Advertisement

ಆರ್ಥಿಕಾಭಿವೃದ್ಧಿಗೆ ಶ್ರೀಕಾರ

01:36 AM Jun 01, 2019 | mahesh |

ನವದೆಹಲಿ: ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ, ಮುಂದಿನ 100 ದಿನಗಳಲ್ಲಿ ದೇಶದ ಆರ್ಥಿಕತೆಯನ್ನು ಹೊಸ ದಿಕ್ಕಿನತ್ತ ಹೊರಳಿಸುವಂಥ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ. ತೀರಾ ಸಂಕೀರ್ಣವಾಗಿರುವ ಕಾರ್ಮಿಕ ಕಾನೂನುಗಳನ್ನು ಬದಲಾಯಿಸುವುದರಿಂದ ಹಿಡಿದು ವಿವಿಧ ಸರ್ಕಾರಿ ಸಂಸ್ಥೆಗಳ ಖಾಸಗೀಕರಣ, ಲ್ಯಾಂಡ್‌ ಬ್ಯಾಂಕ್‌ ಸ್ಥಾಪನೆ ಮುಂತಾದ ನಿರ್ಧಾರಗಳನ್ನು ಸರ್ಕಾರ ಅನುಷ್ಠಾನಕ್ಕೆ ತರಲಿದ್ದು, ಆ ಮೂಲಕ ದೇಶವನ್ನು ಪ್ರಗತಿ ಪಥದೆಡೆಗೆ ಕೊಂಡೊಯ್ಯಲು ತೀರ್ಮಾನಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Advertisement

ಕಾರ್ಮಿಕರಿಗಾಗಿ 44 ಕೇಂದ್ರೀಯ ಕಾನೂನುಗಳನ್ನು ವೇತನ, ಕೈಗಾರಿಕಾ ಸಂಬಂಧ, ಸಾಮಾಜಿಕ ಭದ್ರತೆ ಮತ್ತು ಅಭಿವೃದ್ಧಿ ಮತ್ತು ಔದ್ಯೋಗಿಕ ಭದ್ರತೆ ಎಂಬ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಔದ್ಯೋಗಿಕ ಭದ್ರತೆಯಲ್ಲಿ ಆರೋಗ್ಯ, ವೃತ್ತಿಗೆ ಅನುಕೂಲವಾದ ವಾತಾವರಣ ಎಂಬ ವಿಷಯಗಳು ಸೇರಲ್ಪಡುತ್ತವೆ.

ಈ ನಾಲ್ಕೂ ವಿಭಾಗಗಳ ಅಡಿಯಲ್ಲಿ ಬರುವ ಎಲ್ಲಾ ಕಾನೂನುಗಳನ್ನು ಈಗಿನ ಪರಿಸ್ಥಿತಿಗಳಿಗೆ, ಸ್ಥಿತಿಗತಿಗಳಿಗೆ ಹೊಂದುವಂತೆ ಬದಲಾಯಿಸಿ, ಉದ್ಯೋಗಿಗಳು ಹಾಗೂ ಉದ್ಯೋಗದಾತರ ನಡುವಿನ ಸಂಘರ್ಷಗಳಿಗೆ ಎಡೆ ಮಾಡಿಕೊಡುವಂಥ ನಿಯಮಗಳನ್ನು ರದ್ದುಗೊಳಿಸಿ ಅಥವಾ ತಿದ್ದುಪಡಿ ಮಾಡಿ ಅನುಕೂಲಕರ ಔದ್ಯೋಗಿಕ ವಾತಾವರಣ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಕುಮಾರ್‌ ಹೇಳಿದ್ದಾರೆ.

ಲ್ಯಾಂಡ್‌ ಬ್ಯಾಂಕ್‌: ಸಾರ್ವಜನಿಕ ಸಂಸ್ಥೆಗಳ ಉಸ್ತುವಾರಿಯಲ್ಲಿರುವ ಈವರೆಗೆ ಬಳಕೆಯಾಗದ ಭೂಮಿಯನ್ನು ವಿದೇಶಿ ಬಂಡವಾಳದಾರರಿಗೆ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಲ್ಯಾಂಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇಂಥ ಭೂಭಾಗಗಳನ್ನು ಕ್ಲಸ್ಟರ್‌ಗಳ (ಸಮೂಹ) ಮಾದರಿಯಲ್ಲಿ ಅಭಿವೃದ್ಧಿಗೊಳಿಸಿ ಒಂದೇ ತೆರನಾದ ಕೈಗಾರಿಕೆಗಳು ಒಂದು ನಿರ್ದಿಷ್ಟ ಪ್ರಾಂತ್ಯದಲ್ಲಿರುವಂಥ ಯೋಜನೆಯನ್ನು ರೂಪಿಸಲಾಗುತ್ತದೆ.

ಮಹಾ ಸುಧಾರಣೆಗೆ ಒತ್ತು: ಬ್ಯಾಂಕುಗಳು ಹಾಗೂ ಇನ್ನಿತರ ಸಾಲ ವಿತರಣಾ ಸಂಸ್ಥೆಗಳಿಗೆ ಸಾಲ ಮರುಪಾವತಿಯಾಗದ ಪರಿಣಾಮ, 2018ರ ಕೊನೆಯ ಮೂರು ತಿಂಗಳುಗಳಲ್ಲಿ ಭಾರತದ ಆರ್ಥಿಕತೆ ಇಳಿಕೆ ಕಂಡಿದ್ದು ಶೇ. 6.6ಕ್ಕೆ ಬಂದು ಮುಟ್ಟಿದೆ.

Advertisement

ಪ್ರಸಕ್ತ ವರ್ಷದ ಜನವರಿ-ಮಾರ್ಚ್‌ ಅವಧಿಯಲ್ಲೂ ಇದು ಮುಂದುವರಿದಿದೆ. ಹಾಗಾಗಿ, ಸರ್ಕಾರವು ತನ್ನ ಅಧೀನದ ಬ್ಯಾಂಕಿಂಗ್‌ ವಲಯವನ್ನು ಪುನಶ್ಚೇತನಗೊಳಿಸುವುದಲ್ಲದೆ, ಮೂಲಸೌಕರ್ಯ, ವಸತಿ ಸೌಕರ್ಯಗಳನ್ನು ದೇಶದ ಎಲ್ಲಾ ನಾಗರಿಕರಿಗೂ ನೀಡುವ ಮೂಲಕ ತೆರಿಗೆ ಮತ್ತಿತರ ರೂಪದಲ್ಲಿ ಹಣ ಸಂಗ್ರಹವಾಗುವುದರ ಕಡೆಗೆ ಗಮನ ನೀಡಬೇಕು. ಮೂಲ ಸೌಕರ್ಯಗಳು, ವಸತಿ ಯೋಜನೆಗಳು ವೇಗವಾಗಿ ಜಾರಿಗೊಳಿಸಲು ಆ ಯೋಜನೆಗಳನ್ನು ಖಾಸಗಿ ವಲಯಕ್ಕೆ ವಹಿಸಬೇಕೆಂದು ಕುಮಾರ್‌ ತಿಳಿಸಿದ್ದಾರೆ.

ಅಧಿಕಾರ ಸ್ವೀಕಾರ

ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಬಹುತೇಕ ಸಚಿವರು ಅಧಿಕಾರ ಸ್ವೀಕರಿಸಿದ್ದಾರೆ. ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್‌, ಜವಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಸ್ಮತಿ ಇರಾನಿ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ರಮೇಶ್‌ ಪೋಖ್ರೀಯಾಲ್, ರೈಲ್ವೆ ಸಚಿವರಾಗಿ ಪಿಯೂಷ್‌ ಗೋಯೆಲ್, ನಾಗರಿಕ ವಿಮಾನಯಾನ ಸಚಿವರಾಗಿ ಹರ್‌ದೀಪ್‌ ಪುರಿ, ಯುವಜನ ಮತ್ತು ಕ್ರೀಡಾ ಸ್ವತಂತ್ರ ಸಹಾಯಕ ಸಚಿವರಾಗಿ ಕಿರಣ್‌ ರಿಜಿಜು, ಪಶುಸಂಗೋಪನೆ ಸಚಿವರಾಗಿ ಗಿರಿರಾಜ್‌ ಸಿಂಗ್‌, ಪೆಟ್ರೋಲಿಯಂ ಸಚಿವರಾಗಿ ಧರ್ಮೇಂದ್ರ ಪ್ರಧಾನ್‌, ವಿದೇಶಾಂಗ ಸಚಿವರಾಗಿ ಎಸ್‌.ಜೈಶಂಕರ್‌, ಆಹಾರ ಸಂಸ್ಕರಣೆ ಖಾತೆ ಸಚಿವೆ ಹರ್‌ಸಿಮ್ರತ್‌ ಕೌರ್‌ ಸೇರಿದಂತೆ ಪ್ರಮುಖ ಸಚಿವರು ಅಧಿಕಾರ ವಹಿಸಿಕೊಂಡರು.

ಜಲಶಕ್ತಿ ಅಸ್ತಿತ್ವಕ್ಕೆ

ದೇಶದ ಎಲ್ಲಾ ನಿವಾಸಿಗಳಿಗೆ ಕುಡಿಯಲು ಶುದ್ಧ ನೀರು, ರೈತರಿಗೆ ಉತ್ತಮ ವ್ಯವಸಾಯ ವ್ಯವಸ್ಥೆಯನ್ನು ನೀಡುವುದಾಗಿ ಚುನಾವಣೆಗೂ ಮುನ್ನ ಆಶ್ವಾಸನೆ ಕೊಟ್ಟಿದ್ದ ಪ್ರಧಾನಿ ಮೋದಿ, ತಮ್ಮ ಎರಡನೇ ಸರ್ಕಾರದ ಅವಧಿಯ ಆರಂಭದಲ್ಲೇ ಈವರೆಗೆ ಇದ್ದ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಶುದ್ಧೀಕರಣ ಇಲಾಖೆಗಳನ್ನು ಒಗ್ಗೂಡಿಸಿ ಜಲ ಶಕ್ತಿ ಎಂಬ ಹೊಸ ಇಲಾಖೆ ಹುಟ್ಟುಹಾಕಿದ್ದಾರೆ. ಹೊಸ ಇಲಾಖೆಗೆ, ಜೋಧಪುರದ ಸಂಸದ ಗಜೇಂದ್ರ ಸಿಂಗ್‌ ಶೆಖಾವತ್‌ ಅವರನ್ನು ಸಚಿವರನ್ನಾಗಿ ನೇಮಿಸಿದ್ದಾರೆ. ಈ ಹಿಂದಿನ ಸರ್ಕಾರದಲ್ಲಿ ಆ ಮೂರೂ ಇಲಾಖೆಗಳಿಗೆ ನಿತಿನ್‌ ಗಡ್ಕರಿಯವರೇ ಸಚಿವರಾಗಿದ್ದರು.
ಮತ್ತಷ್ಟು ಖಾಸಗೀಕರಣ

ಹಲವಾರು ಸುಧಾರಣೆಗಳಲ್ಲಿ, ಸರ್ಕಾರಿ ಸ್ವಾಮ್ಯದ ಸುಮಾರು 42 ಉದ್ಯಮಗಳನ್ನು ಸಂಪೂರ್ಣ ಖಾಸಗಿ ವಹಿಸುವ ಅಥವಾ ಮುಚ್ಚುವ ನಿರ್ಧಾರ ಕೈಗೊಳ್ಳಲಾಗುವುದು. ಇನ್ನು, ವಿದೇಶಿ ನೇರ ಬಂಡವಾಳ ತರುವ ಮೂಲಕ ನಷ್ಟದಲ್ಲಿರುವ ಏರ್‌ ಇಂಡಿಯಾ ಸಂಸ್ಥೆಯನ್ನು ಮೇಲೆತ್ತಲು ತೀರ್ಮಾನಿಸಿದ್ದು, ಇದಕ್ಕೆ ಅಡ್ಡಿಯಾಗಿರುವ ವಿದೇಶಿ ನೇರ ಬಂಡವಾಳ ಮಿತಿಯನ್ನು ತೆಗೆದು ಹಾಕಲೂ ತೀರ್ಮಾನಿಸಲಾಗಿದೆ. ಇದೆಲ್ಲದಕ್ಕೂ ಪೂರಕವಾಗಿ, ನಷ್ಟದಲ್ಲಿರುವ ಎಲ್ಲಾ ಸಂಸ್ಥೆಗಳಿಗೂ ಸಲಹಾ ಸಂಸ್ಥೆಯೆಂಬಂತೆ ಸಂಪೂರ್ವ ಸ್ವಾಯತ್ತ ಸಂಸ್ಥೆಯೊಂದನ್ನು ಹುಟ್ಟುಹಾಕಲು ತೀರ್ಮಾನಿಸಲಾಗಿದೆ. ಈ ಸಂಸ್ಥೆಯು ಸ್ವ ವಿವೇಚನೆ ಮೇರೆಗೆ ನಿರ್ಧಾರ ಕೈಗೊಳ್ಳುತ್ತದೆ.
ಮುಂದೆಯೂ ಸಂಪುಟ ಸೇರಲ್ಲ: ನಿತೀಶ್‌

ಎರಡನೇ ಅವಧಿಗೆ ಅಸ್ತಿತ್ವಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟಕ್ಕೆ ಸೇರ್ಪಡೆಗೊಳ್ಳಲು ಹಿಂದೇಟು ಹಾಕಿರುವ ಎನ್‌ಡಿಎ ಮಿತ್ರ ಪಕ್ಷ ಜೆಡಿಯು, ‘ಮೈತ್ರಿಕೂಟ ಸರ್ಕಾರದಲ್ಲಿ ಎಲ್ಲಾ ಪಕ್ಷಗಳಿಗೂ ಸಾಂಕೇತಿಕವಾದ ಪ್ರಾತಿನಿಧ್ಯವಿರಬೇಕು’ ಎಂದು ಮಾರ್ಮಿಕವಾಗಿ ಹೇಳಿದೆ. ಶುಕ್ರವಾರ, ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಯು ನಾಯಕ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಈಗಷ್ಟೇ ಅಲ್ಲ ಮುಂದೆಯೂ ಜೆಡಿಯು ಸಂಪುಟಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಪಕ್ಷಗಳಿಗೂ ಸರ್ಕಾರದಲ್ಲಿ ಪ್ರಾತಿನಿಧ್ಯವಿರಬೇಕು ಎಂಬುದು ಕೇವಲ ನನ್ನ ನಿಲುವಷ್ಟೆ. ಆದರೆ, ಜೆಡಿಯುಗೆ ಸರ್ಕಾರದಲ್ಲಿ ಸ್ಥಾನ ಸಿಗಬೇಕೆಂಬ ಆಗ್ರಹ ನನ್ನ ಹೇಳಿಕೆ ಪುಷ್ಟೀಕರಿಸುವುದಿಲ್ಲ. ಸರ್ಕಾರದೊಳಗಿಲ್ಲ ಎಂದ ಮಾತ್ರಕ್ಕೆ ನಾವು ಎನ್‌ಡಿಎಯನ್ನು ಬೆಂಬಲಿಸುವುದಿಲ್ಲ ಎಂದರ್ಥವಲ್ಲ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next