ಬೆಂಗಳೂರು: ಎಸ್ಸಿ ಎಸ್ಟಿ ನೌಕರರ ಹಿತ ಕಾಯಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾಯ್ದೆ ಜಾರಿಯಾಗದಿರುವ ಬಗ್ಗೆ ನನಗೂ ಅಸಮಾಧಾನವಿದೆ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿ.ಕೆ. ಪವಿತ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ಆದೇಶದಿಂದ ಹಿಂಬಡ್ತಿ ಪಡೆದ ಎಸ್ಸಿ ಎಸ್ಟಿ ನೌಕರರಿಗೆ ಮುಂಬಡ್ತಿ ನೀಡುವ ಕುರಿತಂತೆ ರಾಜ್ಯ ಸರ್ಕಾರ ವಿಶೇಷ ಕಾಯ್ದೆ ಜಾರಿಗೆ ತಂದಿದ್ದು ಅದನ್ನು ಅನುಷ್ಠಾನಗೊಳಿಸಲು ಇರುವ ಕಾನೂನು ತೊಡಕುಗಳ ಬಗ್ಗೆ ಈಗಾಗಲೇ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.
ಕಾಯ್ದೆ ಜಾರಿ ಮಾಡುವ ಕುರಿತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜೊತೆಗೆ ಚರ್ಚೆ ಮಾಡುತ್ತೇನೆ. ರಾಷ್ಟ್ರಪತಿಯಿಂದ ಅಂಗೀಕಾರಗೊಂಡ ಕಾಯ್ದೆ ಆದಷ್ಟು ಬೇಗ ಜಾರಿಯಾಗಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಕ್ಷದಲ್ಲಿನ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವುದರಲ್ಲಿ ಯಾವುದೇ ಶಾಸಕರಿಗೂ ತಾರತಮ್ಯ ಮಾಡಿಲ್ಲ. ಕ್ಷೇತ್ರಗಳ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಇದೆ ಎಂದು ಶಾಸಕರು ಅಸಮಾಧಾನ ಹೊಂದಿರಬಹುದು. ಅದನ್ನು ಬಗೆ ಹರಿಸಿಲಾಗಿದೆ. ಶಾಸಕರು ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ ಎಂದರು.
ಬಿಜೆಪಿಯವರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನ ಪಟ್ಟಿರುವುದು ನಿಜ. ಬಿಜೆಪಿಯವರು ಈ ಹಿಂದೆ ಅಧಿಕಾರದ ರುಚಿ ನೋಡಿರುವುದರಿಂದ ಅವರಿಗೆ ಅಧಿಕಾರ ಬಿಟ್ಟು ಇರಲು ಆಗುತ್ತಿಲ್ಲ. ಹೀಗಾಗಿ ಅಧಿಕಾರ ಪಡೆಯಲು ಏನೇನೋ ಸರ್ಕಸ್ ಮಾಡುತ್ತಿದ್ದಾರೆ. ಯಡಿಯೂರಪ್ಪ ಮಾಡುವ ಯಾವುದೇ ಪ್ರಯತ್ನವೂ ಯಶಸ್ವಿಯಾಗುವುದಿಲ್ಲ ಎಂದರು.
ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್‌ಗೆ ಅಸಮಾಧಾನ ಇರುವುದು ನಿಜ. ಅದನ್ನು ಬಗೆ ಹರಿಸುತ್ತೇವೆ. ಯಾವ ಶಾಸಕರೂ ಮಂತ್ರಿ ಸ್ಥಾನಕ್ಕೆ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿಲ್ಲ. ವಿಧಾನ ಪರಿಷತ್ ಚುನಾವಣೆ ಹಾಗೂ ಶಾಸಕರ ಸಮಸ್ಯೆಗಳ ಕುರಿತು ಚರ್ಚಿಸಲು ಮಂಗಳವಾರ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಅಲ್ಲಿ ಎಲ್ಲವನ್ನೂ ವಿಸ್ತೃತವಾಗಿ ಚರ್ಚಿಸಲಾಗುವುದು ಎಂದು ಹೇಳಿದರು.