Advertisement

ರೇಬಿಸ್‌ ನಿಯಂತ್ರಣಕ್ಕೆ ಬಿಬಿಎಂಪಿಯಿಂದ ಸೂಕ್ತ ಕ್ರಮ

12:26 AM Feb 19, 2020 | Lakshmi GovindaRaj |

ಬೆಂಗಳೂರು: ರೇಬಿಸ್‌ ರೋಗದ ಬಗ್ಗೆ ಜಾಗೃತಿ ಮೂಡಿಸಲು ಪಾಲಿಕೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಎಂ.ಗೌತಮ್‌ಕುಮಾರ್‌ ಹೇಳಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ರೇಬಿಸ್‌ ಬಗ್ಗೆ ಜಾಗೃತಿ ಕೊರತೆಯಿಂದ ಪ್ರತಿ ವರ್ಷ ನಗರದಲ್ಲಿ 15ಜನ ಸಾವಿಗೀಡಾಗುತ್ತಿದ್ದು, ಬಗ್ಗೆ ಹಾಗೂ ಬೀದಿ ನಾಯಿಗಳಿಗೆ ರೇಬಿಸ್‌ ಚುಚ್ಚುಮದ್ದು ಹಾಕುವುದು ಬಾಕಿ ಇರುವ ಬಗ್ಗೆ “ಉದಯವಾಣಿ’ “ಶ್ವಾನಗಳಿಗೆ ರೇಬಿಸ್‌ ಲಸಿಕೆ ಬಾಕಿ’ಎನ್ನುವ ಶೀರ್ಷಿಕೆಯಡಿ ಮಂಗಳವಾರ ವಿಶೇಷ ವರದಿ ಪ್ರಕಟಿಸಿತ್ತು.

Advertisement

ಈ ಸಂಬಂಧ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌, ರೇಬಿಸ್‌ನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪಾಲಿಕೆಯಿಂದ ಕೆಲವು ತಪ್ಪುಗಳಾಗಿದ್ದು, ಇದನ್ನು ಸರಿಪಡಿಸಿಕೊಳ್ಳಲಾಗುವುದು. ಆನ್‌ಲೈನ್‌ ಮೂಲಕ ಹಾಗೂ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು.

ನಗರದಲ್ಲಿ ಪಾಲಿಕೆಯ 85 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 6 ರೆಫ‌ರಲ್‌ ಆಸ್ಪತ್ರೆಗಳಿದ್ದು, ಇಲ್ಲಿ ಉಚಿತವಾಗಿ ರೇಬಿಸ್‌ ಲಸಿಕೆ ನೀಡಲಾಗುತ್ತಿದೆ. ಆದರೆ, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದ್ದು, ಇದಕ್ಕೆ ಆದ್ಯತೆ ನೀಡಲಾಗುವುದು ಎಂದರು.

ರೇಬಿಸ್‌ ಲಸಿಕೆ ಎಲ್ಲೆಲ್ಲಿ ಉಚಿತವಾಗಿ ನೀಡಲಾಗುತ್ತಿದೆ ಎನ್ನುವ ಸಮಗ್ರ ಮಾಹಿತಿಯನ್ನು ಶೀಘ್ರವಾಗಿ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಎಷ್ಟು ಪ್ರಮಾಣದ ರೇಬಿಸ್‌ ಲಸಿಕೆ ಇದೆ. ಸುಧಾರಣೆಗೆ ಏನು ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ನಾಯಿಗಳಿಂದ ಉಂಟಾಗುತ್ತಿರುವ ತೊಂದರೆ ತಪ್ಪಿಸುವ ಉದ್ದೇಶದಿಂದ 2020-21ನೇ ಸಾಲಿನ ಪಾಲಿಕೆಯ ಬಜೆಟ್‌ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆ ವ್ಯಾಪ್ತಿಯ ಉತ್ತರ ಮತ್ತು ದಕ್ಷಿಣ ವಲಯಗಳಲ್ಲಿ ಪಾಲಿಕೆಯಿಂದ ನಾಯಿ ಪಾಲನಾ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದರು.

Advertisement

ಸಾಂಕ್ರಾಮಿಕ ರೋಗ ಮಾಹಿತಿ ನೀಡಲು ಸೂಚನೆ
ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಸಾರ್ವಜನಿಕರು ದಾಖಲಾದರೆ ಈ ಸಂಬಂಧ ಕೂಡಲೇ ಪಾಲಿಕೆಗೆ ಮಾಹಿತಿ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ತಿಳಿವಳಿಕೆ ಪತ್ರ ಹೊರಡಿಸಲಾಗುವುದು ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ ವಿಜೇಂದ್ರ ತಿಳಿಸಿದರು.

ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ರೇಬಿಸ್‌ ರೋಗ ಸುದ್ದಿಯಾಗುತ್ತಿದೆ. ರೇಬಿಸ್‌ನಿಂದ ಖಾಸಗಿ ಆಸ್ಪತ್ರೆಗೆ ಮಹಿಳೆಯೊಬ್ಬರು ದಾಖಲಾಗಿರುವ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ತಡವಾಗಿ ಪಾಲಿಕೆಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಈ ಸಂಬಂಧ ತಿಳಿವಳಿಕೆ ಪತ್ರ ಹೊರಡಿಸಲು ನಿರ್ಧರಿಸಲಾಗಿದೆ ಎಂದರು.

ರೇಬಿಸ್‌, ಮಲೇರಿಯಾ, ಚಿಕೂನ್‌ ಗುನ್ಯಾ ಹಾಗೂ ಎಚ್‌1ಎನ್‌1 ಸೇರಿದಂತೆ 25ಕ್ಕೂ ಹೆಚ್ಚು ರೋಗಗಳನ್ನು ಸಾಂಕ್ರಾಮಿಕ ರೋಗಗಳು ಎಂದು ಗುರುತಿಸಲಾಗಿದ್ದು, ಈ ರೋಗಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ದಾಖಲಾದ ಕೂಡಲೇ ಮಾಹಿತಿ ನೀಡಬೇಕು ಎಂದು ಮಾಹಿತಿ ನೀಡಿದರು.

ನಾಯಿ ಪಾಲನಾ ಕೇಂದ್ರಗಳ ಸ್ಥಾಪನೆ: ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌ ರಾಜು.ಜಿ ಮಾತನಾಡಿ, ನಗರದ ವಿವಿಧೆಡೆ ವ್ಯಾಘ್ರವಾಗಿ ವರ್ತಿಸುವ ನಾಯಿಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಾಯಿ ಪಾಲನಾ ಕೇಂದ್ರಗಳನ್ನು ಸ್ಥಾಪನೆ ಮಾಡುವ ಚಿಂತನೆ ಇತ್ತು. ಇದರ ಬದಲಾಗಿ ಪಾಲಿಕೆಯಿಂದಲೇ ಬೀದಿನಾಯಿಗಳ ಪಾಲನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಇತ್ತೀಚೆಗೆ ನಗರದಲ್ಲಿ ರೇಬಿಸ್‌ ರೋಗದಿಂದ ಮೃತಪಟ್ಟಿರುವ 31 ವರ್ಷದ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಆಯುಕ್ತರೊಂದಿಗೆ ಚರ್ಚೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next