Advertisement

ವಿದೇಶದಲ್ಲಿ ಆಸ್ತಿ: ಕೆ.ಜೆ.ಜಾರ್ಜ್‌ ವಿರುದ್ಧ ಇಡಿಗೆ ದೂರು

11:29 PM Sep 06, 2019 | Lakshmi GovindaRaju |

ಬೆಂಗಳೂರು: ಮಾಜಿ ಸಚಿವ ಹಾಗೂ ಶಾಸಕ ಕೆ.ಜೆ.ಜಾರ್ಜ್‌ ಹಾಗೂ ಅವರ ಸಂಬಂಧಿಕರು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಹೊಂದಿದ್ದು, ಇದರ ಕುರಿತು ತನಿಖೆ ನಡೆಸಬೇಕು ಎಂದು ಕೋರಿ ಕರ್ನಾಟಕ ರಾಷ್ಟ್ರಸಮಿತಿ, ಜಾರಿ ನಿರ್ದೇಶನಾಲಯಕ್ಕೆ ಶುಕ್ರವಾರ ದೂರು ನೀಡಿದೆ. ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿಯವರು ಶಾಂತಿನಗರ ದಲ್ಲಿರುವ ಇ.ಡಿ. ಕಚೇರಿಯಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ, ಈ ಸಂಬಂಧ ದೂರು ನೀಡಿದ್ದಾರೆ.

Advertisement

ನ್ಯೂಯಾರ್ಕ್‌ನಲ್ಲಿರುವ ಶಾಸಕ ಜಾರ್ಜ್‌ ಅವರ ಪುತ್ರಿ ರೆನಿಟಾ ಅಬ್ರಹಾಂ, ಅಳಿಯ ಕೆವಿನ್‌ ಅಬ್ರಹಾಂ ಕೋಟ್ಯಂತರ ರೂ.ಮೌಲ್ಯದ ಆಸ್ತಿಗಳನ್ನು ಖರೀದಿಸಿದ್ದಾರೆ. ಅದರ ಪೈಕಿ ಒಂದು ಆಸ್ತಿ ಜಾರ್ಜ್‌, ಅವರ ಪತ್ನಿ ಸುಜಾ ಜಾರ್ಜ್‌, ಸಹೋದರ ಕೆ.ಜೆ. ಕುರುವಿಲ್ಲಾ ಅವರ ಹೆಸರಿನಲ್ಲಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಆಸ್ತಿಯ ವಿವರವಾದ ಮಾಹಿತಿಯನ್ನು 2014 ಹಾಗೂ 2015ರಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿದ್ದ ಆಸ್ತಿ ವಿವರದಲ್ಲಿ ನಮೂದಿಸಿದ್ದಾರೆ.

ಆದರೆ, 2013 ಹಾಗೂ 2018ರ ಚುನಾವಣಾ ಅಫಿಡವಿಟ್‌ನಲ್ಲಿ ಮರೆಮಾಚಿದ್ದಾರೆ ಎಂದು ಆರೋಪಿಸಿದ್ದಾರೆ. ಜಾರ್ಜ್‌ ಹಾಗೂ ಅವರ ಕುಟುಂಬಸ್ಥರು ಹಲವು ನಕಲಿ ಕಂಪನಿಗಳು, ಬ್ಯಾಂಕ್‌ ಸಾಲದ ಮೂಲಕ ಅಪಾರ ಹಣ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಎಲ್ಲ ಆಸ್ತಿಗಳನ್ನು ಭ್ರಷ್ಟಾಚಾರ ಎಸಗಿ ಖರೀದಿ ಮಾಡಿರುವ ಸಾಧ್ಯತೆಯಿದೆ. ಹೀಗಾಗಿ, ಅಕ್ರಮ ಹಣ ವರ್ಗಾವಣೆ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next