Advertisement
ಸರ್ಕಾರಿ ನೌಕರಿಯಲ್ಲಿ ಬಡ್ತಿ ಮೀಸಲಾತಿ ವಿಧಾನ ಅನುಸರಿಸುವ ಕಾಯ್ದೆ ರದ್ದುಪಡಿಸಿರುವ ಆದೇಶ ಪಾಲನೆಗೆ ಡಿಸೆಂಬರ್ 31 ಗುಡುವು ನೀಡಿರುವುದರಿಂದ ರಾಜ್ಯ ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ಸಿಕ್ಕಂತಾಗಿದ್ದು, ಅಷ್ಟರಲ್ಲಿ ವಿಶೇಷ ಕಾಯ್ದೆ ರೂಪಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆದು ಸುಪ್ರೀಂಕೋರ್ಟ್‌ಗೆ ಸಲ್ಲಿಸುವ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸುತ್ತಿದೆ.
ಇಲ್ಲವಾದರೆ ನವೆಂಬರ್‌ನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಕಾಯ್ದೆ ರೂಪಿಸಿ ಸಲ್ಲಿಸುವುದು. ಅಷ್ಟರ ನಂತರವೂ ಸುಪ್ರೀಂಕೋರ್ಟ್ ಒಪ್ಪದಿದ್ದರೆ ಪರಿಷ್ಕೃತ ಪಟ್ಟಿ ಸಿದ್ಧಪಡಿಸಿ ಆದೇಶ ಪಾಲನೆ ಮಾಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಸ್ಪಷ್ಟನೆಯ ನಂತರವೂ ವಿಳಂಬ ಮಾಡಬಹುದು ಅಥವಾ ರಾಷ್ಟ್ರಪತಿಗೆ ಕಳುಹಿಸಬಹುದು. ಆದರೆ, ತಿರಸ್ಕಾರ ಮಾಡಲು ಬರುವುದಿಲ್ಲ ಎಂದು ಹೇಳಲಾಗಿದೆ.
Related Articles
ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು 10 ಇಲಾಖೆಗಳ ಪಟ್ಟಿ ಸಿದ್ಧಪಡಿಸಿದ್ದು ಇನ್ನೂ 22 ಇಲಾಖೆಗಳ ಪಟ್ಟಿ ಸಿದ್ಧಪಡಿಸಬೇಕಿದೆ. ಇದಕ್ಕಾಗಿ 9 ತಿಂಗಳು ಕಾಲಾವಕಾಶ ಕೊಡುವಂತೆ ಕೋರಿತ್ತು. ಆದರೆ, ಫೆಬ್ರವರಿ 9 ರಂದು ಆದೇಶ ನೀಡಿ ಮೇ 31 ರೊಳಗೆ ಪಟ್ಟಿ ಸಿದ್ಧಪಡಿಸಿ ಎಂದರೂ ಯಾಕೆ ಮಾಡಿಲ್ಲ ಎಂದು ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿ, ಈಗಾಗಲೇ 10 ಇಲಾಖೆಗಳಲ್ಲಿ ಸಿದ್ಧಪಡಿಸಿರುವ ಪಟ್ಟಿ ಅಕ್ಟೋಬರ್ 31 ಕ್ಕೆ ಬಿಡುಗಡೆ ಮಾಡಿ. ನಂತರ ಉಳಿದ 22 ಇಲಾಖೆಗಳ ಪಟ್ಟಿ ನವೆಂಬರ್ 30 ರೊಳಗೆ ಸಿದ್ಧಪಡಿಸಿ ಡಿಸೆಂಬರ್ 31 ರೊಳಿಗೆ ಜಾರಿಗೊಳಿಸಿ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
Advertisement
ಈ ಸಂಬಂಧ ನ್ಯಾಯಾಂಗ ನಿಂಧನೆ ಅರ್ಜಿ ವಿಚಾರಣೆ ಮುಂದಿನ ವರ್ಷ ಜನವರಿ 15 ಕ್ಕೆ ಮುಂದೂಡಲಾಗಿದೆ. ಹೀಗಾಗಿ, ಸರ್ಕಾರ ಅಷ್ಟರೊಳಗೆ ಒಂದೋ ಆದೇಶ ಪಾಲನೆ ಮಾಡಬೇಕು, ಇಲ್ಲವೋ ಇನ್ನೊಂದು ಪ್ರಯತ್ನ ಎಂಬಂತೆ ಕಾಯ್ದೆ ರೂಪಿಸಬೇಕಿದೆ.