Advertisement
ನಗರದಲ್ಲಿ ಕ್ಯಾರಿ ಬ್ಯಾಗ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ 50 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಉತ್ಪಾದನೆ, ಬಳಕೆಗೆ ಕೂಡ ನಿಷೇಧವಿದೆ. ಆದರೂ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ. ಕೋವಿಡ್ ಸಂದರ್ಭ ಹೊಟೇಲ್‌ಗಳಿಂದ ಊಟ, ತಿಂಡಿ ಪಾರ್ಸೆಲ್ ಪ್ರಮಾಣ ಹೆಚ್ಚಳ, ಪ್ಲಾಸ್ಟಿಕ್ ವಿರುದ್ಧ ಅಧಿಕಾರಿಗಳ ಕಾರ್ಯಾಚರಣೆ ಸ್ಥಗಿತ ಮೊದಲಾದವುಗಳು ಇದಕ್ಕೆ ಕಾರಣ.
Related Articles
Advertisement
ಈ ಹಿಂದೆ ಕದ್ರಿ ಮಾರ್ಕೆಟ್ ಕಟ್ಟಡದಲ್ಲಿ “ಪ್ಲಾಸ್ಟಿಕ್ ಕಲೆಕ್ಷನ್ ಸೆಂಟರ್’ ಇತ್ತು. ಅಲ್ಲಿ ಸಾರ್ವಜನಿಕರಿಂದ ಕ್ಯಾರಿಬ್ಯಾಗ್ ಸಹಿತ ಎಲ್ಲ ರೀತಿಯ ಪ್ಲಾಸ್ಟಿಕ್‌ಗಳನ್ನು ಖರೀದಿಸಲಾಗುತ್ತಿತು. ಆದರೆ ಕಟ್ಟಡವನ್ನು ಕೆಡವಿದ ಅನಂತರ ಈಗ ಸ್ಥಳಾವಕಾಶವಿಲ್ಲ. ಅದೇ ರೀತಿಯ ಕಲೆಕ್ಷನ್ ಸೆಂಟರ್ ಮಾಡಲು ಪಾಲಿಕೆ ವ್ಯಾಪ್ತಿಯಲ್ಲಿ ಅವಕಾಶ ನೀಡಬೇಕು ಎಂದು ಪ್ಲಾಸ್ಟಿಕ್ ಉತ್ಪಾದನ ಸಂಸ್ಥೆಯವರು ಪಾಲಿಕೆಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಪಾಲಿಕೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಕಾರ್ಯಾಚರಣೆ ಚುರುಕು :
ಪ್ಲಾಸ್ಟಿಕ್ ನಿರ್ವಹಣೆ ಬಗ್ಗೆ ಎನ್‌ಜಿಟಿ ಕೂಡ ಮಾಹಿತಿ ಕೇಳಿದೆ. ಹಸಿ, ಒಣಕಸವನ್ನು ವಿಂಗಡಿಸಿ ನೀಡುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಪ್ಲಾಸ್ಟಿಕ್‌ನ ವಿಂಗಡಣೆ, ರಿಸೈಕಲಿಂಗ್ ಪಚ್ಚನಾಡಿ ಯಲ್ಲಿಯೂ ನಡೆಯುತ್ತದೆ. ನಿಷೇಧಿತ ಪ್ಲಾಸ್ಟಿಕ್ ಮಾರಾಟ, ಬಳಕೆ ಕಂಡು ಬಂದರೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಹೆಚ್ಚಿಲಾಗುವುದು ಎಂದು ಮನಪಾ ಪರಿಸರ ಎಂಜಿನಿಯರ್ ಮಧು ಮನೋಹರ್ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಬರುವುದು ಎಲ್ಲಿಂದ? :
ನಿಷೇಧಿತ ಪ್ಲಾಸ್ಟಿಕ್‌ಗಳ ಉತ್ಪಾದನೆ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿಲ್ಲ. ಆದರೆ ಮುಂಬಯಿ, ಬೆಂಗಳೂರು ಕಡೆಯಿಂದ ಯಥೇಚ್ಛವಾಗಿ ಜಿಲ್ಲೆಗೆ ಪ್ಲಾಸ್ಟಿಕ್ ಪೂರೈಕೆಯಾಗುತ್ತಿದೆ. ಪ್ಲಾಸ್ಟಿಕ್ ನಿಷೇಧ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಾದರೆ ಈ ರೀತಿ ಬೇರೆ ರಾಜ್ಯ, ಜಿಲ್ಲೆಗಳಿಂದ ಬರುವ ಪ್ಲಾಸ್ಟಿಕ್ ಅನ್ನು ನಿರ್ಬಂಧಿಸಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧ ಶೇ. 100ರಷ್ಟು ಕಷ್ಟಸಾಧ್ಯವಾದ್ದರಿಂದ ಅದರ ವಿಲೇವಾರಿಗೂ ಅಗತ್ಯ ಕ್ರಮ ಕೈಗೊಳ್ಳಬೇಕು. ಕಲೆಕ್ಷನ್ ಸೆಂಟರ್ ಮಾಡಿದರೆ ಜನರೇ ಸ್ವಯಂ ಆಗಿ ತಂದುಕೊಡಲು ಆಸಕ್ತಿ ತೋರಿಸಬಹುದು ಎನ್ನುವುದು ಪ್ಲಾಸ್ಟಿಕ್ ಉತ್ಪಾದಕರ ಅಭಿಪ್ರಾಯ.
ಬೇಡಿಕೆ ಪರಿಗಣನೆ : ಪ್ಲಾಸ್ಟಿಕ್ ಕಲೆಕ್ಷನ್ ಸೆಂಟರ್‌ಗೆ ಸ್ಥಳಾವಕಾಶ ನೀಡಲು ಬೇಡಿಕೆ ಬಂದಿದೆ. ಇದನ್ನು ಪರಿಗಣಿಸಿ ಪಾಲಿಕೆಗೆ ಸಂಬಂಧಿಸಿದ ಕಟ್ಟಡದಲ್ಲಿ ಸೂಕ್ತ ಸ್ಥಳಾವಕಾಶ ಒದಗಿಸಿಕೊಡುತ್ತೇವೆ. -ಅಕ್ಷಯ್ ಶ್ರೀಧರ್, ಆಯುಕ್ತರು, ಮನಪಾ
ನಿರ್ವಹಣೆಗೆ ಸಿದ್ಧ : ನಿಷೇಧಿತ ಪ್ಲಾಸ್ಟಿಕ್‌ಗಳು ಜಿಲ್ಲೆಗೆ ಪೂರೈಕೆಯಾಗದಂತೆ ನೋಡಿಕೊಳ್ಳಬೇಕು. ಪ್ಲಾಸ್ಟಿಕ್‌ನಿಂದ ಮಾಡುವ ಪ್ರಮುಖ ಕಂಪೆನಿಗಳ ತಿಂಡಿಪೊಟ್ಟಣಗಳನ್ನು ನಿಷೇಧಿಸಬೇಕು. ಪ್ಲಾಸ್ಟಿಕ್ ಬಳಕೆ ತಡೆಯುವ ಜತೆಗೆ ಬಳಕೆಯಾದ ಪ್ಲಾಸ್ಟಿಕ್‌ನ ಸಮರ್ಪಕ ವಿಲೇವಾರಿಯೂ ಅಗತ್ಯ. ಇದಕ್ಕೆ ಕಲೆಕ್ಷನ್ ಸೆಂಟರ್ ಪೂರಕ. ಇಂತಹ ಸೆಂಟರ್‌ನ್ನು ನಿರ್ವಹಿಸಲು ಅಸೋಸಿಯೇಶನ್ ಸಿದ್ಧವಿದೆ. ಈ ಬಗ್ಗೆ ಈಗಾಗಲೇ ಪಾಲಿಕೆಗೆ ಪ್ರಸ್ತಾವ ಸಲ್ಲಿಸಿದ್ದೇವೆ. -ಬಿ.ಎ. ನಝೀರ್, ಅಧ್ಯಕ್ಷರು, ಕೆನರಾ ಪ್ಲಾಸ್ಟಿಕ್ ಉತ್ಪಾದಕರ ಸಂಘ, ಮಂಗಳೂರು