ಕುಂದಗೋಳ: ಪಟ್ಟಣದ ಪಂಚಾಯ್ತಿ ಚುನಾವಣೆ ಅಂಗಳ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಅಭ್ಯರ್ಥಿಗಳ ಪ್ರಚಾರಕ್ಕೆ ಸಂಜೆ ಮಳೆಯು ಅಡಚಣೆ ಉಂಟು ಮಾಡುತ್ತಿದ್ದರಿಂದ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ ಕೋರುತ್ತಿರುವುದು ವಿಶೇಷವಾಗಿ ಕಂಡುಬರುತ್ತಿದೆ.
ಪ್ರಸಕ್ತ ಚುನಾವಣೆಯಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಕಣದಲ್ಲಿರುವುದು ವಿಶೇಷವಾಗಿದೆ. 9ನೇ ವಾರ್ಡ್‌ನ ಅಭ್ಯರ್ಥಿ 25 ವರ್ಷದ ಶಿವರಾಜ ಕನೋಜ ಅತೀ ಕಿರಿಯ ವಯಸ್ಸಿನವರಾದರೆ, ಅತೀ ಹಿರಿಯ 65 ವಯಸ್ಸಿನ ಶಿದ್ದಪ್ಪ ಚುರಿಯವರಾಗಿದ್ದಾರೆ.ಹೆಚ್ಚಿನದಾಗಿ 30ರಿಂದ 45 ವರ್ಷದ ಒಳಗಿನ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಯುವಕರ ಪಡೆ ಸೇರಿಕೊಂಡು ತಮ್ಮ ಪರವಾಗಿ ಮತ ಯಾಚಿಸುವುದು ಕಂಡುಬರುತ್ತಿದೆ.
ಇಬ್ಬರಿಗಷ್ಟೇ ಮರು ಆಯ್ಕೆ ಅವಕಾಶ: ಕಳೆದ ಅವಧಿಯಲ್ಲಿದ್ದ 15 ಚುನಾಯಿತ ಪ್ರತಿನಿಧಿಗಳಲ್ಲಿ ಕೇವಲ ಇಬ್ಬರು ಮರು ಆಯ್ಕೆಗೆ ಕಣಕ್ಕಿಳಿದಿದ್ದಾರೆ. ಅದರಲ್ಲೂ ವಿಶೇಷವೆಂದರೆ ಅವರಿಬ್ಬರೂ ಸಹ ಅಧ್ಯಕ್ಷ ಸ್ಥಾನದ ಗಾದಿ ಏರಿದವರೇ ಆಗಿದ್ದಾರೆ! ಕಳೆದ ಎರಡು ಬಾರಿ ಸತತವಾಗಿ ಆಯ್ಕೆಗೊಂಡಿದ್ದ ಮಲ್ಲಿಕಾರ್ಜುನ ಕಿರೇಸೂರ ಅವರು 3ನೇ ಬಾರಿಗೆ ಸ್ಪರ್ಧೆಗಿಳಿದಿದ್ದಾರೆ. 16ನೇ ವಾರ್ಡ್‌ನಿಂದ ಎರಡನೇ ಬಾರಿಗೆ ಯಲ್ಲವ್ವ ಭಜಂತ್ರಿಯವರು ಕಣದಲ್ಲಿದ್ದಾರೆ. ಇವರಿಬ್ಬರೂ ಬಿಜೆಪಿಯಿಂದ ಸ್ಪರ್ಧಿಸಿದ್ದು, ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದರು. ಇನ್ನು ನಾಡಗೇರ ವಾಡೆ ಧಣಿಯರಾದ ಶ್ಯಾಮಸುಂದರ ದೇಸಾಯಿಯವರು ಬಿಜೆಪಿಯಿಂದ 12ನೇ ವಾರ್ಡ್‌ನಲ್ಲಿ ಸ್ಪರ್ಧೆಗೆ ಇಳಿದ್ದಾರೆ.
ಜಿದ್ದಾಜಿದ್ದಿನ ಹಣಾಹಣಿ: ಕಳೆದ ಅವಧಿಯಲ್ಲಿ ಅಜೀಜ ಕ್ಯಾಲಕೊಂಡ ಅಧ್ಯಕ್ಷರಾಗಿದ್ದು, ಈ ಬಾರಿ ಅವರ ಸಹೋದರ ಮಹ್ಮದ್ ಸಲೀಂ ಕ್ಯಾಲಕೊಂಡ ಅವರು 5ನೇ ವಾರ್ಡ್ ನಿಂದ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಿರೇಸೂರ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ. ಈ ವಾರ್ಡ್ ಎಲ್ಲರ ಗಮನ ಸೆಳೆಯುತ್ತಿದೆ. ಇವರಿಬ್ಬರ ಮಧ್ಯ ನೇರ ಹಣಾಹಣಿ ಇದ್ದರೂ ಜೆಡಿಎಸ್ ಅಭ್ಯರ್ಥಿ ಹುಸೇನಸಾಬ ಆಶಮ್ಮನವರ ಇರುವುದರಿಂದ ತೀವ್ರ ಪೈಪೋಟಿ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಎಲ್ಲ 19 ವಾಡ್ ಗಳಿಂದ ಸ್ಪರ್ಧೆಗಿಳಿದಿದ್ದು, ಜೆಡಿಎಸ್ ಕೇವಲ 7 ವಾರ್ಡ್‌ಗಳಲ್ಲಿ ಸ್ಪರ್ಧೆಗಿಳಿದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಹೇಗಾದರೂ ಮಾಡಿ ಪಪಂನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ತಂತ್ರ ಹೆಣೆಯುತ್ತಿದ್ದರೆ, ಪ್ರತಿಯಾಗಿ ಜೆಡಿಎಸ್ ನವರು ಕಿಂಗ್‌ಮೇಕರ್ ಆಗಲು ಪ್ರತಿತಂತ್ರ ರೂಪಿಸುತ್ತಿದ್ದಾರೆ. ಪ್ರತಿ ವಾರ್ಡ್‌ನಲ್ಲೂ ಅಭ್ಯರ್ಥಿಗಳು ಬೆಳಗ್ಗೆಯಿಂದಲೇ ಮನೆ ಮನೆಗೆ ತೆರಳಿ ಪ್ರಚಾರದಲ್ಲಿ ತೊಡಗಿದ್ದಾರೆ.
-ಶೀತಲ್ ಮುರಗಿ