Advertisement

ಬೇನಾಮಿ ಆಸ್ತಿಗೆ ಏಳು ವರ್ಷ ಜೈಲು; ಐಟಿ ಇಲಾಖೆಯ ಕಠಿಣ ಎಚ್ಚರಿಕೆ

03:50 AM Mar 04, 2017 | Team Udayavani |

ಕಟಕ್‌/ನವದೆಹಲಿ: ಕಪ್ಪುಹಣದ ಬಳಿಕ ಬೇನಾಮಿ ಆಸ್ತಿಯ ಮೇಲೆ ಕಣ್ಣಿಟ್ಟಿರುವ ಆದಾಯ ತೆರಿಗೆ ಇಲಾಖೆಯು, ಬೇನಾಮಿ ವಹಿವಾಟು ನಡೆಸದಂತೆ ನಾಗರಿಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

Advertisement

ಬೇನಾಮಿ ವಹಿವಾಟುಗಳನ್ನು ಮಾಡುವವರಿಗೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂಬುದನ್ನು ಮತ್ತೂಮ್ಮೆ ದೇಶದ ಜನತೆಗೆ ನೆನಪಿಸಿದೆ. ಈ ಕುರಿತು ಶುಕ್ರವಾರ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ಇಲಾಖೆ, “ಬೇನಾಮಿ ವಹಿವಾಟು ಮಾಡಬೇಡಿ. 2016ರ ನ.1ರಿಂದಲೇ ಬೇನಾಮಿ ಆಸ್ತಿ ವಹಿವಾಟು ಕಾಯ್ದೆ, 1988 ಚಾಲ್ತಿಯಲ್ಲಿದೆ. ಕಪ್ಪುಹಣ ಎಂಬುವುದು ಮಾನವತೆಯ ವಿರುದ್ಧದ ಅಪರಾಧ. ಇದನ್ನು ನಿರ್ಮೂಲನೆ ಮಾಡುವಲ್ಲಿ ಎಲ್ಲ ಪ್ರಜ್ಞಾವಂತ ನಾಗರಿಕರು ಕೈಜೋಡಿಸಬೇಕು,’ ಎಂದು ಹೇಳಿದೆ.

ಹೊಸ ಕಾಯ್ದೆಯ ಗುಣವಿಶೇಷಗಳನ್ನೂ ಜಾಹೀರಾತಿನಲ್ಲಿ ಪ್ರಸ್ತಾಪಿಸಲಾಗಿದ್ದು, ನಿಯಮ ಉಲ್ಲಂ ಸಿದವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜತೆಗೆ, ಬೇನಾಮಿ ಆಸ್ತಿಯ ಮಾರುಕಟ್ಟೆ ದರದ ಶೇ.25ರಷ್ಟನ್ನು ದಂಡವಾಗಿ ಪಾವತಿಸಬೇಕಾಗುತ್ತದೆ ಎಂದಿದೆ.

ಸರ್ಕಾರಕ್ಕಿದೆ ಸ್ವಾಧೀನಪಡಿಸುವ ಅಧಿಕಾರ
ಬೇನಾಮಿದಾರ(ಬೇನಾಮಿ ಆಸ್ತಿಯು ಯಾರ ಹೆಸರಲ್ಲಿದೆಯೋ ಆ ವ್ಯಕ್ತಿ), ಫ‌ಲಾನುಭವಿ ಮತ್ತು ಬೇನಾಮಿ ವಹಿವಾಟಿಗೆ ಪ್ರಚೋದಿಸುವ ವ್ಯಕ್ತಿಯ ವಿರುದ್ಧ ಐಟಿ ಕಾಯ್ದೆಯಡಿಯಲ್ಲೇ ಪ್ರಕರಣ ದಾಖಲಿಸಿ, 7 ವರ್ಷ ಕಠಿಣ ಶಿಕ್ಷೆಗೊಳಪಡಿಸಲಾಗುತ್ತದೆ. ಇದೇ ವೇಳೆ, ಅಧಿಕಾರಿಗಳಿಗೆ ಸುಳ್ಳು ಮಾಹಿತಿಯನ್ನು ನೀಡುವಂಥ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿ, 5 ವರ್ಷ ಜೈಲುಶಿಕ್ಷೆ ಹಾಗೂ ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ.10ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಇವೆಲ್ಲದರ ಹೊರತಾಗಿ, ಬೇನಾಮಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಕಾರವೂ ಸರ್ಕಾರಕ್ಕಿರುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಕಳೆದ ವರ್ಷ ಕಾಯ್ದೆ ಅನುಷ್ಠಾನಗೊಂಡ ಬಳಿಕ ಈವರೆಗೆ ಐಟಿ ಇಲಾಖೆಯು 230 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ದೇಶಾದ್ಯಂತ 55 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. 200 ಕೋಟಿ ರೂ.ಗಳ ಬೇನಾಮಿ ಆಸ್ತಿಗೆ ಸಂಬಂಧಿಸಿ 140 ಮಂದಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ.

Advertisement

ಕಳೆದ ನವೆಂಬರ್‌ನಲ್ಲಿ ನೋಟುಗಳ ಅಪನಗದೀಕರಣ ಘೋಷಣೆಯಾದ ಬಳಿಕ ಜಾಹೀರಾತು ನೀಡಿದ್ದ ಐಟಿ ಇಲಾಖೆ, ಯಾರೂ ಯಾವುದೇ ಕಾರಣಕ್ಕೂ ಇನ್ನೊಬ್ಬರ ಲೆಕ್ಕವಿಲ್ಲದ ಅಮಾನ್ಯಗೊಂಡ ನೋಟುಗಳನ್ನು ತಮ್ಮ ಖಾತೆಗಳಲ್ಲಿ ಠೇವಣಿಯಿಡಬೇಡಿ ಎಂದು ಸೂಚಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ, ಕಪ್ಪುಹಣದ ಬಳಿಕ ನನ್ನ ಮುಂದಿನ ಟಾರ್ಗೆಟ್‌ ಬೇನಾಮಿ ಆಸ್ತಿ ಎಂದು ಘೋಷಿಸಿದ್ದರು.

70 ಸಾವಿರ ಕೋಟಿ ರೂ. ಕಪ್ಪುಹಣ ಪತ್ತೆ
ಕೇಂದ್ರ ಸರ್ಕಾರ ಜಾರಿಗೆ ತಂದ ವಿವಿಧ ಯೋಜನೆಗಳಲ್ಲಿ ಒಟ್ಟಾರೆಯಾಗಿ 70 ಸಾವಿರ ಕೋಟಿ ರೂ. ಮೌಲ್ಯದ ಕಪ್ಪುಹಣ ಪತ್ತೆಯಾಗಿದೆ. ಹೀಗೆಂದು, ಕಪ್ಪುಹಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಉಪಾಧ್ಯಕ್ಷ ನ್ಯಾ.ಅರಿಜಿತ್‌ ಪಸಾಯತ್‌ ಸ್ಪಷ್ಟಪಡಿಸಿದ್ದಾರೆ. ಏಪ್ರಿಲ್‌ನಲ್ಲಿ ಈ ಕುರಿತ 6ನೇ ಮಧ್ಯಂತರ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ತಂಡವು ಸಲ್ಲಿಸಲಿದೆ. ವಿದೇಶಗಳಲ್ಲಿ ಭಾರತೀಯರು ಇಟ್ಟಿರುವ ಮೊತ್ತದ ಕುರಿತು ಜಾಗತಿಕ ಮಟ್ಟದಲ್ಲಿ ಆದ ಮಾಹಿತಿ ಸೋರಿಕೆಗೆ ಸಂಬಂಧಿಸಿ ನಡೆದ ತನಿಖೆಯಲ್ಲಿ 16 ಸಾವಿರ ಕೋಟಿ ರೂ. ಪತ್ತೆಯಾಗಿದೆ. ಕಠಕ್‌ನಲ್ಲಿ ಶುಕ್ರವಾರ ಹಣಕಾಸಿಗೆ ಸಂಬಂಧಿಸಿದ ವಿಚಾರಗಳನ್ನು ನೋಡಿಕೊಳ್ಳುತ್ತಿರುವ ವಿವಿಧ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ನ್ಯಾ.ಪಸಾಯತ್‌ ಈ ವಿಷಯ ತಿಳಿಸಿದ್ದಾರೆ.

“ಕಪ್ಪುಹಣದ ಸೃಷ್ಟಿಯನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ನಾವು ಕಳೆದ 2 ವರ್ಷಗಳಲ್ಲಿ ಸರ್ಕಾರಕ್ಕೆ ಹಲವು ಬಾರಿ ಶಿಫಾರಸು ಮಾಡಿದ್ದೇವೆ. ಬಹುತೇಕ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಇನ್ನೂ ಕೆಲವು ಪರಿಗಣನೆಯ ಹಂತದಲ್ಲಿವೆ. 15 ಲಕ್ಷ ರೂ.ಗಿಂತ ಹೆಚ್ಚಿನ ನಗದನ್ನು ಅಕ್ರಮ ಆಸ್ತಿ ಎಂದು ಪರಿಗಣಿಸುವಂತೆ ಕೇಳಿಕೊಂಡಿದ್ದೇವೆ. ಅದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲಾಗುತ್ತಿದೆ,’ ಎಂದೂ ನ್ಯಾ.ಪಸಾಯತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next