ಬೆಂಗಳೂರು: ಆಸ್ತಿ ನೋಂದಣಿ ಪ್ರಕ್ರಿಯೆ ಸರಳೀಕರಣಗೊಳಿಸಿ, ಕೇವಲ 20 ನಿಮಿಷಗಳಲ್ಲಿ ನೋಂದಣಿ ಮಾಡುವ ನೂತನ ಪದ್ಧತಿಯನ್ನು ನ.1ರಿಂದ ಜಾರಿಗೊಳಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಂದಾಯ ಇಲಾಖೆಯು ಕಾವೇರಿ-2 ಎಂಬ ತಂತ್ರಾಂಶ ಸಿದ್ಧಪಡಿಸಿದ್ದು, ಮನೆಯಲ್ಲಿ ಕುಳಿತೇ ಆನ್‌ಲೈನ್ ಮೂಲಕ ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಕಾವೇರಿ -2 ತಂತ್ರಾಂಶವು ಅಡೆತಡೆರಹಿತ, ಸುಗಮ, ಸರಳ, ತಾಂತ್ರಿಕ ದೋಷ ರಹಿತ ನೋಂದಣಿ ಪ್ರಕ್ರಿಯೆಯಾಗಿದೆ. ಅರ್ಜಿ ಜತೆ ದಾಖಲೆ ಸಲ್ಲಿಸಿದರೆ ಉಪನೋಂದಣಾಧಿಕಾರಿಗಳು ಪರಿಶೀಲಿಸುತ್ತಾರೆ. ಅದರಲ್ಲಿ ಏನಾದರೂ ಕೊರತೆ ಇದ್ದರೆ, ತಪ್ಪಿದ್ದರೆ ಅರ್ಜಿದಾರರಿಗೆ ತಿಳಿಸುತ್ತಾರೆ. ನಂತರ ನೋಂದಣಿಗೆ ಸಮಯಾವಕಾಶ ನಿಗದಿಗೊಳಿಸಲಾಗುತ್ತದೆ. ಹೀಗೆ ನಿಗದಿ ಮಾಡಿದ ಸಮಯಕ್ಕೆ ಸರಿಯಾಗಿ ಅರ್ಜಿದಾರರು ಹೋದರೆ ಅವರ ಹೆಬ್ಬೆಟ್ಟು ಗುರುತು, ಸಹಿ ಪಡೆದು ನೋಂದಣಿ ಪ್ರಕ್ರಿಯೆ 20 ನಿಮಿಷಗಳಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ವಿವರಿಸಿದರು.
ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಅರ್ಜಿದಾರರ ಡಿಜಿ ಲಾಕರ್‌ಗೆ ಅದರ ಪ್ರತಿ ರವಾನೆಯಾಗುತ್ತದೆ ಎಂದೂ ಹೇಳಿದರು. ಮನೆ, ಕಟ್ಟಡ, ನಿವೇಶನ ಮತ್ತು ಭೂಮಿ ಖರೀದಿಯಲ್ಲಿ ಯಾರೂ ಮೋಸ ಹೋಗದಂತೆ ತಡೆಯಲು, ದಾಖಲೆಯ ನೈಜತೆ ಬಗ್ಗೆ ಪ್ರಮಾಣೀಕರಿಸಲು ಸರ್ಕಾರವೇ ಏಜೆನ್ಸಿ ಪ್ರಾರಂಭಿಸಲು ತೀರ್ಮಾನಿಸಿದ್ದು, ಅದರ ರೂಪುರೇಷೆಗಳು ಸಿದ್ಧವಾಗುತ್ತಿವೆ ಎಂದು ತಿಳಿಸಿದರು.
ಆಸ್ತಿ ಖರೀದಿಯಲ್ಲಿ ಮೋಸ, ವಂಚನೆ ತಡೆಗಟ್ಟಲು ಹಾಗೂ ದಾಖಲೆಗಳ ನೈಜತೆ ಬಗ್ಗೆ ಆಸ್ತಿ ಖರೀದಿದಾರರಿಗೆ ಖಾತರಿ ನೀಡಲು ನಿಗದಿತ ಶುಲ್ಕ ಪಡೆದು ಸೇವೆ ನೀಡಲಾಗುವುದು ಎಂದೂ ಹೇಳಿದರು.