ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ 1ರಿಂದ ಯಾವುದೇ ಆಸ್ತಿ ತೆರಿಗೆ ಹೆಚ್ಚಳ ಆಗುವುದಿಲ್ಲ. ಈ ಬಗ್ಗೆ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿಯ ವಿಡಿಯೋಗಳನ್ನು ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಹರಿಬಿಡುತ್ತಿದ್ದು, ಇಂತಹ ಸುದ್ದಿಗಳಿಗೆ ಯಾರು ಕೂಡ ಕಿವಿಗೊಡಬೇಡಿ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಜತೆಗೆ ಸುಳ್ಳು ಸುದ್ದಿ ಅಪ್‌ಲೋಡ್ ಮಾಡಿ ಜಾಲತಾಣದಲ್ಲಿ ಹರಿಬಿಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರನ್ನು ಕೋರಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ತುಷಾರ್ ಗಿರಿನಾಥ್, ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ 1ರಿಂದಲೇ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಲಾಗುತ್ತಿದೆ ಎಂಬ ಕೆಲವು ಕಪೋಕಲ್ಪಿತ ವಿಡಿಯೋಗಳು ಹರಿದಾಡುತ್ತಿರು ವುದು ಬಿಬಿಎಂಪಿಯ ಗಮನಕ್ಕೆ ಬಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯಲ್ಲಿ ಯಾವುದೇ ಹೆಚ್ಚಳ ಮಾಡುತ್ತಿಲ್ಲ. ತೆರಿಗೆ ಹೆಚ್ಚಳ ಬಗ್ಗೆ ಆತಂಕ ಪಡುವ ಆಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅನುರಾಗ್ ಸಿಂಗ್ ಎಂಬ ವ್ಯಕ್ತಿಯಿಂದ ಸುಳ್ಳು ಮಾಹಿತಿ: ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಅನುರಾಗ್ ಸಿಂಗ್ ಎಂಬ ವ್ಯಕ್ತಿ ಕಳೆದ ಮಾ.13ರಂದು ಕರ್ನಾಟಕದಲ್ಲಿ ತೆರಿಗೆ ಹೆಚ್ಚಳವಾಗಲಿದೆ ಎಂಬ ವಿಡಿಯೋ ಒಂದನ್ನು ಹರಿದುಬಿಟ್ಟಿದ್ದಾರೆ.
ಈ ವಿಡಿಯೋದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಬಾಡಿಗೆ ಮನೆಗಳ ಮೇಲಿನ ಆಸ್ತಿ ತೆರಿಗೆಯನ್ನು 2 ಪಟ್ಟು ಮತ್ತು ವಾಣಿಜ್ಯ ಸಂಸ್ಥೆಗಳಿಗೆ 3-5 ಪಟ್ಟು ಹೆಚ್ಚಿಸುವುದು ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಮಾತನಾಡಿ ದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಹೇಳಿರುವ ಅಂಶಗಳು ಸತ್ಯಕ್ಕೆ ದೂರವಾಗಿದ್ದಾಗಿದೆ ಎಂದು ಹೇಳಿದ್ದಾರೆ.
ಗಾಬರಿ ಬೇಡ: ಯಾವುದೇ ಕಾರಣಕ್ಕೂ ಆಸ್ತಿ ತೆರಿಗೆ ಯಲ್ಲಿ ಹೆಚ್ಚಳವಾಗುವುದಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಏ.1ರಿಂದ ಯಾವುದೇ ಆಸ್ತಿ ತೆರಿಗೆ ಯನ್ನು ಹೆಚ್ಚಳ ಆಗುವುದಿಲ್ಲ. ಆಸ್ತಿ ತೆರಿಗೆಯನ್ನು 2016ರಲ್ಲಿ ಪರಿಷ್ಕರಿಸಲಾಗಿದ್ದು, ಆ ದರದಂತೆಯೇ ಪ್ರಸ್ತುತ ಆಸ್ತಿ ತೆರಿಗೆ ದರಗಳು ಚಾಲ್ತಿಯಲ್ಲಿರುತ್ತದೆ ಹಾಗೂ ಮುಂದುವರಿಯಲಿವೆ. ಈ ಬಗ್ಗೆ ಆಸ್ತಿ ತೆರಿಗೆದಾರರು ಯಾವುದೇ ರೀತಿಯಲ್ಲಿ ಗಾಬರಿ ಆಗುವುದು ಬೇಡ ಎಂದು ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರಿಗೆ ಪತ್ರ: ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುವ ಸುಳ್ಳು ಸುದ್ದಿಗಳ ಮೇಲೆ ಸಾರ್ವಜನಿಕರು ಜಾಗೃತರಾಗಿರಬೇಕು. ಪಾಲಿಕೆ ಆಸ್ತಿ ತೆರಿಗೆ ವಿಚಾರದಲ್ಲಿ ಸುಳ್ಳು ಸುದ್ದಿ ಹರಿಬಿಡುವವರ ಮೇಲೆ ನಿಯಮಾನುಸಾರ ಕಾನೂನು ಕ್ರಮ ವಹಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ.
ನಾಗರೀಕರು ಇಂತಹ ಯಾವುದೇ ಸುಳ್ಳು ಸುದ್ದಿಗಳಿಗೆ ಮಣೆ ಹಾಕಬೇಡಿ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮನವಿ ಮಾಡಿದ್ದಾರೆ.