Advertisement

ಮೋದಿ ನೇತೃತ್ವದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ

05:25 PM Jul 29, 2018 | |

ಹಿರೇಕೆರೂರ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನಾಲ್ಕು ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರಗಳ ಆರೋಪಗಳಿಲ್ಲದೇ, ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಪ್ರಾಮಾಣಿಕ ಕೆಲಸ ಮಾಡಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

Advertisement

ಪಟ್ಟಣದಲ್ಲಿ ಬಿಜೆಪಿ ತಾಲೂಕು ಘಟಕದಿಂದ ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆಗಳ ಪ್ರಚಾರಾರ್ಥವಾಗಿ ಹಮ್ಮಿಕೊಂಡಿದ್ದ ಬೈಕ್‌ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿದ ಕಲ್ಯಾಣ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿಗೊಳಿಸುವ ಮೂಲಕ ಪ್ರತಿ ತಿಂಗಳು 1 ಲಕ್ಷ ಕೋಟಿ ರೂ. ಸಂಗ್ರಹವಾಗುತ್ತಿದೆ. ಜಿಎಸ್‌ಟಿ ಜಾರಿಯಲ್ಲಿನ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಿ ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ ತೊಂದರೆಗಳಾದಂತೆ ನೋಡಿಕೊಳ್ಳಲಾಗಿದೆ. ಜನತೆಗೆ ತೆರಿಗೆ ಭಾರ ಕಡಿಮೆ ಮಾಡಲಾಗಿದೆ ಎಂದರು.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ, ಉಜ್ವಲ್‌ ಯೋಜನೆ, ಜನಧನ್‌, ಚೆಕ್‌ ಡ್ಯಾಂ, ತಂತ್ರಜ್ಞಾನದಿಂದ ಬೆಳೆವಿಮೆ ಜಾರಿ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಹಿಂದೆ ರಾಜ್ಯದಲ್ಲಿ 7 ಸಾವಿರ ಕಿಮೀ ರಾಷ್ಟ್ರೀಯ ಹೆದ್ದಾರಿ ಇದ್ದು, ನಮ್ಮ ಸರ್ಕಾರದ ಅವಧಿ ಯಲ್ಲಿ 13 ಸಾವಿರ ಕಿಮೀ ರಾಷ್ಟ್ರೀಯ ಹೆದ್ದಾರಿಯಾಗಿದೆ. ರಾಜ್ಯ ಹೆದ್ದಾರಿಗಿಂತ ರಾಷ್ಟ್ರೀಯ ಹೆದ್ದಾರಿ ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯ ಒಂದಾಗಿದೆ. ಚಿತ್ರದುರ್ಗದಿಂದ ಹುಬ್ಬಳ್ಳಿ ವರೆಗೆ 3 ಸಾವಿರ ಕೋಟಿ ರೂ. ವೆಚ್ಚದಲ್ಲಿ 6 ಪಥದ ರಾಷ್ಟ್ರೀಯ ಹೆದ್ದಾರಿ ಮಾಡಲಾಗುತ್ತಿದೆ ಮತ್ತು ರೈಲ್ವೇ ಜೋಡಿ ಹಳಿ ಮಾರ್ಗ ಅಳವಡಿಸಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ 100 ಕ್ಕೂ ಅಧಿಕ ಹೊಸ ಬ್ಯಾಂಕಗಳು ಸ್ಥಾಪಿತವಾಗಿವೆ ಎಂದರು.

ಮಾಜಿ ಶಾಸಕ ಯು.ಬಿ.ಬಣಕಾರ ಮಾತನಾಡಿ, ನೋಟು ರದ್ಧತಿ ಹಾಗೂ ಜಿಎಸ್‌ಟಿ ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರ ಕ್ರಮದಿಂದ ದೇಶದ ಆರ್ಥಿಕ ಸ್ಥಿತಿ ಸದೃಢಗೊಂಡಿದ್ದು, ಇಡೀ ವಿಶ್ವವೇ ಆಶ್ಚರ್ಯಪಡುವಂತೆ ಮತ್ತು ಮೆಚ್ಚುವಂತೆ ಪ್ರಧಾನಿ ನರೇಂದ್ರ ಮೋದಿ ಕಾರ್ಯೋನ್ಮುಖರಾಗಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡುಯ್ಯುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಸ್‌.ಆರ್‌.ಅಂಗಡಿ, ಟಿಎಪಿಎಂಎಸ್‌ ಅಧ್ಯಕ್ಷ ಎಸ್‌.ಎಸ್‌.ಪಾಟೀಲ, ಮುಖಂಡರಾದ ಲಿಂಗರಾಜ ಚಪ್ಪರದಹಳ್ಳಿ, ಮಹೇಶ ಗುಬ್ಬಿ, ನಿಂಗಪ್ಪ ಚಳಗೇರಿ, ಆನಂದಪ್ಪ ಹಾದಿಮನಿ, ಶಂಕರಗೌಡ ಚನ್ನಗೌಡ್ರ, ಬಸವರಾಜ ಬೇವಿನಹಳ್ಳಿ, ಶಿವಕುಮಾರ ತಿಪ್ಪಶೆಟ್ಟಿ, ರಘು ಮಾಳಮ್ಮನವರ, ರಾಜು ಬಣಕಾರ, ಲತಾ ಬಣಕಾರ, ಗೀತಾ ನಿಂಗಪ್ಪ ದಂಡಗೀಹಳ್ಳಿ, ಮಮತಾ ಪ್ರಭು ಮಳವಳ್ಳಿ, ಸಿದ್ದು ನರೇಗೌಡ್ರ, ಈರಣ್ಣ ಚಿಟ್ಟೂರ, ಕೊಟ್ರೇಶ ಅಂಗಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next