ಕಲಾದಗಿ: ಖಾಸಗಿ ಆಸ್ತಿಯಲ್ಲಿ ಸರಕಾರಿ ಶಾಲಾ ಕಟ್ಟಡ ಕಟ್ಟಿ ಶಾಲೆಯನ್ನು ಕಳೆದ 9 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆಯಾದರೂ ಅಧಿಕಾರಿಗಳು ಈ ಆಸ್ತಿಯನ್ನು ಸರಕಾರಿ ಆಸ್ತಿಯನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸದೇ ಇರುವುದು ವಿಪರ್ಯಾಸ.
ಕಟ್ಟಡ ಕಟ್ಟಿದರಾದರೂ ಹೇಗೆ?: ಶಿಕ್ಷಣ ಪ್ರೇಮಿಗಳು ಭೂ ದಾನ ಮಾಡಿದರೂ ಭೂದಾನ ಪತ್ರ ಪಡೆದು ಆ ಶಾಲೆಯ ಮುಖ್ಯಾಧ್ಯಾಪಕರ ಹೆಸರಿನಲ್ಲಿ ಭೂ ದಾನಪತ್ರ ಪಡೆದು ಶಿಕ್ಷಣ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಅಥವಾ ಬಿಇಒ ಅವರ ಗಮನಕ್ಕೆ ತಂದು ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡು, ಹಿರಿಯ ಅಧಿಕಾರಿಗಳ ಮಾರ್ಗದರ್ಶನ-ಸೂಚನೆ-ಆದೇಶದಂತೆ ಶಾಲಾ ಕಟ್ಟಡ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಭೂದಾನ ನೀಡಿದವರು ಆ ಶಾಲೆಗೆ ತಮ್ಮ ಮನೆತನದವರ ಹಿರಿಯರ ಹೆಸರು, ಶರಣರ ಹೆಸರು ಇಡಲು ಅಪೇಕ್ಷೆ ವ್ಯಕ್ತಪಡಿಸಿ ಭೂದಾನ ಮಾಡಿದಲ್ಲಿ ಆ ಭೂಮಿಯನ್ನು ರಾಜ್ಯಪಾಲರ ಹೆಸರಿಗೆ ಮಾಡಿಕೊಂಡು, ನಂತರ ಇಲಾಖೆಯ ನಿಯಾನುಸಾರ, ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶ ಮುಂದಿನ ಕ್ರಮ ಕೈಗೊಂಡು, ನಿಯಮನಾನುಸಾರ ಅನುದಾನ ಬಿಡುಗಡೆ ಮಾಡಿ, ಜಿಲ್ಲಾಮಟ್ಟದ ಶಿಕ್ಷಣ ಇಲಾಖಾ ಅಧಿಕಾರಿಗಳ ಸೂಚನೆ ಪ್ರಕಾರ ಕಟ್ಟಡ ಕಟ್ಟಬೇಕು. ಆದರೆ ಇದ್ಯಾವುದು ಈ ಶಾಲೆಗೆ ಸಂಬಂಧಿಸಿಲ್ಲ. ಶಿಕ್ಷಣ ಇಲಾಖೆ ಹೆಸರಿನಲ್ಲಿರದ ಭೂಮಿಯಲ್ಲಿ ಈ ಶಾಲಾ ಕಟ್ಟಡವನ್ನು ಕಟ್ಟಿರುವುದಾದರೂ ಹೇಗೆ ಎಂಬುದು ಪ್ರಜ್ಞಾವಂತರು ಪ್ರಶ್ನೆಯಾಗಿದೆ.
ಗ್ರಾಪಂನಲ್ಲಿ ದಾಖಲೆಗಳಿಲ್ಲ: ಖಾಸಗಿ ಮಾಲಿಕತ್ವ ಭೂಮಿಯಲ್ಲಿರುವ ಈ ಶಾಲಾ ಕಟ್ಟಡದಲ್ಲಿ ಮೂರು ಶಾಲಾ ಕೊಠಡಿಗಳಿವೆ. ಒಂದು ಮುಖ್ಯೋಪಾಧ್ಯಾಯರ ಕೊಠಡಿ ಇದೆ. ಒಂದನೇ ತರಗತಿಯಿಂದ 5ನೇ ತರಗತಿವರೆಗೆ ತರಗತಿಗಳು ಇಲ್ಲಿ ನಡೆಯುತ್ತಿದ್ದು, ಶೌಚಾಲಯ, ಮೂತ್ರಾಲಯ ಇದೆ. ಮೈದಾನವೂ ಇದ್ದು ಜತೆಗೆ ಒಂದು ಕೊಳವೆ ಬಾವಿ ವಿದ್ಯುತ್ ಸೌಲಭ್ಯ ಒಳಗೊಂಡಿದೆ. ಕಳೆದ ಕೆಲ ವರ್ಷಗಳಿಂದ ಇವುಗಳ ದುರಸ್ತಿ ನಿರ್ವಹಣೆಗೆ ಗ್ರಾಪಂ ನಿಂದ ಸಹಕಾರ ಅನುದಾನ ಸಿಗುತ್ತಿಲ್ಲ. ಕಾರಣ ಗ್ರಾಪಂನಲ್ಲಿ ಈ ಶಾಲೆಯ ಯಾವುದೇ ದಾಖಲೆಗಳಿಲ್ಲ.
ಈ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಇನ್ನಾದರೂ ಸರಕಾರದ ಹೆಸರಿನಲ್ಲಿ ಮಾಡಿಕೊಳ್ಳಲು ಮುಖ್ಯಾಧ್ಯಾಪಕರು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮುಂದಾಗುತ್ತಾರೋ ಇಲ್ಲವೋ ಕಾದು ನೋಡಬೇಕು.
Advertisement
ಸೌಂಶಿ ಕ್ರಾಸ್ ಹತ್ತಿರ ಬೆಳಗಾವಿ ರಾಯಚೂರು ಹೆದ್ದಾರಿಗೆ ಹೊಂದಿಕೊಂಡ ತೋಟದ ಶಾಲೆ ಸರಕಾರದ ಹೆಸರಿನಲ್ಲಿಲ್ಲ, ನಿವೃತ್ತ ಶಿಕ್ಷಕ ಎಸ್.ಎನ್.ಹೂಗಾರ ಅವರ ಗೋವಿಂದಕೊಪ್ಪ ಗ್ರಾಮದ ಸರ್ವೇ ನಂ 155/1ರಲ್ಲಿ 9 ಗುಂಟೆ ಜಾಗೆಯಲ್ಲಿ ಕಟ್ಟಲಾಗಿದೆ. ಇದು ಸರ್ಕಾರ ಅಥವಾ ಶಿಕ್ಷಣ ಇಲಾಖೆ ಹೆಸರಿನಲ್ಲಿಲ್ಲ.
Related Articles
ಕುಸಿಯುತ್ತಲೇ ಇದೆ ಮಕ್ಕಳ ದಾಖಲಾತಿ:
3 ವಿದ್ಯಾರ್ಥಿನಿಯರು 2005ರಲ್ಲಿ ಈ ಶಾಲೆಗೆ ಸರಕಾರದಿಂದ ಅನುಮತಿ ನೀಡಲಾಗಿದೆ, 2010-11ರ ಶಾಲಾ ಶೈಕ್ಷಣಿಕ ವರ್ಷದಲ್ಲಿ 9 ಮಕ್ಕಳ ದಾಖಲಾತಿಯೊಂದಿಗೆ ಆರಂಭಗೊಂಡ ಶಾಲೆ, 2011-12ರಲ್ಲಿ 4 ವಿದ್ಯಾರ್ಥಿಗಳು, 2012-13ರಲ್ಲಿ 5 ವಿದ್ಯಾರ್ಥಿಗಳು, 2013-14ರಲ್ಲಿ 5 ವಿದ್ಯಾರ್ಥಿಗಳು, 2014-15ರಲ್ಲಿ ಕೆಲ ಕಾರಣದಿಂದ ಶಾಲೆ ಬಂದ್ ಆಗಿತ್ತು, 2015-16ರಲ್ಲಿ 6 ವಿದ್ಯಾರ್ಥಿಗಳು, 2016-17ರಲ್ಲಿ 4 ವಿದ್ಯಾರ್ಥಿಗಳು, 2017-18ರಲ್ಲಿ 1 ವಿದ್ಯಾರ್ಥಿ, 2018-19ರಲ್ಲಿ 1 ವಿದ್ಯಾರ್ಥಿ, 2019-20ರಲ್ಲಿ ಯಾರೊಬ್ಬರೂ ಈ ಶಾಲೆಗೆ ಹೊಸದಾಗಿ ದಾಖಲಾತಿ ಮಾಡಿಕೊಂಡಿಲ್ಲ, ಕಳೆದ ನಾಲ್ಕು ವರ್ಷದಿಂದ ಮಕ್ಕಳ ದಾಖಲಾತಿ ಕುಸಿಯುತ್ತ ಬಂದಿದೆ. ಪ್ರಸಕ್ತ ವರ್ಷ ಎರಡನೇ ತರಗತಿಯಲ್ಲಿ ಓರ್ವ ವಿದ್ಯಾರ್ಥಿನಿ, 4 ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 1, 3, 5ನೇ ತರಗತಿಯಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಇಲ್ಲ.
ಈ ಶಾಲೆಯ ಕುರಿತು, ಜಿಲ್ಲಾ ಪಂಚಾಯತ ಸಿಇಒ, ಶಿಕ್ಷಣ ಇಲಾಖೆ ಡಿಡಿಪಿಐ ಅವರ ಕಡೆಯಿಂದ ಮಾಹಿತಿ ಪಡೆದು ತಿಳಿಸುತ್ತೇನೆ, ಏನಾಗಿದೆ ಅಲ್ಲಿ ಎಂದು ಗಮನಿಸಲು ಸಹಿತ ಸೂಚಿಸುತ್ತೇನೆ ಆರ್.ರಾಮಚಂದ್ರನ್, ಜಿಲ್ಲಾಧಿಕಾರಿ, ಬಾಗಲಕೋಟೆ
ನಾನು ಇಲ್ಲಿಯವರೆಗೆ ಭೂದಾನ ಪತ್ರ ಕೊಟ್ಟಿಲ್ಲ. ಅಕ್ಕಮಹಾದೇವಿ ಶಾಲೆ ಎಂದು ಹೆಸರಿಡಲು ಹೇಳಲಾಗಿತ್ತು. ಆದರೆ ಶಾಲೆಗೆ ಆ ಹೆಸರಿಟ್ಟಿಲ್ಲ. ಅಧಿಕಾರಿಗಳು ನನ್ನ ಬಳಿ ಖುದ್ದು ಬಂದು ಮಾತನಾಡಲಿ. ಮುಂದೆ ಏನು ಮಾಡಬೇಕೆಂಬುದನ್ನು ಯೋಚಿಸುತ್ತೇನೆ.•ಎಸ್.ಎನ್.ಹೂಗಾರ, ನಿವೃತ್ತ ಶಿಕ್ಷಕ, ಶಾಲೆ ಕಟ್ಟಿದ ಭೂಮಾಲಿಕ
•ಚಂದ್ರಶೇಖರ.ಆರ್.ಎಚ್
Advertisement