Advertisement
ಮಾರ್ಗದರ್ಶಿ ಮೌಲ್ಯವು ಆಸ್ತಿಯ ನೋಂದಣಿ ಶುಲ್ಕ, ಸ್ಟಾಂಪ್ ಪೇಪರ್ ಸುಂಕ, ಆಸ್ತಿ ತೆರಿಗೆಗಳ ಮೇಲೆ ನೇರ ಪರಿಣಾಮ ಬೀರುವುದರಿಂದ ಕೋಲಾರ ತಾಲೂಕಿಗೆ ಸಂಬಂಧಿಸಿದಂತೆ ಆಸ್ತಿ ಮೌಲ್ಯಗಳ ಪರಿಷ್ಕರಣೆಯು ಸಾರ್ವಜನಿಕರಲ್ಲಿ ಮಿಶ್ರ ಭಾವನೆಯನ್ನು ಮೂಡಿಸುತ್ತಿದೆ. ಕೆಲವರು ಪರಿಷ್ಕರಣೆ ಕಾರ್ಯವನ್ನು ಸ್ವಾಗತಿಸುತ್ತಿದ್ದರೆ ಕೆಲವರು ವಿಪರೀತ ಹೆಚ್ಚಳ ಮಾಡಲಾಗಿದೆಯೆಂದು ದೂರುತ್ತಿದ್ದಾರೆ.
Related Articles
Advertisement
ಮಾರ್ಗಸೂಚಿ ಪರಿಷ್ಕರಣೆಗೆ ವಿವಿಧ ಮಾನದಂಡಗಳು: ಆಸ್ತಿಯ ಮಾರ್ಗಸೂಚಿ ಮೌಲ್ಯವನ್ನು ಪರಿಷ್ಕರಿಸಲು ಈ ಬಾರಿ ಹಲವಾರು ಮಾನದಂಡ ಬಳಸಲಾಗಿದೆ. ಕೃಷಿ ಭೂಮಿ, ಖುಷ್ಕಿ, ನೀರಾವರಿ, ಕೈಗಾರಿಕಾ ಪ್ರದೇಶ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆಗಳು, ವಾಣಿಜ್ಯ ಪ್ರದೇಶಗಳು, ವಸತಿ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಆಸ್ತಿ ಮೌಲ್ಯವನ್ನು ಪರಿಷ್ಕರಿಸಲಾಗಿದೆ. ಹಿಂದಿನ 5 ವರ್ಷಗಳಲ್ಲಿ ಆಯಾ ಪ್ರದೇಶಗಳಲ್ಲಿ ನಡೆದಿರುವ ಆಸ್ತಿಗಳ ಮಾರಾಟ ಮೌಲ್ಯವನ್ನು ಪರಿಷ್ಕರಣೆ ಸಂದರ್ಭದಲ್ಲಿ ಗಮನಿಸಲಾಗಿದೆ. ಕೋಲಾರ 35 ವಾರ್ಡ್‌ಗಳಲ್ಲಿ 16 ನೇ ವಾರ್ಡು ಸೇರಿದಂತೆ 10 ವಾಣಿಜ್ಯ ವಾರ್ಡುಗಳಲ್ಲಿ ಮಾತ್ರವೇ ಆಸ್ತಿ ಮೌಲ್ಯವನ್ನು ಶೇ.25 ರಷ್ಟು ಹೆಚ್ಚಿಸಲಾಗಿದೆ. ಉಳಿದ ವಾರ್ಡುಗಳಲ್ಲಿ ಇದರ ಹೆಚ್ಚಳದ ಪ್ರಮಾಣ ಕೇವಲ ಶೇ.5 ರಷ್ಟಾಗಿದೆ. ನರಸಾಪುರ ಮತ್ತು ವೇಮಗಲ್ ನಡುವೆ ಬರುವ ಗ್ರಾಮಗಳ ಆಸ್ತಿ ಮೌಲ್ಯಗಳಲ್ಲಿ ಶೇ.25 ರಿಂದ 50ರಷ್ಟು ಹೆಚ್ಚಳವಾಗಿದೆ. ಹಾಗೆಯೇ ಕೋಲಾರ ಮುಳಬಾಗಿಲು, ಬಂಗಾರಪೇಟೆ ಮತ್ತಿತರೆಡೆ ಶೇ.20ರಷ್ಟು ಮೌಲ್ಯ ಹೆಚ್ಚಾಗಿದೆ. ಕೆಲವೆಡೆ ಶೇ.58ರಿಂದ 100ರ ಆಸುಪಾಸಿನಲ್ಲಿ ಮೌಲ್ಯ ಪರಿಷ್ಕರಿಸಲಾಗಿದೆ.
ಗುರಿ ಮೀರಿ ಆದಾಯ :
ಆಸ್ತಿಗಳ ಮಾರ್ಗಸೂಚಿ ಮೌಲ್ಯವು ಪರಿಷ್ಕರಣೆಯಾಗುತ್ತಿರುವುದರಿಂದ ಅ.1 ರಿಂದ ಆರಂಭದ ಕೆಲವು ತಿಂಗಳುಗಳು ನೋಂದಣಿ ಕಾರ್ಯವು ಕೊಂಚ ಕಡಿಮೆಯಾಗುವ ಸಾಧ್ಯತೆಗಳಿವೆ. ಆನಂತರ ಪರಿಷ್ಕೃತ ದರಗಳಿಗೆ ಜನರು ಹೊಂದಿ ಕೊಳ್ಳುವ ಸಾಧ್ಯತೆಗಳಿವೆ. ಪರಿಷ್ಕೃತ ದರಗಳಿಂದಾಗಿ ರಾಜ್ಯದಲ್ಲಿ 20 ಸಾವಿರ ಕೋಟಿ ಆದಾಯ ಹೆಚ್ಚಳ ನಿರೀಕ್ಷೆ ಮಾಡಲಾಗಿದೆ. ಈಗಾಗಲೇ ಉಪ ನೋಂದಣಾಧಿಕಾರಿಗಳ ಕಚೇರಿಗೆ ನಿಗದಿಪಡಿಸಿರುವ ವಾರ್ಷಿಕ ಗುರಿಯನ್ನು ಮೀರಿ ನೋಂದಣಿ ಕಾರ್ಯ ನಡೆದು ಆದಾಯ ಸಂಗ್ರಹಣೆಯಲ್ಲೂ ಗುರಿ ಮೀರಿ ಸಾಧನೆ ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ನೋಂದಣಿಗೆ ತರಾತುರಿ:
ಸರ್ಕಾರವು ಅ.1ರಿಂದ ಹೊಸ ಪರಿಷ್ಕೃತ ದರಗಳಲ್ಲಿ ಆಸ್ತಿ ನೋಂದಣಿ ನಡೆಸಲು ಆದೇಶಿಸಿರುವುದರಿಂದ ಉಳಿದಿ ರುವ ದಿನಗಳಲ್ಲಿ ಹಿಂದಿನ ಕಡಿಮೆ ದರಗಳಲ್ಲಿಯೇ ಆಸ್ತಿ ನೋಂದಣಿ ಮಾಡಿಕೊಳ್ಳಲು ಖರೀದಿದಾರರು ಮುಗಿ ಬೀಳುತ್ತಿದ್ದಾರೆ. ಇದೇ ಕಾರಣಕ್ಕಾಗಿಯೇ ರಾಜ್ಯ ಸರ್ಕಾರವು ನಾಲ್ಕನೇ ಶನಿವಾರವಾದ ಸೆ.23 ರಂದು ರಜೆ ನೀಡದೆ ನೋಂದಣಿ ಕಚೇರಿಯನ್ನು ತೆರೆದಿಟ್ಟಿತ್ತು. ಕಚೇರಿಯ ವೇಳಾಪಟ್ಟಿಯನ್ನು ಬೆಳಗ್ಗೆ 8 ರಿಂದ ರಾತ್ರಿ 8 ರವರೆವಿಗೂ ನಡೆಸಲು ಅವಕಾಶ ಕಲ್ಪಿಸಿದೆ.
ಆಕ್ಷೇಪಣೆಗಳಿಗೆ ಅವಕಾಶ:
ಸರ್ಕಾರವು ವಿವಿಧ ಮಾನದಂಡಗಳ ಆಧಾರದ ಮೇಲೆ ಆಸ್ತಿಗಳ ಮಾರ್ಗಸೂಚಿ ಮೌಲ್ಯವನ್ನು ಪರಿಷ್ಕರಿಸಿ ಅದರ ಪಟ್ಟಿಯನ್ನು ಈಗಾಗಲೇ ರಾಜ್ಯದ ಆಯಾ ಉಪನೋಂದಣಾಧಿಕಾರಿಗಳ ಕಚೇರಿಯ ನೋಟಿಸ್ ಬೋರ್ಡಿನಲ್ಲಿ ಪ್ರಕಟಿಸಿದೆ. ಈ ಮೌಲ್ಯಗಳ ಕುರಿತು ಯಾರಿಗಾದರೂ ಆಕ್ಷೇಪಣೆಗಳಿದ್ದರೆ ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಇದೀಗ ಆಕ್ಷೇಪಣೆ ಸಲ್ಲಿಕೆಯ ಅವಧಿಯೂ ಪೂರ್ಣಗೊಂಡಿದೆ. ಕೋಲಾರ ತಾಲೂಕಿಗೆ ಸಂಬಂಧ ಪಟ್ಟಂತೆ ಕೇವಲ ಒಂದೆರೆಡು ಆಕ್ಷೇಪಣೆಗಳು ಮಾತ್ರವೇ ಸಲ್ಲಿಕೆಯಾಗಿರುವುದರಿಂದ ಬಹುತೇಕ ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಮಾರ್ಗಸೂಚಿ ಮೌಲ್ಯಗಳು ಅ.1 ರಿಂದ ಜಾರಿಗೆ ಬರುವುದು ಖಚಿತವಾಗಿದೆ.
ಆಯಾ ಕಾಲಕ್ಕೆ ತಕ್ಕಂತೆ ಆಸ್ತಿಗಳ ಮಾರ್ಗಸೂಚಿ ಮೌಲ್ಯವನ್ನು ಸರ್ಕಾರ ಪರಿಷ್ಕರಿಸುತ್ತಿರುವುದು ಸ್ವಾಗತ. ಆದರೆ, ಹಿಂದಿನಂತೆ ಸರಾಸರಿ ಶೇ.5ರಿಂದ ಶೇ.20 ಪರಿಷ್ಕರಿ ಸದೆ, ಇದನ್ನೂ ಮೀರಿ ಶೇ.100 ವರೆಗೂ ಹೆಚ್ಚಳ ಮಾಡಿ ಪರಿಷ್ಕರಣೆ ಮಾಡಿ ರುವುದರ ಹೊರೆ ಅಕ್ಟೋಬರ್ 1ರಿಂದ ಸಾರ್ವಜನಿಕರ ಮೇಲೆಯೇ ಬೀಳುತ್ತದೆ. -ಶ್ರೀನಿವಾಸ್, ನಾಗರಿಕ, ಕೋಲಾರ
5 ವರ್ಷಗಳ ಆಸ್ತಿ ಮಾರಾಟ ವಹಿವಾಟು ಇನ್ನಿತರ ಅನೇಕ ಮಾನದಂಡಗಳ ಆಧಾರದ ಮೇಲೆ ಆಸ್ತಿಗಳ ಮಾರ್ಗಸೂಚಿ ಮೌಲ್ಯಗಳನ್ನು ಪರಿಷ್ಕರಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳ ಆಹ್ವಾನಿಸಲಾಗಿತ್ತು. ಆಕ್ಷೇಪಣೆಗಳ ಅವಧಿ ಮುಕ್ತಾಯವಾಗಿದ್ದು, ಅ.1ರಿಂದ ಪರಿಷ್ಕೃತ ದರಗಳಲ್ಲಿಯೇ ನೋಂದಣಿ ಕಾರ್ಯ ನಡೆಯುತ್ತದೆ. ಆಸ್ತಿಗಳ ಮಾರುಕಟ್ಟೆ ವಹಿವಾಟು ಆಧಾರದ ಮೇಲೆ ಶೇ.5 ರಿಂದ ಶೇ.100ರವರೆಗೂ ಮಾರ್ಗಸೂಚಿ ಮೌಲ್ಯ ಪರಿಷ್ಕರಿಸಲಾಗಿದೆ. ಇದರಿಂದ ಸರ್ಕಾರ ನಿಗದಿಪಡಿಸಿರುವ ಗುರಿ ಮೀರಿ ನೋಂದಣಿ ಆದಾಯ ಸಂಗ್ರಹವಾಗುವ ನಿರೀಕ್ಷೆ ಇದೆ. -ಎಂ.ಪ್ರಸಾದ್ ಕುಮಾರ್, ಹಿರಿಯ ಉಪನೋಂದಣಾಧಿಕಾರಿ, ಕೋಲಾರ ತಾಲೂಕು.
– ಕೆ.ಎಸ್.ಗಣೇಶ್