ಧಾರವಾಡ: ಸ್ಥಳೀಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕೈ-ದಳ ಮತ್ತು ಕಮಲ ಪಾಳೆಯದ ಪ್ರಚಾರ ಜೋರಾಗಿ ನಡೆದಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಎರಡೂ ಪಕ್ಷಗಳ ಮಧ್ಯೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದ್ದಂತೂ ಸತ್ಯ.
ಕಳೆದ ಬಾರಿ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದ ಪ್ರಹ್ಲಾದ ಜೋಶಿ ಅವರನ್ನು ಈ ಬಾರಿ ಪ್ರಚಾರ ಸಮಯದಲ್ಲೇ ಸರಿಯಾಗಿಯೇ ಕೌಂಟರ್ ಕೊಟ್ಟ ಕಾಂಗ್ರೆಸ್-ಜೆಡಿಎಸ್, ಕಮಲ ಪಾಳೆಯದ ತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಲೇ ಸಾಗಿದ್ದು, ಸದ್ಯ ಎರಡೂ ಪಕ್ಷಗಳ ಮಧ್ಯೆ ಸಮಬಲದ ಪ್ರಚಾರ ಭರಾಟೆ-ಹೋರಾಟ ಗೋಚರಿಸುತ್ತಿದೆ.
ಸತತ ಮೂರು ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಗೆದ್ದು ಇದೀಗ ಬೌಂಡರಿ ಬಾರಿಸುವ ತವಕದಲ್ಲಿರುವ ಹ್ಯಾಟ್ರಿಕ್ ಹಿರೋ ಪ್ರಹ್ಲಾದ ಜೋಶಿ ಅವರು ಪ್ರತಿ ಬಾರಿಯೂ ತಂತ್ರಗಾರಿಕೆಯ ಜೊತೆಗೆ ಅಲೆಗಳ ಮಧ್ಯೆ ತೇಲಿ ಆಯ್ಕೆಯಾಗಿದ್ದು ಬಹಿರಂಗ ಸತ್ಯವೇ. ಇದೇ ವಿಚಾರ ಈ ಬಾರಿ ಕಾಂಗ್ರೆಸ್‌ಗೆ ಇಲ್ಲಿ ಚುನಾವಣಾ ಅಸ್ತ್ರವಾಗಿದೆ. ಸತತ ಮೂರು ಬಾರಿ ಅಲೆಗಳಲ್ಲಿ ಗೆದ್ದಿರುವ ಜೋಶಿ ಅವರು ಕ್ಷೇತ್ರಕ್ಕೇನೂ ಮಾಡಿಲ್ಲ ಎನ್ನುವ ಆರೋಪಗಳ ಸುರಿಮಳೆಯನ್ನೇ ಕಾಂಗ್ರೆಸ್‌ನ ಪ್ರಚಾರ ಸಮಿತಿ ಹೈಲೈಟ್ ಮಾಡುತ್ತಿದ್ದು, ಬಿಜೆಪಿಗೆ ಇದು ಕೊಂಚ ತಲೆನೋವಾಗಿ ಪರಿಣಮಿಸಿದೆ.
ಜಾಲತಾಣದಲ್ಲೂ ತಂತ್ರ-ಪ್ರತಿತಂತ್ರ: ಕಳೆದ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಹೆಣೆಯುತ್ತಿದ್ದ ರಣತಂತ್ರಗಳಿಗೆ ಕಾಂಗ್ರೆಸ್ ಹೆಚ್ಚು ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆದರೆ ಈ ಬಾರಿ ಬಿಜೆಪಿ ಯಾವುದೇ ತಂತ್ರ ರೂಪಿಸಿದರೂ ಅದಕ್ಕೆ ಕೈ ಪಡೆ ಸರಿಯಾಗಿ ಕೌಂಟರ್ ಕೊಡುತ್ತಿದೆ. ಹೀಗಾಗಿ ಎರಡೂ ಪಕ್ಷಗಳ ಮಧ್ಯೆ ಮತ್ತಷ್ಟು ಜಿದ್ದಾಜಿದ್ದಿ ಏರ್ಪಟ್ಟಿರುವುದಂತೂ ಸತ್ಯ.
ಕೈ ಅಭ್ಯರ್ಥಿ ವಿರುದ್ಧ ಉರ್ದು ಕರಪತ್ರ ಸಿದ್ಧಗೊಳಿಸಿದ ಆರೋಪ ಬರುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಯಿತು. ಕೂಡಲೇ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಇದೊಂದು ಸುಳ್ಳುಸುದ್ದಿ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿತು. ಅದೇ ರೀತಿ ಲಿಂಗಾಯತ ಧರ್ಮ ವಿಚಾರ ಎತ್ತಿದಾಗಲೂ ಈ ಬಗ್ಗೆ ಸ್ಪಷ್ಟನೆ ನೀಡಿತು. ಹೀಗಾಗಿ ಇದೀಗ ಕೈ-ಕಮಲ ಮಧ್ಯೆ ಪ್ರಚಾರ ಮತ್ತು ಪಟ್ಟಿಗೆ ತಿರುಪಟ್ಟು, ಟಾಂಗ್‌ಗೆ ಬಗಲ್ ಟಾಂಗ್ ಕೊಡುವುದರಲ್ಲಿ ಎರಡೂ ಪಕ್ಷಗಳು ಚರ್ಚೆಯಾಗಬೇಕಿದ್ದ ವಿಚಾರಗಳನ್ನು ಮರೆ ಮಾಚಿದವು. ಪ್ರತಿ ಬಾರಿ ಸಾಮಾಜಿಕ ಜಾಲತಾಣವನ್ನು ಅಷ್ಟೊಂದು ಪ್ರಭಾವಿ ಪ್ರಚಾರ ಮಾಧ್ಯಮವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಈ ಬಾರಿ ಬಿಜೆಪಿಗೆ ಸರಿಸಮವಾಗಿ ಕೆಲಸ ನಿರ್ವಹಿಸುತ್ತಿದೆ ಎನ್ನುವ ಮಾತುಗಳು ಮತದಾರರಿಂದ ಕೇಳಿ ಬರುತ್ತಿವೆ.
Advertisement
ಚುನಾವಣೆಯಲ್ಲಿ ಆರೋಪ ಪ್ರತ್ಯಾರೋಪಗಳೇ ಮುನ್ನೆಲೆಗೆ ಬಂದು ಹೋಗಿರುವ ಬಗ್ಗೆ ಕ್ಷೇತ್ರದ ಜನರಿಗೆ ಸಾಕಷ್ಟು ಬೇಸರವಿದ್ದು, ಅಭಿವೃದ್ಧಿ-ರಾಜಕೀಯ ಒಳಮರ್ಮಗಳ ಕುರಿತು ಮತ್ತು ಸೈದ್ಧಾಂತಿಕ ಆಧಾರದಲ್ಲಿ ಚುನಾವಣೆ ನಡೆಯುತ್ತಿಲ್ಲ ಎನ್ನುವ ಕುರಿತು ಸಾಕಷ್ಟು ಮತದಾರರು ಬಂಡಾಯದ ಮಾತುಗಳನ್ನಾಡಿದ್ದಾರೆ.
Related Articles
Advertisement
ವೈಯಕ್ತಿಕ ಸ್ತುತಿ ನಿಂದೆ: ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ, ನಗರಗಳ ಅಭಿವೃದ್ಧಿ ಯೋಜನೆಗಳು, ಅನ್ಯ ಜಿಲ್ಲೆಗಳಿಗೆ ಹೋಲಿಸಿಕೊಂಡು ಇಲ್ಲಿ ಇನ್ನೇನು ಆಗಬೇಕಿದೆ ಎಂಬ ಅನೇಕ ವಿಚಾರಗಳು ಈ ಬಾರಿಯ ಚುನಾವಣೆ ಪ್ರಚಾರ ವೇಳೆ ಯಾವ ಅಭ್ಯರ್ಥಿಗಳಿಂದಲೂ ಪ್ರಸ್ತಾಪವಾಗಲಿಲ್ಲ.
ವೈಯಕ್ತಿಕ ನೆಲೆಯಲ್ಲಿನ ಆರೋಪ-ಪ್ರತ್ಯಾರೋಪಗಳೇ ಹೆಚ್ಚಾಗಿ ಹೋದವು. ಜಿಲ್ಲೆಗೆ ನಿಮ್ಮ ಕೊಡುಗೆ ಏನು? ಎಂಬ ಪ್ರಶ್ನೆಯನ್ನು ಕಾಂಗ್ರೆಸ್‌ನವರು ಬಿಜೆಪಿಗೆ ಕೇಳಿದ್ದೇ ಕೇಳಿದ್ದು. ಇದಕ್ಕೆ ಪ್ರತಿಯಾಗಿ ನೀವೇನು ಮಾಡಿದ್ದೀರಿ? ಎಂದು ಕಾಂಗ್ರೆಸ್‌ನವರಿಗೆ ಬಿಜೆಪಿ ಮರು ಪ್ರಶ್ನೆ. ಸತತ 15 ದಿನಗಳ ಕಾಲ ನಡೆದ ಎಲ್ಲಾ ಬಹಿರಂಗ ಪ್ರಚಾರ ಸಮಾವೇಶದಲ್ಲೂ ಅತೀ ಹೆಚ್ಚು ವೈಯಕ್ತಿಕ ವಿಚಾರಗಳೇ ಪ್ರಸ್ತಾಪವಾಗಿರುವುದು ಗೋಚರಿಸುತ್ತದೆ.
ಧರ್ಮ, ಗೌಡಾಸ್ತ್ರ : ಜೋಶಿ-ಕುಲಕರ್ಣಿಗೆ ಬಿಸಿತುಪ್ಪ
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮತ್ತು ಯೋಗೀಶಗೌಡ ಕೊಲೆ ಪ್ರಕರಣಗಳನ್ನು ಮುಂದಿಟ್ಟುಕೊಂಡೆ ಬಿಜೆಪಿ ವಿನಯ್ ಕುಲಕರ್ಣಿ ಅವರನ್ನು ಹಣಿದಿತ್ತು. ಇದು ಕೊಂಚ ಮಟ್ಟಿಗೆ ಮತದಾರರನ್ನು ಸೆಳೆದಿತ್ತು. ಆದರೆ ಈ ಚುನಾವಣೆಯಲ್ಲಿ ಈ ಎರಡೂ ಅಸ್ತ್ರಗಳು ಬಿಜೆಪಿ ಅಂದುಕೊಂಡಷ್ಟು ಕೆಲಸ ಮಾಡಲಿಲ್ಲ. ಪ್ರಚಾರ ವೇಳೆ ಅಪ್ಪಿ ತಪ್ಪಿಯೂ ಬಿಜೆಪಿ ಮುಖಂಡರು ಈ ಬಾರಿ ಎಲ್ಲಿಯೂ ಯೋಗೀಶಗೌಡ ಕೊಲೆ ಪ್ರಕರಣ ಮತ್ತು ಧರ್ಮ ಒಡೆದ ವಿಚಾರವನ್ನು ಪ್ರಸ್ತಾಪಿಸಿ ಇಂತಹವರನ್ನು ಸೋಲಿಸಿ ಎಂದು ಕರೆ ಕೊಡಲಿಲ್ಲ. ಈ ಎರಡೂ ವಿಚಾರಗಳಲ್ಲಿ ವಿನಯ್ ಜಾಣ ನಡೆ ಅನುಸರಿಸಿಯಾಗಿತ್ತು. ಅದೇ ರೀತಿ ಲಿಂಗಾಯತ ಧರ್ಮ ವಿಚಾರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಜಾಣ ನಡೆ ಪ್ರದರ್ಶನ ಮಾಡಿ, ಎಲ್ಲಿಯೂ ಈ ಬಗ್ಗೆ ಚಕಾರ ಎತ್ತದಂತೆ ಪ್ರಚಾರ ಮಾಡಿದ್ದಾರೆ. ಹೀಗಾಗಿ ಇಲ್ಲಿ ಇಬ್ಬರೂ ಪ್ರಚಾರ ವೇಳೆ ಜಾಣ್ಮೆಯಿಂದಲೇ ತಂತ್ರ-ಪ್ರತಿತಂತ್ರ ಬಳಸಿದ್ದು ವಿಶೇಷ ಎನ್ನಬಹುದು.
ಚುನಾವಣೆ ಅಂದ್ರ ಸಿದ್ಧಾಂತಗಳು, ತಾವು ಮಾಡಬೇಕಾದ ಕಾರ್ಯಗಳು, ಜನರಿಗೆ-ಕ್ಷೇತ್ರಕ್ಕಾಗಿ ತಾವೇನು ಮಾಡುತ್ತೇವೆ ಎನ್ನುವುದರ ನೀಲನಕ್ಷೆ ಆಧಾರದಲ್ಲಿ ನಡೆಯಬೇಕು. ಪ್ರಚಾರ ವೇಳೆ ಈ ವಿಚಾರ ಅಭ್ಯರ್ಥಿಗಳು ಪ್ರಸ್ತಾಪಿಸಬೇಕು. ಆದರೆ ಇಲ್ಲೇನಿದ್ದರೂ ಅಂವಂದ ಹಂಗ, ಇವಂದ ಹಿಂಗ ಇದ ಆಗೋತು.
• ಮಾಧುರಿ ರಮಾಕಾಂತಕುಲಕರ್ಣಿ, ಮಾಳಮಡ್ಡಿ
• ಆಯೇಶಾ ಸೈಯದ್, ಜಲದರ್ಶಿನಿ ಬಡಾವಣೆ ನಿವಾಸಿ ಪ್ರಜಾಪ್ರಭುತ್ವ ಮೌಲ್ಯಗಳ ಆಧಾರ ಮೇಲೆ ಅಭ್ಯರ್ಥಿಗಳು ಚುನಾವಣೆ ಪ್ರಚಾರ ಮಾಡಬೇಕು. ಆದರೆ ವೈಯಕ್ತಿಕ ನಿಂದೆ, ಹಿತಾಸಕ್ತಿಗಳೇ ವಿಜೃಂಭಿಸುತ್ತಿವೆ. ಚುನಾವಣಾ ಆಯೋಗ ಎಷ್ಟೇ ಕಠಿಣ ನಿಯಮ ತಂದರೂ ರಾಜಕಾರಣಿಗಳು ಅದನ್ನು ಪಾಲಿಸುತ್ತಿಲ್ಲ. ಚುನಾವಣೆ ಪ್ರಚಾರಕ್ಕೆ ಭಾರಿ ಮಹತ್ವವಿದೆ. ಅದನ್ನು ಅಭ್ಯರ್ಥಿಗಳು ಇನ್ನಾದರೂ ಅರಿಯಬೇಕು.
• ಡಾ|ಪ್ರಭಾಕರ ಕಾಂಬ್ಳೆ, ಪ್ರಾಧ್ಯಾಪಕ, ಕೆಸಿಡಿ, ಧಾರವಾಡ ಬಸವರಾಜ ಹೊಂಗಲ್
• ಮಾಧುರಿ ರಮಾಕಾಂತಕುಲಕರ್ಣಿ, ಮಾಳಮಡ್ಡಿ
ನೋಡಿ, ನಾವು ಚುನಾವಣೆ ಪ್ರಚಾರದಲ್ಲೇ ಅಭ್ಯರ್ಥಿಗಳ ಗುಣಮಟ್ಟ ಅಳೆಯುವುದು. ಆದರೆ ಇತ್ತೀಚಿನ ವರ್ಷಗಳಲ್ಲಿ ವಿಷಯಾಧಾರಿತ ಚುನಾವಣೆ ಪ್ರಚಾರ ನಡೆಯುತ್ತಲೇ ಇಲ್ಲ. ಬರೀ ಧರ್ಮ, ವೈಯಕ್ತಿಕ ನಿಂದೆ, ಸ್ವಜನ ಪಕ್ಷಪಾತಗಳ ವಿಚಾರಗಳೇ ಪ್ರಸ್ತಾಪವಾಗುತ್ತಿರುವುದು ಬೇಸರ ತಂದಿದೆ.
• ಪ್ರಕಾಶ ಹೆಬ್ಬಳ್ಳಿ, ಸಾಫ್ಟ್‌ವೇರ್ ಎಂಜಿನಿಯರ್, ಕಮಲಾಪುರ, ಧಾರವಾಡ
ನಾನು ನಿಜಲಿಂಗಪ್ಪ,ಅರಸು, ಜತ್ತಿ ಕಾಲದಿಂದಲೂ ಚುನಾವಣೆಗಳನ್ನು ನೋಡೇನಿ. ಆವಾಗ ಚಹಾ-ಚುರಮರಿ ಚುನಾವಣೆ, ದೇಶ-ರಾಜ್ಯ ಸ್ಥಳೀಯ ಮಟ್ಟದಲ್ಲಿ ಮಾಡುವ ಕೆಲಸಗಳ ಕುರಿತು ಪ್ರಚಾರದಲ್ಲಿ ಚಿಂತನೆ ನಡೆತಿತ್ತು. ಆದ್ರೆ ಈಗ ಇಂವಾ ಅವನ ಬೈಯೋದು, ಅಂವಾ ಇಂವನ ಬೈಯೋದೇ ಪ್ರಚಾರ ಆಗಿ ಬಿಟ್ಟಿದೆ.• ಪ್ರಕಾಶ ಹೆಬ್ಬಳ್ಳಿ, ಸಾಫ್ಟ್‌ವೇರ್ ಎಂಜಿನಿಯರ್, ಕಮಲಾಪುರ, ಧಾರವಾಡ
• ಆಯೇಶಾ ಸೈಯದ್, ಜಲದರ್ಶಿನಿ ಬಡಾವಣೆ ನಿವಾಸಿ ಪ್ರಜಾಪ್ರಭುತ್ವ ಮೌಲ್ಯಗಳ ಆಧಾರ ಮೇಲೆ ಅಭ್ಯರ್ಥಿಗಳು ಚುನಾವಣೆ ಪ್ರಚಾರ ಮಾಡಬೇಕು. ಆದರೆ ವೈಯಕ್ತಿಕ ನಿಂದೆ, ಹಿತಾಸಕ್ತಿಗಳೇ ವಿಜೃಂಭಿಸುತ್ತಿವೆ. ಚುನಾವಣಾ ಆಯೋಗ ಎಷ್ಟೇ ಕಠಿಣ ನಿಯಮ ತಂದರೂ ರಾಜಕಾರಣಿಗಳು ಅದನ್ನು ಪಾಲಿಸುತ್ತಿಲ್ಲ. ಚುನಾವಣೆ ಪ್ರಚಾರಕ್ಕೆ ಭಾರಿ ಮಹತ್ವವಿದೆ. ಅದನ್ನು ಅಭ್ಯರ್ಥಿಗಳು ಇನ್ನಾದರೂ ಅರಿಯಬೇಕು.
• ಡಾ|ಪ್ರಭಾಕರ ಕಾಂಬ್ಳೆ, ಪ್ರಾಧ್ಯಾಪಕ, ಕೆಸಿಡಿ, ಧಾರವಾಡ ಬಸವರಾಜ ಹೊಂಗಲ್