ಪಾಟ್ನಾ: ರೈಲ್ವೆ ನೇಮಕಾತಿ ನಿಯಮದಲ್ಲಿ ಬದಲಾವಣೆ ಮಾಡಿದ್ದನ್ನು ವಿರೋಧಿಸಿ ವಿದ್ಯಾರ್ಥಿಗಳು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ರೈಲ್ವೆಯ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಸುಟ್ಟುಹಾಕಿರುವ ಘಟನೆ ನಡೆದಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಟೆಸ್ಟ್ ನಾಯಕರಾಗಬಲ್ಲ ನಾಲ್ಕೈದು ಆಟಗಾರರು ಭಾರತ ತಂಡದಲ್ಲಿದ್ದಾರೆ: ಬ್ರೆಟ್ ಲೀ
ಬಿಹಾರದ ಅರಾ, ಗಯಾ, ನವಾದಾ, ಸೀತಾಮಹ್ರಿ ರೈಲ್ವೆ ನಿಲ್ದಾಣಗಳಲ್ಲಿನ ಪ್ರಾಪರ್ಟಿಯನ್ನು ಸುಟ್ಟುಹಾಕಲಾಗಿದೆ. ನವಾದಾ ರೈಲ್ವೆ ನಿಲ್ದಾಣವೊಂದರಲ್ಲಿಯೇ ಮೂರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ.
ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ನವಾದಾ ಮತ್ತು ಸೀತಾಮಹ್ರಿ ರೈಲ್ವೆ ನಿಲ್ದಾಣದಲ್ಲಿನ ಕಾರ್ಮಿಕರು ಗಾಯಗೊಂಡಿದ್ದಾರೆ. ನಾಲ್ವರು ಸರ್ಕಾರಿ ಉದ್ಯೋಗಿಗಳು ಸೇರಿದಂತೆ ರೈಲ್ವೆ ರಕ್ಷಣಾ ದಳದ ಸಿಬಂದಿಗಳು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಘಟನೆಯಲ್ಲಿ ಮೂವರು ರೈಲ್ವೆ ಪೊಲೀಸರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ ಚಾರ್ಜ್ ಆಗಿದ್ದಾರೆ. ಸೀತಾಮಹ್ರಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದು, ಈ ಕುರಿತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ನವಾದಾ ಪ್ರದೇಶದಲ್ಲಿ 32 ವಿದ್ಯಾರ್ಥಿಗಳು, ಜೇಹಾನಾಬಾದ್ ನಲ್ಲಿ 22, ಸೀತಾಮಹ್ರಿಯಲ್ಲಿ 13, ಗಯಾದಲ್ಲಿ ಎಂಟು ವಿದ್ಯಾರ್ಥಿಗಳು ಸೇರಿದಂತೆ ಈವರೆಗೆ 55 ಮಂದಿಯನ್ನು ಬಂಧಿಸಲಾಗಿದೆ. ಗಯಾದಲ್ಲಿ ಪ್ರಯಾಣಿಕರ ರೈಲಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿ ತಿಳಿಸಿದೆ.