ಹುಬ್ಬಳ್ಳಿ: ಕರ್ನಾಟಕ ಮತ್ತೆ ಸ್ಪಿನ್ ಮೆರಗು ಪಡೆಯಬೇಕೆಂಬ ಉದ್ದೇಶದಿಂದ ಯುವ ಪ್ರತಿಭಾವಂತ ಸ್ಪಿನ್ನರ್‌ಗಳನ್ನು ಉತ್ತೇಜಿಸಿ ಪೋಷಿಸಲಾಗುವುದೆಂದು ರಣಜಿ ಟ್ರೋಫಿ ಆಯ್ಕೆ ಸಮಿತಿ ಚೇರ್ಮನ್ ರಘುರಾಮ ಭಟ್ ಹೇಳಿದರು.
ಕನ್ನಡ ಭವನದಲ್ಲಿ ಕೆಎಸ್‌ಸಿಎ ಧಾರವಾಡ ವಲಯ ಶುಕ್ರವಾರ ಆಯೋಜಿಸಿದ್ದ ಕೆಎಸ್‌ಸಿಎ ಟೂರ್ನಿಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 2-3 ದಶಕಗಳ ಹಿಂದೆ ಕರ್ನಾಟಕ ಸ್ಪಿನ್ನರ್‌ಗಳಿಗೆ ಖ್ಯಾತಿ ಗಳಿಸಿತ್ತು. 12ರಿಂದ 17 ವಯೋಮಿತಿಯ ಸ್ಪಿನ್ನರ್‌ಗಳಿಗೆ ತರಬೇತಿ ನೀಡಿ ಉತ್ತಮ ಸ್ಪಿನ್ನರ್‌ಗಳನ್ನು ರೂಪಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ಹುಬ್ಬಳ್ಳಿಯಲ್ಲಿ ಸ್ಪಿನ್ನರ್‌ಗಳಿಗೆ ತರಬೇತಿ ಶಿಬಿರ: ಹಿರಿಯರ ತಂಡದಲ್ಲಿ ಸ್ಪಿನ್ನರ್‌ಗಳು ಸ್ಥಾನ ಪಡೆಯುವಂತಾಗಬೇಕು. ನಾವು ರಾಜ್ಯದ ಪ್ರತಿ ಜಿಲ್ಲೆಗೆ ಹೋಗಿ ಸ್ಪಿನ್ನರ್ ಪ್ರತಿಭೆಗಳನ್ನು ಹುಡುಕುತ್ತಿದ್ದೇವೆ. ಸೆಪ್ಟೆಂಬರ್‌ನಲ್ಲಿ ಹುಬ್ಬಳ್ಳಿಯಲ್ಲಿ ಸ್ಪಿನ್ನರ್‌ಗಳ 3 ವಾರದ ತರಬೇತಿ ಶಿಬಿರ ಆಯೋಜಿಸಲಾಗುವುದು ಎಂದು ತಿಳಿಸಿದರು.
ಸ್ಪಿನ್ನರ್ ವಿವಿ ಮಾಡಲಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಮಾತನಾಡಿ, ಹಿಂದೆ ಕರ್ನಾಟಕ ಸ್ಪಿನ್ನರ್ ಗಳಿಗಾಗಿಯೇ ಖ್ಯಾತಿ ಗಳಿಸಿತ್ತು. ಆದರೆ ಈಗ ಸ್ಪಿನ್ನರ್‌ಗಳ ಸಂಖ್ಯೆ ವಿರಳವಾಗಿದೆ. ಕೆಎಸ್‌ಸಿಎ ಸ್ಪಿನ್ನರ್‌ಗಳ ವಿಶ್ವವಿದ್ಯಾಲಯ ಮಾಡಿ ಯುವ ಸ್ಪಿನ್ನರ್‌ಗಳನ್ನು ಪ್ರೋತ್ಸಾಹಿಸಬೇಕೆಂದರು. ಯುವಕರು ಕ್ರಿಕೆಟ್ ತಂತ್ರಗಳ ಬಗ್ಗೆ ಓದಿ ತಿಳಿದುಕೊಳ್ಳಬೇಕು.
ಹಿರಿಯರು ಆಡುವುದನ್ನು ನೋಡಿ ಗ್ರಹಿಸಬೇಕು ಹಾಗೂ ತಮ್ಮ ಸ್ವ ಅನುಭವದಿಂದ ಕಲಿತುಕೊಳ್ಳಬೇಕು. ಯುವಕರು ಕೇವಲ ಕಿರು ಮಾದರಿ ಕ್ರಿಕೆಟ್‌ನಲ್ಲಿ ಮಾತ್ರ ಆಸಕ್ತಿ ಬೆಳೆಸಿಕೊಳ್ಳುವುದು ಸರಿಯಲ್ಲ. ಮೂಲಸಂಗತಿಗಳನ್ನು ಕಲಿತರೆ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿಯೂ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು. ಕೆಎಸ್‌ಸಿಎ ಧಾರವಾಡ ವಲಯದ ಅಧ್ಯಕ್ಷ ವೀರಣ್ಣ ಸವಡಿ, ಕನ್ವೀನರ್ ಬಾಬಾ ಭೂಸದ, ಅಲ್ತಾಫ ಕಿತ್ತೂರ, ವಸಂತ ಮುಡೇìಶ್ವರ ಇದ್ದರು.
ಪ್ರಶಸ್ತಿ ವಿತರಣೆ: ಕೆಎಸ್‌ಸಿಎ 1 ಡಿವಿಜನ್: ಎಸ್‌ಡಿಎಂ ಕ್ರಿಕೆಟ್ ಅಕಾಡೆಮಿ (ವಿಜೇತರು), ಬೆಳಗಾವಿ ನ್ಪೋರ್ಟ್ಸ್ ಕ್ಲಬ್ (ರನ್ನರ್ ಅಪ್); ಕೆಎಸ್‌ಸಿಎ 2ನೇ ಡಿವಿಜನ್: ಬಿಡಿಕೆ ನ್ಪೋರ್ಟ್ಸ್ ಫೌಂಡೇಶನ್ (ವಿಜೇತರು), ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ (ರನ್ನರ್‌ಅಪ್); ಕೆಎಸ್ ಸಿಎ 3ನೇ ಡಿವಿಜನ್: ಬೆಳಗಾವಿ ನ್ಪೋರ್ಟ್ಸ್ ಕ್ಲಬ್ (ವಿಜೇತರು), ಕೆ.ಸ್ಟಾರ್ ನ್ಪೋರ್ಟ್ಸ್ ಕ್ಲಬ್ (ರನ್ನರ್‌ಅಪ್).
ಕೆಎಸ್‌ಸಿಎ 4ನೇ ಡಿವಿಜನ್: ಹುಬ್ಬಳ್ಳಿ ನ್ಪೋರ್ಟ್ಸ್ ಕ್ಲಬ್ (ವಿಜೇತರು), ಅಮೃತ್ ಪೋತದಾರ (ರನ್ನರ್‌ಅಪ್); ಕೆಎಸ್‌ಸಿಎ 14 ವಯೋಮಿತಿ: ಚಿನ್ಮಯ ಸ್ಕೂಲ್ (ವಿಜೇತರು), ಕೆ.ಇ.ಬೋರ್ಡ್ಸ್ ಆಂಗ್ಲ ಮಾಧ್ಯಮ ಶಾಲೆ (ರನ್ನರ್ ಅಪ್), ಕೆಎಸ್‌ಸಿಎ 16 ವಯೋಮಿತಿ: ಜೆ.ಕೆ. ಸ್ಕೂಲ್ (ವಿಜೇತರು), ಎನ್.ಕೆ.ಟಕ್ಕರ್ ಆಂಗ್ಲ ಮಾಧ್ಯಮ ಶಾಲೆ (ರನ್ನರ್‌ಅಪ್).