ನವದೆಹಲಿ: ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪನ್ನು ಮೂರು ತಿಂಗಳೊಳಗೆ ಜಾರಿ ಮಾಡಬೇಕು ಎಂಬ ದೆಹಲಿ ಹೈಕೋರ್ಟ್ ಆದೇಶದ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಸೋಮವಾರ ಸೂಚನೆ ನೀಡಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲೇ ಈ ಆದೇಶವನ್ನು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ನೀಡಿತ್ತಾದರೂ, ಮೂರು ತಿಂಗಳೊಳಗೆ ಜಾರಿಗೊಳಿಸಬೇಕು ಎಂದು ನವೆಂಬರ್ 12 ರಂದು ದೆಹಲಿ ಹೈಕೋರ್ಟ್ ಸೂಚಿಸಿತ್ತು. ಬಡ್ತಿ ನೀಡುವಾಗ ಉದ್ಯೋಗಿಗಳು ತಾವು ಹಿಂದುಳಿದ ಸಮುದಾಯಕ್ಕೆ ಬಂಧಿಸಿದವರಾಗಿದ್ದೇವೆ ಎಂಬುದಕ್ಕೆ ಸಂಬಂಧಿಸಿದಂತೆ ಅರ್ಹತಾ ಪತ್ರ ಪಡೆಯಬೇಕಿಲ್ಲ ಎಂದು ಕೋರ್ಟ್ ಸೂಚನೆ ನೀಡಿತ್ತು. ಇದಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದು, ಸೋಮವಾರ ನಡೆದ ವಿಚಾರಣೆಯಲ್ಲಿ ಕೋರ್ಟ್ ಈ ಆದೇಶ ನೀಡಿದೆ. ಅಲ್ಲದೆ, ಈ ವಿಚಾರವನ್ನು ವಿಸ್ತೃತವಾಗಿ ವಿಚಾರಣೆಗೆ ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.