Advertisement

`ಬ್ರ್ಯಾಂಡ್ ಮಂಗಳೂರು ಪರಿಕಲ್ಪನೆಗೆ ಉತ್ತೇಜನ’

12:58 PM Aug 04, 2018 | |

ಮಹಾನಗರ: ನಗರದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗೂ ಈಗಾಗಲೇ ಕಾರ್ಯಾಚರಿಸುತ್ತಿರುವ ಕೈಗಾರಿಕೆ ಹಾಗೂ ಉದ್ದಿಮೆಗಳನ್ನು ಉಳಿಸಿ ಪ್ರೋತ್ಸಾಹಿಸುವ ನೆಲೆಯಲ್ಲಿ ಬ್ರ್ಯಾಂಡ್  ಮಂಗಳೂರು ಎಂಬ ಪರಿಕಲ್ಪನೆಗೆ ಉತ್ತೇಜನ ನೀಡುವ ದಿಸೆಯಲ್ಲಿ ವಿಶೇಷ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್‌ ಹೇಳಿದರು.

Advertisement

ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ನಗರದ ಕೆಸಿಸಿಐ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ದಕ್ಷಿಣ ಕನ್ನಡದ ಅಭಿವೃದ್ಧಿ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಪೊರೇಷನ್‌ ಬ್ಯಾಂಕ್‌ ಪ್ರಧಾನ ಕಚೇರಿ ಬೆಂಗಳೂರಿಗೆ ಸ್ಥಳಾಂತರಗೊಳ್ಳುವ ಹಾಗೂ ಕೊಟ್ಟಾರದಲ್ಲಿರುವ ಇನ್ಫೋಸಿಸ್ ಕಚೇರಿಯೂ ಪೂರ್ಣಮಟ್ಟದಲ್ಲಿ ಸ್ಥಳಾಂತರಗೊಳ್ಳುವ ಬಗ್ಗೆ ಮಾಹಿತಿ ಬರುತ್ತಿದೆ. ಕೆಲವೊಂದು ರಾಜಕೀಯ ಸೇರಿದಂತೆ ಇತರ ವಿಚಾರಗಳ ಕಾರಣದಿಂದ ಉದ್ದಿಮೆಗಳ ಸ್ಥಾಪನೆ ಮತ್ತು ನಿರ್ವಹಣೆಗೆ ನಗರ ಪೂರಕವಲ್ಲ ಎಂಬ ಮನೋಭಾವ ಮೂಡಿಬರುತ್ತದೆ. ಇದನ್ನು ಹೋಗಲಾಡಿಸಿ ಬ್ರ್ಯಾಂಡ್ ಮಂಗಳೂರು ರೂಪಿಸಲು ಸರ್ವರೂ ಕೈಜೋಡಿಸಬೇಕಿದೆ ಎಂದರು.

ಶೀಘ್ರ ಅನುಷ್ಠಾನಕ್ಕೆ ಯತ್ನ
ಮಂಗಳೂರಿನ ಸ್ಮಾರ್ಟ್‌ ಸಿಟಿ ಯೋಜನೆ ಮೂಲ ಪ್ರಸ್ತಾವನೆ ಸಿದ್ಧಗೊಂಡು, ವಿಸ್ತೃತ ಯೋಜನ ವರದಿ ರೂಪಿಸಲಾಗಿದೆ. ಆದರೆ, ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಡಿಪಿಆರ್‌ನಲ್ಲಿ ಕೆಲ ಬದಲಾವಣೆ ಮಾಡಿಕೊಂಡು ಯೋಜನೆ ಶೀಘ್ರ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು. ತಲಪಾಡಿಯಿಂದ ಕಾರವಾರವರೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫ‌ುಲ ಅವಕಾಶ ಇದ್ದರೂ ಆ ಕೆಲಸ ಆಗಿಲ್ಲ. ಸಿಆರ್‌ಝೆಡ್‌ ನಿಯಮಾವಳಿಯಿಂದ ಪ್ರವಾಸೋದ್ಯಮ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ ಎಂಬ ಆರೋಪವಿದೆ. ಇದೆಲ್ಲವನ್ನು ಮೀರಿ ಅಭಿವೃದ್ಧಿ ಕಾಣಬೇಕಿದೆ ಎಂದರು. ಮಂಗಳೂರಿಗೆ ಆಫ್ರಿಕಾ, ಮಧ್ಯಪ್ರಾಚ್ಯ ದೇಶಗಳಿಂದ ವೈದ್ಯಕೀಯ ಚಿಕಿತ್ಸೆಗೆ ಜನರು ಆಗಮಿಸುತ್ತಿದ್ದು, ಆರೋಗ್ಯ ಪ್ರವಾಸೋದ್ಯಮಕ್ಕೂ ಅವಕಾಶವಿದೆ ಎಂದರು.

ಕೆಸಿಸಿಐ ಅಧ್ಯಕ್ಷೆ ವತಿಕಾ ಪೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿ ವಿವಿಧ ಬೇಡಿಕೆಗಳ ಪಟ್ಟಿಯನ್ನು ಶಾಸಕರಿಗೆ ಸಲ್ಲಿಸಿದರು. ಕೆಸಿಸಿಐ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

ಎನ್‌ಎಂಪಿಟಿ/ವಿಮಾನ ನಿಲ್ದಾಣ ಅಭಿವೃದ್ಧಿ; ಮನವಿ
ಕೆಸಿಸಿಐ ಅಧ್ಯಕ್ಷೆ ವತಿಕಾ ಪೈ ಮಾತನಾಡಿ, ಎನ್‌ಎಂಪಿಟಿಯಲ್ಲಿ ಸರಕು ನಿರ್ವಹಣೆಗೆ ಅನುಕೂಲವಾಗುವಂತೆ ಶಿರಾಡಿ ಘಾಟ್‌ ಸುರಂಗ ಮಾರ್ಗ ಯೋಜನೆಯನ್ನು ಜಾರಿಗೊಳಿಸಬೇಕು. ಮಂಗಳೂರು ರೈಲು ನಿಲ್ದಾಣಗಳಿಗೆ ಮೂಲ ಸೌಲಭ್ಯ ಒದಗಿಸಿ, ವಿಶ್ವ ದರ್ಜೆಗೆ ಏರಿಸಬೇಕು. ಜೆಪ್ಪು ಮಹಾಕಾಳಿಪಡ್ಪುವಿನಲ್ಲಿ ರೈಲ್ವೇ ಅಂಡರ್‌ಪಾಸ್‌ ನಿರ್ಮಿಸಬೇಕು. ರಾಜ್ಯ ಮೆರಿಟೈಮ್‌ ಬೋರ್ಡ್‌ ರಚಿಸಬೇಕು. ಬೈಕಂಪಾಡಿ ಕೈಗಾರಿಕಾ ಟೌನ್‌ಶಿಪ್‌ ಪ್ರಾಧಿಕಾರ ರಚಿಸಬೇಕು. ನಗರದಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಪ್ರವಾಸೋದ್ಯಕ್ಕೆ ಉತ್ತೇಜನ ನೀಡಬೇಕು. ಸ್ಮಾರ್ಟ್‌ ಸಿಟಿ ಯೋಜನೆ ಶೀಘ್ರ ಅನುಷ್ಠಾನಗೊಳಿಸಬೇಕು. ರಸ್ತೆಗಳ ಅಭಿವೃದ್ಧಿ ಹಾಗೂ ಮಂಗಳೂರು ವಿಮಾನ ನಿಲ್ದಾಣ ರನ್‌ ವೇ ವಿಸ್ತರಿಸಿ, ಅಪ್ರೋಚ್‌ ಲೈಟ್‌ ವ್ಯವಸ್ಥೆ ಬಲಪಡಿಸಬೇಕು ಎಂದು ಆಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next