Advertisement

ಎಸ್ಸಿಎಸ್ಟಿ ನೌಕರರಿಗೆ ಬಡ್ತಿ  ಮೀಸಲಾತಿಯಲ್ಲಿ ಅನ್ಯಾಯ

05:56 PM Sep 15, 2017 | |

ಚಿತ್ರದುರ್ಗ: ಪರಿಶಿಷ್ಟ ಜಾತಿ/ವರ್ಗಗಳ ಮುಂಬಡ್ತಿ ಮೀಸಲಾತಿ ಸುಗ್ರೀವಾಜ್ಞೆಗೆ ಸಹಿ ಹಾಕದ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಬಿಎಸ್‌ಪಿ ವತಿಯಿಂದ ಗುರುವಾರ ನಗರದ ಜಿಲ್ಲಾಧಿಕಾರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

Advertisement

ರಾಜ್ಯಪಾಲರು ಪರಿಶಿಷ್ಟ ಜಾತಿ/ವರ್ಗಗಳ ಸ್ಥಿತಿಗತಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಬಡ್ತಿ ಮೀಸಲು ಸುಗ್ರಿವಾಜ್ಞೆ ಅನುಮೋದಿಸದೆ ರಾಜ್ಯ ಸರ್ಕಾರಕ್ಕೆ ಕಳುಹಿಸಿರುವುದು ಸರಿಯಲ್ಲ. ಎ ಮತ್ತು ಬಿ ದರ್ಜೆ ಉದ್ಯೋಗಗಳಲ್ಲಿ ಎಸ್ಸಿಎಸ್ಟಿಯವರಿಗೆ ಪ್ರಾತಿನಿಧ್ಯ ನೀಡಿಲ್ಲ. ಇಂಜಿನಿಯರಿಂಗ್‌ ಇಲಾಖೆಯಲ್ಲಿ ಮಾತ್ರ ನೌಕರರು ಸಂಘಟಿತರಾಗಿ ತಮ್ಮ ಹಕ್ಕು ಪಡೆಯುತ್ತಿದ್ದಾರೆ. ಇನ್ನುಳಿದ ಇಲಾಖೆಗಳಲ್ಲಿ ಎಸ್ಸಿಎಸ್ಟಿ ಕೋಟಾ ಭರ್ತಿಯಾಗಿಲ್ಲ. ಮೂರು ದಶಕದಿಂದ ಆ ಹುದ್ದೆಗಳು ಬ್ಯಾಕ್‌ಲಾಗ್‌ನಲ್ಲಿ ಡೆಡ್‌ಲಾಕ್‌ ಆಗಿವೆ. ಇಂತಹ ಸ್ಥಿತಿ ಇದ್ದರೂ ಸಹ ರಾಜ್ಯಪಾಲರು ಇಲ್ಲ ಸಲ್ಲದ ಪ್ರಶ್ನೆ ಕೇಳಿರುವುದರಲ್ಲಿ ಅರ್ಥವಿಲ್ಲ. ಸರ್ಕಾರವೂ ಈ ಬಗ್ಗೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು.

ಬಡ್ತಿ ಮೀಸಲು ಕುರಿತು ಸುಪ್ರಿಂ ಕೋರ್ಟ್‌ ಎತ್ತಿದ್ದ ಆಕ್ಷೇಪಗಳ ಬಗ್ಗೆ ಅಧ್ಯಯನ ನಡೆಸಲು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಸಮಗ್ರ ವರದಿ ನೀಡಿದೆ. ಪರಿಶಿಷ್ಟ ಜಾತಿಗೆ ಶೇ. 15, ಪರಿಶಿಷ್ಟ ವರ್ಗಕ್ಕೆ ಶೇ. 3ರಷ್ಟು ಹುದ್ದೆಗಳಿಗೆ ಭರ್ತಿ ಮಾಡಬೇಕು. ಆದರೆ ಇದುವರೆಗೆ ಕ್ರಮವಾಗಿ ಕೇವಲ
ಶೇ.10.65 ಹಾಗೂ ಶೇ.2.5ರಷ್ಟು ಮಾತ್ರ ಭರ್ತಿ ಮಾಡಲಾಗಿದೆ. ಹೀಗಾಗಿ ಪ್ರಾತಿನಿಧ್ಯದ ಕೊರತೆ ಇದೆಯೇ ಹೊರತು, ಮೀಸಲು ಪ್ರಮಾಣ ಮೀರಿಲ್ಲವೆಂದು ವರದಿಯಲ್ಲಿ ತಿಳಿಸಲಾಗಿದೆ. ಆದರೂ ಇನ್ನೂ ಮೀಸಲು ಸೌಲಭ್ಯ ಸರಿಯಾಗಿ ಸಿಕ್ಕಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆಯೂ ರಾಜ್ಯಪಾಲ ವಜುಭಾಯ್‌ ವಾಲಾ ಅವರು ಎಸ್ಸಿಎಸ್ಟಿಯವರಿಗೆ ಗುತ್ತಿಗೆಯಲ್ಲಿ ಮೀಸಲು ಕಲ್ಪಿಸುವ ಮಸೂದೆಗೂ ಕೂಡ ಅಂಕಿತ ಹಾಕದೆ ರಾಷ್ಟ್ರಪತಿಯವರಿಗೆ ಕಳುಹಿಸಿ ದಲಿತ ವಿರೋ ಧಿ ಮನಃಸ್ಥಿತಿ ತೋರಿದ್ದರು. ಇದೀಗ ಬಡ್ತಿ ಮೀಸಲು ಪ್ರಕರಣದಲ್ಲೂ ಅದೇ ರೀತಿ ನಡೆದುಕೊಂಡಿದ್ದಾರೆ. ರಾಜ್ಯಪಾಲರ ನಡೆಯಿಂದ ಎಸ್ಸಿಎಸ್ಟಿ ಸಮುದಾಯದ ಸುಮಾರು 60 ಸಾವಿರ ನೌಕರರು ಹಿಂಬಡ್ತಿ ಪಡೆಯುವ ಆತಂಕದಲ್ಲಿದ್ದಾರೆ. ಹೀಗಾಗಿ ನ್ಯಾಯಾಲಯಗಳ ವ್ಯಾಪ್ತಿಯಿಂದ ಮೀಸಲಾತಿ ಸಂರಕ್ಷಿಸಲು ಮೀಸಲು ವಿಧೇಯಕವನ್ನು ಸಂವಿಧಾನದ 9ನೇ ಅನುಬಂಧದಲ್ಲಿ ಸೇರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಾಕಿ ಇರುವ ಬ್ಯಾಕ್‌ಗಾಲ್‌ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಕೆ. ಮಹೇಶ್‌, ಜಿಲ್ಲಾ ಸಂಯೋಜಕರಾದ ಭೀಮನಕೆರೆ ಶಿವಮೂರ್ತಿ, ಕೂನಬೇವು ಮಹಂತೇಶ್‌, ತಿಮ್ಮಪ್ಪ, ಕೆ. ಕುಮಾರ್‌, ಜಿಲ್ಲಾಧ್ಯಕ್ಷ ದೊಡ್ಡ ಹೊಟ್ಟೆಪ್ಪ, ಖಜಾಂಚಿ ರಾಮಾಂಜನೇಯ, ಪ್ರಧಾನ ಕಾರ್ಯದರ್ಶಿಗಳಾದ ಎನ್‌. ಪ್ರಕಾಶ್‌, ವೆಂಕಟೇಶ್‌, ಪ್ರಕಾಶ್‌, ಸಿದ್ದಪ್ಪ, ಹನುಮಂತರಾಜು, ಜಯಣ್ಣ, ವಿಶ್ವರಾಜ್‌, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ತಿಪ್ಪಕ್ಕ, ಸುಶೀಲಮ್ಮ, ರೇಣುಕಮ್ಮ, ಶಿವಗಂಗಮ್ಮ ಪಾಲ್ಗೊಂಡಿದ್ದರು.

Advertisement

ಹಕ್ಕೊತ್ತಾಯಗಳು
ಮುಂಬಡ್ತಿ ಮೀಸಲಾತಿ ಮಸೂದೆಯನ್ನು ಸದನದಲ್ಲಿ ಶೀಘ್ರದಲ್ಲೇ ಪಾಸು ಮಾಡಬೇಕು. ಹಿಂದುಳಿದ ಮತ್ತು ಅಲ್ಪಸಂಖ್ಯಾತ ನೌಕರರಿಗೂ ಮುಂಬಡ್ತಿ ಮೀಸಲಾತಿ ನೀಡಬೇಕು. ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಮತ್ತು ವಿದ್ಯಾರ್ಥಿ ವೇತನ ಹೆಚ್ಚಿಸಬೇಕು. ಸಾಗುವಳಿ ಪತ್ರ ನೀಡಿ, ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next