ಉಡುಪಿ: ಬೆಂಗಳೂರಿನ ಆರ್‌ಬಿಐಯ ವಿತ್ತೀಯ ಸೇರ್ಪಡೆ ಮತ್ತು ಅಭಿವೃದ್ಧಿ ಇಲಾಖೆಯು ಸಿಂಡಿಕೇಟ್ ಬ್ಯಾಂಕ್‌ನ ಉಡುಪಿ ಜಿಲ್ಲಾ ಲೀಡ್ ಬ್ಯಾಂಕ್ ಕಚೇರಿಯ ಸಹಯೋಗದಲ್ಲಿ ಮಂಗಳವಾರ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಶೀಲರಿಗಾಗಿ (ಎಂಎಸ್‌ಎಂಇ) ಆಯೋಜಿಸಿದ ಟೌನ್‌ಹಾಲ್ ಸಭೆಯಲ್ಲಿ ಸುಮಾರು 150 ಉದ್ಯಮಶೀಲರು ಮತ್ತು ಜಿಲ್ಲೆಯ ಎಲ್ಲ ಬ್ಯಾಂಕುಗಳ ಪ್ರತಿನಿಧಿಗಳು ಪಾಲ್ಗೊಂಡರು. ಬ್ಯಾಂಕ್‌ನಲ್ಲಿ ಲಭ್ಯವಿರುವ ಸೌಲಭ್ಯ ಗಳನ್ನು ಸಣ್ಣ ಮತ್ತು ಅತಿ ಸಣ್ಣ ಉದ್ಯಮಶೀಲರಿಗೆ ತಲುಪಿಸುವುದು, ಭಾಗೀದಾರರ ಪರಸ್ಪರ ಸಂವಹನ, ಎಂಎಸ್‌ಎಂಇಗೆ ಸಾಲದ ಸಂಪರ್ಕ ಸಭೆಯ ಉದ್ದೇಶವಾಗಿತ್ತು.
ಆರ್‌ಬಿಐ ವಿತ್ತೀಯ ಸೇರ್ಪಡೆ ವಿಭಾಗದ ಮಹಾಪ್ರಬಂಧಕ ಸಂಜೀವ ಸಿಂಗ್ ಮಾತನಾಡಿ, ಸರಕಾರ ಮತ್ತು ಆರ್‌ಬಿಐಗಳು ಎಂಎಸ್‌ಎಂಇಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದು, ಎಂಎಸ್‌ಎಂಇ ಎದುರಿಸುತ್ತಿರುವ ನಗದು ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದರು. ಸಣ್ಣ ಮತ್ತು ಅತಿ ಸಣ್ಣ ಉದ್ಯಮಶೀಲರು, ಕರಕುಶಲ ಉದ್ಯಮಿಗಳು, ಗ್ರಾಮೀಣ ಕೈಗಾರಿಕೆಗಳತ್ತ ಬ್ಯಾಂಕ್‌ಗಳು ಗಮನ ಕೇಂದ್ರೀಕರಿಸಬೇಕು ಎಂದು ಜಿ.ಪಂ. ಸಿಇಒ ಪ್ರೀತಿ ಗೆಹೊಲೊಟ್ ಕರೆ ನೀಡಿದರು.
1920ರಲ್ಲಿಯೇ ಸಿಂಡಿಕೇಟ್ ಬ್ಯಾಂಕ್ ನೇಕಾರರಿಗೆ ಸಾಲ ಸೌಲಭ್ಯ ನೀಡಲು ಯೋಜನೆಗಳನ್ನು ರೂಪಿಸಿತ್ತು. ಬ್ಯಾಂಕಿನ ಉದ್ದೇಶವೇ ಸಣ್ಣ ಮತ್ತು ಅತಿ ಸಣ್ಣ ಉದ್ಯಮಶೀಲರಿಗೆ ನೆರವಾಗುವುದು. ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳು ದೇಶದ ಆರ್ಥಿಕತೆಗೆ ಬಹಳಷ್ಟು ಕೊಡುಗೆ ನೀಡುತ್ತಿವೆ. ಶೇ.90 ಎಂಎಸ್‌ಎಂಇಗಳು ಅತಿ ಸಣ್ಣ ಘಟಕಗಳಾಗಿವೆ. ಆರು ಕೋಟಿ ಎಂಎಸ್‌ಎಂಇಗಳು 11 ಕೋಟಿ ಜನರಿಗೆ ಉದ್ಯೋಗಾವಕಾಶ ನೀಡಿವೆ. ಎಂಎಸ್‌ಎಂಇಗಳು 45 ಲ.ಕೋ. ರೂ. ಸಾಲ ನೀಡಬೇಕಾಗಿದ್ದು, ಇದು ಆಗಿರಲಿಲ್ಲ. ಇದನ್ನು ಆಗಗೊಳಿಸುವುದೇ ಬ್ಯಾಂಕ್‌ಗಳ ಮುಖ್ಯ ಕರ್ತವ್ಯ. ಬ್ಯಾಂಕುಗಳಿಂದ ಸಾಕಷ್ಟು ಕಾರ್ಯಕ್ರಮಗಳು ಇದಕ್ಕಾಗಿಯೇ ಇವೆ ಎಂದು ಸಿಂಡಿಕೇಟ್ ಬ್ಯಾಂಕ್ ವಲಯ ಪ್ರಬಂಧಕ ಭಾಸ್ಕರ ಹಂದೆ ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿಯವರು ವಿವಿಧ ಯೋಜನೆಗಳನ್ನು ವಿವರಿಸಿದರು. ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀಕೃಷ್ಣ ರಾವ್ ಕೊಡಂಚ ಸಲಹೆಗಳನ್ನು ನೀಡಿದರು. ಸಿಂಡ್‌ಆರ್‌ಸೆಟಿಯಿಂದ ನೀಡಿದ ವಿವಿಧ ತರಬೇತಿಗಳ ಕುರಿತು ನಿರ್ದೇಶಕ ಮಂಜುನಾಥ ನಾಯಕ್ ವಿವರಿಸಿದರು. ಲೀಡ್ ಬ್ಯಾಂಕ್ ಮುಖ್ಯ ಪ್ರಬಂಧಕ ರುದ್ರೇಶ್ ಡಿ.ಸಿ. ಕಾರ್ಯಕ್ರಮ ನಿರ್ವಹಿಸಿದರು.