ದಾವಣಗೆರೆ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ಸಲ್ಲಿಸಲು ಆಗಮಿಸಿದ್ದ ಮಹಿಳೆ ಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಶಿವಕೊಳೆನೂರು ಗ್ರಾಮದ ವೇದಾವತಿ ಆತ್ಮಹತ್ಯೆಗೆ ಯತ್ನಿಸಿದವರು.
ಮಧ್ಯಾಹ್ನ ಜಿಲ್ಲಾ ಪೊಲೀಸ್ ಕಚೇರಿಗೆ ಆಸ್ತಿಯ ವ್ಯಾಜ್ಯ ವಿಚಾರವಾಗಿ ತನ್ನ ಗಂಡನ ಅಣ್ಣನಾದ ವೆಂಕಟೇಶ ಮತ್ತು ಅವರ ಮನೆಯ ಕಡೆಯವರ ವಿರುದ್ಧ ದೂರು ನೀಡಲು ಆಗಮಿಸಿದ್ದು, ಈ ಸಂದರ್ಭದಲ್ಲಿ ಎಸ್ಪಿ ಅವರನ್ನು ಭೇಟಿ ಮಾಡುವ ಮೊದಲೇ ಕಚೇರಿ ಆವರಣದಲ್ಲಿ ಏಕಾಏಕಿಯಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಕೂಡಲೇ 112 ವಾಹನವನ್ನು ಕರೆಯಿಸಿ ಅದರಲ್ಲಿ ಸಿಬ್ಬಂದಿಯೊಂದಿಗೆ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಯಿತು.
ನಂತರ ಪ್ರಕರಣಕ್ಕೆ ಸಂಬಂಧಿಸದಂತೆ ವಿಚಾರಿಸಲಾಗಿದ್ದು, ಮಹಿಳೆಯ ಗಂಡನ ಸಹೋದರ ಹಾಗೂ ಅವರ ಕುಟುಂಬದೊಂದಿಗೆ ಸುಮಾರು 7 8 ವರ್ಷಗಳಿಂದ ಆಸ್ತಿ ವ್ಯಾಜ್ಯ ನಡೆಯುತ್ತಿರುವುದು ತಿಳಿದುಬಂದಿದೆ.
ವೇದಾವತಿ ಅವರಿಂದ ದೂರು ಅರ್ಜಿಯನ್ನು ಪಡೆದು, ವಿಚಾರಣೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಿಗೆ ನೀಡಲಾಗಿರುತ್ತದೆ. ಕಂದಾಯ ಇಲಾಖೆಯ ಅಧಿಕಾರಿಗಳ ಅಭಿಪ್ರಾಯವನ್ನು ಪಡೆದುಕೊಂಡು ಮುಂದಿನ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ. ಅರುಣ್ ತಿಳಿಸಿದ್ದಾರೆ.