ದಾವಣಗೆರೆ: ಜಿಲ್ಲೆಯಲ್ಲಿ ಪ್ರವಾಸಿ ಪರಿವೀಕ್ಷಣಾ ಕೇಂದ್ರ ಮಾಡಬೇಕೆಂಬ ಉದ್ದೇಶದಿಂದ ಸುಮಾರು 35 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಭಾನುವಾರ ಹರಿಹರದ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಸ್ವಚ್ಛತೆ ಹಾಗೂ ಆರೋಗ್ಯ ಸುರಕ್ಷತೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಿಂದ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಬಳಿಕ ಅನುಮೋದನೆಗೊಳ್ಳಲಿದೆ. ಇದಕ್ಕಾಗಿ ಜಿಲ್ಲೆಯ ಜನಪ್ರತಿನಿಧಿಗಳು ಕೈ ಜೋಡಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆಗೆ ಏನೇನು ಅವಶ್ಯಕತೆ ಇದೆಯೋ ಅದರ ಕುರಿತು ನೀಲನಕ್ಷೆ ಸಿದ್ದಪಡಿಸುವ ಮೂಲಕ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯು ರಾಜ್ಯದ ಹೃದಯ ಭಾಗದಲ್ಲಿದ್ದು ಪ್ರಮುಖ ಸಂಪರ್ಕದ ಕೊಂಡಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಪಾಲಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕುಂಠಿತಗೊಂಡಿದ್ದು, ಚುರುಕುಗೊಳಿಸುವ ನಿಟ್ಟಿನಲ್ಲಿ ಎಲ್ಲೆಡೆ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದೆ ಎಂದರು.
ಹರಿಹರ ಲಿಂಗೇಶ್ವರ ದೇವಸ್ಥಾನ, ಸಂತೆಬೆನ್ನೂರಿನ ಪುಷ್ಕರಣಿ, ತೀರ್ಥರಾಮೇಶ್ವರ, ಶಾಂತಿಸಾಗರ ಹಾಗೂ ಕೊಂಡಜ್ಜಿ ಕೆರೆಗಳು ಜಿಲ್ಲೆಯಲ್ಲಿ ಮಹತ್ವ ಪಡೆದ ಐದು ಐತಿಹಾಸಿಕ ಪ್ರಸಿದ್ಧ ಸ್ಥಳಗಳಾಗಿವೆ. ಜಿಲ್ಲಾ ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ 20 ಕ್ಕಿಂತ ಅಧಿಕ ಸ್ಥಳಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ 25 ಕ್ಕಿಂತ ಹೆಚ್ಚು ಐತಿಹಾಸಿಕ ಸ್ಥಳವಿದೆ ಎಂದು ತಿಳಿಸಿದರು.
ಹರಿಹರ ತಾಲೂಕು ತಹಶೀಲ್ದಾರ್ ರಾಮಚಂದ್ರಪ್ಪ,ಹರಿಹರ ನಗರಸಭೆ ಸದಸ್ಯ ಸಿದ್ದೇಶ್, ನಗರಸಭೆ ಪೌರಾಯುಕ್ತೆ ಲಕ್ಷ್ಮೀ, ಪುರಾತತ್ವ ಇಲಾಖೆಯ ಸುಧೀರ್, ಆರೋಗ್ಯ ಇಲಾಖೆಯ ಉಮಣ್ಣ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಬಿ.ಟಿ. ಪ್ರಕಾಶ್, ರೇವಣಸಿದ್ಧಪ್ಪ ಅಂಗಡಿ, ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.
ಕೋವಿಡ್ ದಿಂದಾಗಿ ರಜೆ ಮರೆಯುತ್ತಿದ್ದೇವೆ. ಎಲ್ಲ ದಿನ ಕೊರೊನಾ ದಿನವಾಗಿದ್ದು, ಪ್ರತಿದಿನ ಕೋವಿಡ್ ಕುರಿತು ಯೋಚಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕೊರೊನಾಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ ನಂತರ ಇತರ ಕೆಲಸ ಮಾಡಬೇಕಾಗಿದೆ. ಕೊರೊನಾ ಕುರಿತು ಸಂದೇಶ ಇರುವಂತಹ ವಿಡಿಯೋಗಳನ್ನು ಜನರಿಗೆ ತಲುಪಿಸಿ ಅವರಲ್ಲಿನ ತಪ್ಪು ಕಲ್ಪನೆ ದೂರವಾಗಿಸಬೇಕಿದೆ.-
ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ