Advertisement

ಬಾರದ ಆದೇಶ; ಮುಗಿಯದ ಗೊಂದಲ

05:09 AM Mar 03, 2019 | Team Udayavani |

ಮಹಾನಗರ : ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸಿರುವುದನ್ನು ತಾತ್ಕಾಲಿಕವಾಗಿ ವಾಪಾಸ್‌ ಪಡೆದಿರುವ ಬಗ್ಗೆ ಸರಕಾರದಿಂದ ಇನ್ನೂ ಲಿಖೀತವಾಗಿ ಅಧಿಕೃತ ಆದೇಶ ಬಾರದಿರುವ ಹಿನ್ನೆಲೆಯಲ್ಲಿ ನಗರವಾಸಿ ಗಳಲ್ಲಿ ಮತ್ತೆ ಗೊಂದಲ ಸೃಷ್ಟಿಯಾಗಿದೆ. ಏಕೆಂದರೆ, ಸರಕಾರದ ಹಿಂದಿನ ಆದೇಶ ಊರ್ಜಿತದಲ್ಲಿರುವ ಹಿನ್ನೆಲೆಯಲ್ಲಿ ಪ್ರಾಪರ್ಟಿ ಕಾರ್ಡ್‌ ಇದ್ದರೆ ಮಾತ್ರ ಸದ್ಯಕ್ಕೆ ಆಸ್ತಿ ನೋಂದಣಿ ಮಾಡಲಾಗುತ್ತಿದೆ.

Advertisement

ಹೀಗಾಗಿ, ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಆದೇಶ ಹಿಂಪಡೆದಿರುವುದರಿಂದ ಈ ಕಾರ್ಡ್‌ ಇಲ್ಲದೆ ಆಸ್ತಿ ನೋಂದಣಿ ಮಾಡಿಸುವಂತೆ ಮಾಲಕರು ಹೇಳಿದರೂ ಕಂದಾಯ ಅಧಿಕಾರಿಗಳು ಅದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಆ ಬಗ್ಗೆ ‘ನಮಗೆ ಆದೇಶ ಬಂದಿಲ್ಲ’ ಎನ್ನುವ ಉತ್ತರ ನೀಡಿದ್ದು, ಜನರು ಮತ್ತೆ ಗೊಂದಲಕ್ಕೆ ಸಿಲುಕಿದ್ದಾರೆ.

ಪ್ರಾಪರ್ಟಿ ಕಾರ್ಡ್‌ ವಿತರಣೆ ವ್ಯವಸ್ಥೆಯಲ್ಲಿ ಕೆಲವು ಗೊಂದಲಗಳಿಂದಾಗಿ ರಾಜ್ಯ ಭೂಮಾಪನ, ಭೂದಾಖಲೆಗಳು, ಸೆಟ್ಲಮೆಂಟ್‌ ಇಲಾಖಾ ಆಯುಕ್ತ ಮನೀಶ್‌ ಮುದ್ಗೀಲ್‌ ಅವರು ಕಡ್ಡಾಯವನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಬುಧವಾರ ನಗರದಲ್ಲಿ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಆದರೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸಿ ಈ ಹಿಂದೆ ಸರಕಾರ ನೋಂದಣಿ ಕಚೇರಿಗೆ ಲಿಖೀತ ಆದೇಶ ಕಳುಹಿಸಿತ್ತು. ಈಗ ತಾತ್ಕಾಲಿಕವಾಗಿ ಮುಂದೂಡಿರುವ ಬಗ್ಗೆ ಸರಕಾರದಿಂದ ಅಧಿಕೃತ ಆದೇಶ ಬಂದ ಬಳಿಕವಷ್ಟೆ ಹಿಂದಿನಂತೆ ಭೂದಾಖಲೆಗಳ ಆಧಾರದಲ್ಲಿ ನೋಂದಣಿಗೆ ಸಾಧ್ಯವಿದೆ. ಅಲ್ಲಿವರೆಗೆ ಈಗಿನಂತೆ ಮುಂದುವರಿಯಲಿದೆ. ತಾತ್ಕಾಲಿಕ ಮುಂದೂಡಿಕೆ ಆದೇಶ ಸೋಮವಾರ ಬರುವ ನಿರೀಕ್ಷೆ ಇದೆ.

ಪ್ರಸ್ತುತ ಆಸ್ತಿ ನೋಂದಣಿಗೆ ಮಾತ್ರ ಪ್ರಾಪರ್ಟಿ ಕಾರ್ಡ್‌ ಕಡ್ಡಾಯವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ನಗರ ವ್ಯಾಪ್ತಿಯಲ್ಲಿ ಭೂಪರಿವರ್ತನೆಗೆ ಪ್ರಾಪರ್ಟಿ ಕಾರ್ಡ್‌ ಅವಶ್ಯ. ಭೂ ಪರಿವರ್ತನೆ ಮಾಡ ಬಯಸುವವರು ಪ್ರಾಪರ್ಟಿಕಾರ್ಡ್‌ನ್ನು ಹೊಂದುವುದು ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗತ್ಯ ಸೌಲಭ್ಯ ಹೆಚ್ಚಳ
ಪ್ರಾಪರ್ಟಿ ಕಾರ್ಡ್‌ ವಿತರಣೆ ಕಚೇರಿಯಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗಿದ್ದು, ವಿತರಣೆ ಪ್ರಕ್ರಿಯೆಗೆ ವೇಗ ನೀಡುವ ಕ್ರಮ ಕೈಗೊಳ್ಳಲಾಗಿದೆ. ಕಂಪ್ಯೂಟರ್‌ಗಳ ಸಂಖ್ಯೆಯನ್ನು 50ಕ್ಕೇರಿಸಲಾಗಿದೆ. ಈಗ ಇರುವ ಸ್ಕ್ಯಾನರ್‌ಗಳಲ್ಲದೆ ನಿಮಿಷಕ್ಕೆ 60 ಪ್ರತಿಗಳನ್ನು ಸ್ಕ್ಯಾನ್‌ ಮೂಡುವ ಹೊಸ ಸ್ಕ್ಯಾನರ್‌ ಸ್ಥಾಪಿಸಲಾಗಿದೆ. ಪ್ರಿಂಟರ್‌ಗಳ ಸಂಖ್ಯೆಯನ್ನು 5ಕ್ಕೆ ಹೆಚ್ಚಿಸಲಾಗಿದೆ. 30 ಸರ್ವೆಯರ್‌ಗಳು ಅಳತೆ, ಭೂದಾಖಲೆಗಳ ಸಂಗ್ರಹ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದಲ್ಲದೆ 18 ಮಂದಿ ಡಾಟಾಎಂಟ್ರಿ ಸಿಬಂದಿ  ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

4 ಮಂದಿ ತಹಶೀಲ್ದಾರರು, ಇಬ್ಬರು ಮೇಲ್ವಿಚಾರಕರು ಇದ್ದರೆ, ಈ ಹಿಂದೆ ದಿನವೊಂದಕ್ಕೆ 40ರಿಂದ 50 ಕಾರ್ಡ್‌ಗಳನ್ನು ನೀಡುತ್ತಿದ್ದರೆ, ಈಗ ದಿನಕ್ಕೆ ಸುಮಾರು 80ರಿಂದ 90 ಕಾರ್ಡ್‌ಗಳನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1,50,581 ಆಸ್ತಿಗಳು
ಮಂಗಳೂರಿನಲ್ಲಿ ಸಮೀಕ್ಷೆ ನಡೆಸಲಾಗಿರುವ 1,50,581 ಆಸ್ತಿಯಲ್ಲಿ 80,638 ಆಸ್ತಿಗಳ ದಾಖಲೆಪತ್ರಗಳನ್ನು ಸಂಗ್ರಹಿಸಲಾಗಿದ್ದು, ಬಾಕಿಯುಳಿದಿರುವ 70,000 ಆಸ್ತಿಗಳ ದಾಖಲೆಪತ್ರಗಳನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ. ಪ್ರಸ್ತುತ 36,000 ಕರಡು ಕಾರ್ಡ್‌, 25,000 ಅಂತಿಮ ಕಾರ್ಡ್‌ಗಳನ್ನು ವಿತರಿಸಲಾಗಿದೆ.

ಮುಗಿಯದ ಗೊಂದಲ
ಪ್ರಾಪರ್ಟಿ ಕಾರ್ಡ್‌ ಪ್ರಕ್ರಿಯೆ ಮಂಗಳೂರಿನಲ್ಲಿ 2012ರಿಂದ ಆರಂಭವಾಗಿದ್ದು, ಆರಂಭದಿಂದಲೂ ಗೊಂದಲಗಳನ್ನು ಬೆನ್ನಿಗಂಟಿಸಿಕೊಂಡೇ ಬಂದಿದೆ. ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಖಚಿತತೆ ಇಲ್ಲದ ಕಾರಣ 2018ರ ವರೆಗೆ ಇದು ಕುಂಟುತ್ತಾ ಸಾಗಿತು. 2018ರ ಡಿಸೆಂಬರ್‌ ಒಂದರಿಂದ ಪ್ರಾಪರ್ಟಿ ಕಾರ್ಡ್‌ ನ್ನು ಕಡ್ಡಾಯಗೊಳಿಸಿ ಸರಕಾರ ಆದೇಶ ಹೊರಡಿಸಿತ್ತು. ಆದರೆ ಸರಕಾರದ ಐಟಿ ಇಲಾಖೆಯಲ್ಲಿ ಕಾರ್ಯಒತ್ತಡದಿಂದಾಗಿ ಜನವರಿ ಒಂದಕ್ಕೆ ಮುಂದೂಡಿಲಾಗಿತು. ಆದರೆ ಸಾಲ ಮನ್ನಾ ಪ್ರಕ್ರಿಯೆ, ಪ್ರಾಪರ್ಟಿ ಕಾರ್ಡ್‌ ವಿತರಣೆಯಲ್ಲಿ ಗೊಂದಲಗಳು ಮುಂದುವರಿದ ಕಾರಣ ಇದನ್ನು ಮತ್ತೇ ಮುಂದೂಡಿ ಫೆ. 1ರಿಂದ ಕಡ್ಡಾಯಗೊಳಿಸಿತ್ತು. ಇದೀಗ ಫೆಬ್ರವರಿ 1ರಿಂದ ಜಾರಿಯಲ್ಲಿದ್ದ ಆದೇಶ ಮತ್ತೆ ಮುಂದಕ್ಕೆ ಹೋಗಿದೆ.

ಮೇ 15ರ ವರೆಗೆ ಮುಂದೂಡಿಕೆ?
ನಗರ ವ್ಯಾಪ್ತಿಯಲ್ಲಿ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ನ್ನು ಕಡ್ಡಾಯಗೊಳಿಸಿರುವುದನ್ನು ಇಲಾಖೆ ಮೇ 15ರ ವರೆಗೆ ಮುಂದೂಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಪ್ರಾಪರ್ಟಿಕಾರ್ಡ್‌ ವಿತರಣೆ ನಿಧಾನಗತಿಗೆ ಸರ್ವರ್‌ ಸಮಸ್ಯೆ ಪ್ರಮುಖ ಕಾರಣ. ಈಗ ಇರುವ ವ್ಯವಸ್ಥೆಯಂತೆ ಮಂಗಳೂರು ಕಚೇರಿಯಲ್ಲಿ ಕರಡು ಪ್ರಾಪರ್ಟಿ ಕಾರ್ಡ್‌ನ್ನು ಮಾತ್ರ ಮುದ್ರಿಸಿ ಆಸ್ತಿ ಮಾಲಕರಿಗೆ ನೀಡಲು ಅವಕಾಶವಿದೆ. ಅಂತಿಮ ಕಾರ್ಡ್‌ ಬೆಂಗಳೂರಿನ ಕೇಂದ್ರ ಸರ್ವರ್‌ನಿಂದಲೇ ಬರಬೇಕು. ಕೇಂದ್ರ ಸರ್ವರ್‌ನಲ್ಲಿ ಸಮಸ್ಯೆಯಿಂದಾಗಿ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ. ಇದೇ ಕಾರಣದಿಂದ ಭೂನೋಂದಣಿ ಕಚೇರಿಯಲ್ಲೂ ಸಮಸ್ಯೆಯಾಗುತ್ತಿದೆ ಎನ್ನಲಾಗಿದೆ. ಹಾಗಾಗಿ ಕೇಂದ್ರ ಮಟ್ಟದಲ್ಲಿ ಪ್ರತ್ಯೇಕ ಸರ್ವರ್‌ವೊಂದನ್ನು ಪ್ರಾಪರ್ಟಿಕಾರ್ಡ್‌ಗೆ ಮೀಸಲಿರಿಸಿ ವಿತರಣೆಗೆ ವೇಗ ಕೊಡುವ ಕಾರ್ಯವನ್ನು ಮೇ 15ರೊಳಗೆ ಮಾಡಲು ಇಲಾಖೆ ಉದ್ದೇಶಿಸಿದೆ. 

ಇನ್ನೆರಡು ದಿನಗಳಲ್ಲಿ ಆದೇಶ
ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸಿರುವುದನ್ನು ತಾತ್ಕಾಲಿಕವಾಗಿ ಮುಂದೂಡಲು ಈಗಾಗಲೇ ರಾಜ್ಯ ಆಯುಕ್ತರು ಸೂಚನೆ ನೀಡಿದ್ದು , ಅಧಿಕೃತ ಆದೇಶ ಇನ್ನೆರಡು ದಿನಗಳಲ್ಲಿ ಬರುವ ನಿರೀಕ್ಷೆ ಇದೆ. ಎಷ್ಟು ಅವಧಿಯವರೆಗೆ ಮುಂದೂಡಲಾಗಿದೆ ಎಂಬುದು ಆದೇಶದಲ್ಲಿ ತಿಳಿದು ಬರಲಿದೆ. ಪ್ರಾಪರ್ಟಿಕಾರ್ಡ್‌ ವಿತರಣೆ ಕಾರ್ಯ ಪ್ರಗತಿಯಲ್ಲಿದ್ದು ಮುಂದುವರಿಯಲಿದೆ. 
– ಪ್ರಸಾದಿನಿ, ಭೂಮಾಪನ
ಇಲಾಖೆ ಸಹಾಯಕ ನಿರ್ದೇಶಕಿ

ವಿಶೇಷ ವರದಿ 

Advertisement

Udayavani is now on Telegram. Click here to join our channel and stay updated with the latest news.

Next