ಮೂರು ವರ್ಷಗಳಲ್ಲಿ ಬೆಳೆದ ಬೆಳೆಗಳು, ಬಳಸಿದ ಗೊಬ್ಬರಗಳು ಹಾಗೂ ನೀರಾವರಿ ಮತ್ತು ಬೆಳೆಯಲು ಉದ್ದೇಶಿಸಿರುವ ಬೆಳೆಗಳು ಸೇರಿದಂತೆ ಎಲ್ಲ ವಿವರಗಳನ್ನು ದಾಖಲಿಸಿ, ಪ್ರಯೋಗಾಲಯಕ್ಕೆ ಕಳುಹಿಸಿ ಮಣ್ಣಿನ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ.

ರೈತರಿಗೆ ಪೋಷಕಾಂಶಗಳ ತಿಳಿವಳಿಕೆ :

ಮಣ್ಣು ಪರೀಕ್ಷೆ ಕೇಂದ್ರದಲ್ಲಿ ಮಣ್ಣಿನ ಫಲವತ್ತತೆಗೆ ಸಂಬಂಧಿಸಿದಂತೆ ಸಾರಜನಕ,ರಂಜಕ, ಪೊಟಾಷ್‌, ರಸಸಾರ, ಸಾವಯವ ಇಂಗಾಲ, ಲಭ್ಯವಿರುವ ಗಂಧಕ, ಸತು, ಬೋರಾನ್‌, ಕಬ್ಬಿಣ, ಮ್ಯಾಂಗನೀಸ್‌ ಹಾಗೂ ತಾಮ್ರದ ಅಂಶಗಳು ಯಾವ ಪ್ರಮಾಣದಲ್ಲಿವೆ ಎಂಬುದನ್ನು ಆಂಶಿಕವಾಗಿ ವಿಶ್ಲೇಷಣೆ ಮಾಡಲಾಗುತ್ತದೆ. ಪರೀಕ್ಷೆ ಅನಂತರ ರೈತರಿಗೆ ನೀಡಿರುವ “ಮಣ್ಣು ಆರೋಗ್ಯ ಚೀಟಿ’ಯಲ್ಲಿ ಎಲ್ಲ ವಿವರಗಳನ್ನು ದಾಖಲಿಸಲಾಗುತ್ತದೆ. ಮಣ್ಣಿನ ಫಲವತ್ತತೆಗೆ ಅನುಗುಣವಾಗಿ ರೈತರು ಬಳಸಬೇಕಿರುವ ಗೊಬ್ಬರ ಹಾಗೂ ಪೋಷಕಾಂಶಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ.

ಭವಿಷ್ಯದಲ್ಲಿ ಜಿಲ್ಲಾ ಕೇಂದ್ರವಾಗಲಿರುವ ಪುತ್ತೂರಿನಲ್ಲಿ ಮಣ್ಣು ಪರೀಕ್ಷ ಕೇಂದ್ರ ತೆರೆಯಲು ಕೃಷಿ ಇಲಾಖೆಗೆ ಸೂಚಿಸಲಾಗಿದೆ. ಇದರಿಂದ ಕೃಷಿಕರು ಜಿಲ್ಲಾ ಕೇಂದ್ರಕ್ಕೆ ತೆರಳಬೇಕಾದ ಪ್ರಮೇಯ ತಪ್ಪಲಿದೆ. ಜತೆಗೆ ಪ್ರತಿ ಕೃಷಿಕನಿಗೆ ತನ್ನ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಲು ಅವಕಾಶ ಸಿಗುತ್ತದೆ. -ಸಂಜೀವ ಮಠಂದೂರು,  ಶಾಸಕರು, ಪುತ್ತೂರು

ಪುತ್ತೂರಿನಲ್ಲಿ ಮಣ್ಣು ಪರೀಕ್ಷ ಕೇಂದ್ರ ತೆರೆಯವಂತೆ ಶಾಸಕರು ಸೂಚಿಸಿದ ಹಿನ್ನೆಲೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಮೂಲಕ ಕೃಷಿ ಆಯುಕ್ತರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. -ನಾರಾಯಣ ಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕ,ಪುತ್ತೂರು ತಾಲೂಕು

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next