Advertisement

ವಿಷಪ್ರಸಾದ ಸ್ವಾಮೀಜಿಗೆ ಶಿಕ್ಷಣ ಸಂಸ್ಥೆಯ ಆಸ್ತಿ ವರ್ಗಾವಣೆ

04:06 PM May 17, 2019 | pallavi |

ಕೊಳ್ಳೇಗಾಲ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹನೂರು ತಾಲೂಕಿನ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಾಲಯದ ವಿಷಪ್ರಸಾದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸಾಲೂರು ಮಠದ ಕಿರಿಯ ಸ್ವಾಮಿ ಇಮ್ಮಡಿ ಮಹದೇವಸ್ವಾಮಿಗೆ ಮಠದ ಶಿಕ್ಷಣ ಸಂಸ್ಥೆಯ 2.44 ಎಕರೆ ಜಾಗ ಖಾತೆ ಆಗಿರುವ ಪ್ರಕರಣ ಕಂಡು ಬಂದಿದೆ. ತಾಲೂಕಿನ ಲಿಂಗಣಾಪುರ ಗ್ರಾಮದ ಸರ್ವೆ ನಂ. 203ರಲ್ಲಿರುವ ಜಮೀನನ್ನು ಮಹದೇವಸ್ವಾಮಿ ಹೆಸರಿಗೆ ಇದೇ ಮೇ 3ರಂದು ಖಾತೆ ಮಾಡಿಕೊಡಲಾಗಿದೆ. ಈ ಸಂಬಂಧ ಪಹಣಿ ಕೂಡ ನೀಡಲಾಗಿದೆ. ಹರಳೆ ಗ್ರಾಮದ ಆರ್‌ಟಿಐ ಕಾರ್ಯಕರ್ತ ಎಂ. ದಶರಥ್‌ ಅವರು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಪಡೆದ ಮಾಹಿತಿಯಲ್ಲಿ ಈ ವಿಷಯಗಳು ಬಯಲಾಗಿವೆ.

Advertisement

ಲಿಂಗಣಾಪುರ ಸರ್ವೆ ನಂಬರ್‌ 203ರಲ್ಲಿ ಪ್ರೌಢಶಾಲೆ ಕಾರ್ಯನಿರ್ವಹಿಸುತ್ತಿದೆ. ಮಹದೇವಪ್ರಭು ಎಂಬುವವರು ಸಾಲೂರು ಮಠ ನಿರ್ವಹಿಸುತ್ತಿರುವ ಮಲೆ ಮಹದೇಶ್ವರ ಕೃಪಾ ವಿದ್ಯಾಸಂಸ್ಥೆಯ ಆಗಿನ ಕಾರ್ಯದರ್ಶಿಯಾಗಿದ್ದ ಮಹದೇವಸ್ವಾಮಿ ಅವರ ಹೆಸರಿಗೆ 1997ರಲ್ಲಿ ಜಮೀನು ನೋಂದಣಿ ಮಾಡಿದ್ದರು. ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಕೃತ ಪಾಠವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.

1997ರಲ್ಲಿ ನೊಂದಣಿ ಆಗಿದ್ದರೂ ಆಸ್ತಿ ಮ್ಯುಟೇಷನ್‌ ಪ್ರಕ್ರಿಯೆಗೆ ಒಳಪಡೆದೆ ಇರುವುದು ಅನುಮಾನಕ್ಕೆ ಆಸ್ಪದವಾಗಿದೆ. ಭೂಮಿ ತಂತ್ರಾಂಶದಲ್ಲಿ ಅರ್ಜಿ ಅಳವಡಿಸುವ ಸಂಬಂಧ 2018 ರಲ್ಲಿ ವಿಷಪ್ರಸಾದ ದುರಂತ ನಡೆಯುವುದಕ್ಕೂ ಮುಂಚೆ ಇಮ್ಮಡಿ ಮಹದೇವಸ್ವಾಮಿ ಖಾತೆ ಬದಲಾವಣೆಗೆ ಅರ್ಜಿ ನೀಡಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ತಹಶೀಲ್ದಾರ್‌ ಅವರಿಗೆ ಜನವರಿ ತಿಂಗಳಲ್ಲಿ ಪತ್ರ ಬರೆದಿದ್ದ ಕೊಳ್ಳೇಗಾಲ ಉಪವಿಭಾಗಾಧಿಕಾರಿ ಯವರು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಖಾತೆ ಬದಲಾವಣೆ ಮಾಡಿಕೊಡುವಂತೆ ಬಡವರು ಅರ್ಜಿಗಳನ್ನು ಸಲ್ಲಿಸಿದರೆ ಅಧಿಕಾರಿಗಳು ಮೀನಮೇಷ ಎಣಿಸುತ್ತಾರೆ. ಆದರೆ, ಸ್ವಾಮೀಜಿಯವರ ಹೆಸರಿಗೆ ಖಾತೆ ಬದಲಾವಣೆ ಅತಿ ಶೀಘ್ರದಲ್ಲಿ ಆಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಅಧಿಕಾರಿಗಳಿಗೆ ಇಮ್ಮಡಿ ಮಹದೇವಸ್ವಾಮಿ ಕ್ರಿಮಿನಲ್ ಕೃತ್ಯದ ಆರೋಪಿಯಗಿ ಜೈಲಿನಲ್ಲಿರುವುದು ತಿಳಿದಿದ್ದರೂ, ಅದನ್ನು ತಡೆ ಹಿಡಿಯದೇ ಖಾತೆ ಮಾಡಿಕೊಟ್ಟಿದ್ದಾರೆ. ಕೂಡಲೇ ಕಂದಾಯ ಇಲಾಖೆಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ದಶರಥ್‌ ಒತ್ತಾಯಿಸಿದ್ದಾರೆ.

ಟ್ರಸ್ಟ್‌ ಆಸ್ತಿ ಕಾರ್ಯದರ್ಶಿಯ ಹೆಸರಿನಲ್ಲಿ ಇದ್ದು, ಅದರ ಖಾತೆಯನ್ನು ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿರವರ ಹೆಸರಿಗೆ ಖಾತೆ ಮಾಡಿಸುವುದರಲ್ಲಿ ಯಾವುದೇ ತರಹದ ಅವ್ಯವಹಾರ ನಡೆದಿಲ್ಲ. ಆದೇಶವು ಕ್ರಮಬದ್ಧವಾಗಿದೆ.
●ನಿಖೀತಾ ಚಿನ್ನಸ್ವಾಮಿ, ಉಪ ವಿಭಾಗಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next