Advertisement

ದಾಖಲಾತಿ ಹೆಚ್ಚಿಸಲು ಧ್ವನಿವರ್ಧಕಗಳ ಮೂಲಕ ಪ್ರಚಾರ‌

11:19 PM May 04, 2019 | Lakshmi GovindaRaj |

ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆ ತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ಬಾರಿ ಧ್ವನಿವರ್ಧಕಗಳ ಮೂಲಕ ವಿಶೇಷ ಪ್ರಚಾರ ಕಾರ್ಯ ಹಮ್ಮಿಕೊಂಡಿದೆ.

Advertisement

ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರದಿಂದ ನೀಡುವ ಸೌಲಭ್ಯಗಳನ್ನು ಆಯಾ ಶಾಲೆಯಲ್ಲಿ ಪಾಲಕ-ಪೋಷಕರಿಗೆ ತಿಳಿಸಿ, ಅವರ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆ ತರುವ ಪ್ರಯತ್ನ ಹಲವು ವರ್ಷಗಳಿಂದ ನಡೆಯುತ್ತಿದೆ. ಆದರೆ, ನಿರೀಕ್ಷೆಯಷ್ಟು ಪ್ರಮಾಣದಲ್ಲಿ ದಾಖಲಾತಿ ಹೆಚ್ಚಿಸಲು ಸಾಧ್ಯವಾಗಿಲ್ಲ. ಇಂಗ್ಲಿಷ್‌ ಒಂದು ಭಾಷೆಯಾಗಿ ಬೋಧಿಸುವ ಕ್ರಮಕ್ಕೂ ಪಾಲಕ-ಪೋಷಕರನ್ನು ಆಕರ್ಷಿಸಲು ಸಾಧ್ಯವಾಗಿಲ್ಲ.

ಪ್ರಸಕ್ತ ಸಾಲಿನಿಂದ ಸಾವಿರ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಾಗುತ್ತಿದೆ. ಅಲ್ಲದೆ, 176 ಕರ್ನಾಟಕ ಪಬ್ಲಿಕ್‌ ಶಾಲೆ ಕೂಡ ತೆರೆಯಲಾಗಿದೆ. ಇವೆಲ್ಲದರ ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಸಹಿತವಾಗಿ ಹಲವು ಕ್ರಮ ತೆಗೆದುಕೊಂಡಿದ್ದರೂ, ದಾಖಲಾತಿಯಲ್ಲಿ ಅಷ್ಟೇನೂ ಹೆಚ್ಚಾಗಿಲ್ಲ ಎಂಬುದನ್ನು ಮನಗಂಡ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಹಂತದಲ್ಲಿ ಧ್ವನಿವರ್ಧಕಗಳ ಮೂಲಕ ಬಹಿರಂಗ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಬಹುತೇಕ ಜಿಲ್ಲೆಗಳಲ್ಲಿ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರ್ಕಾರಿ ಶಾಲೆಗಳ ಸಾಧನೆ, ಸರ್ಕಾರದ ಕ್ರಮಗಳು, ಹೊಸ ಕಲಿಕಾ ವಿಧಾನ ಇತ್ಯಾದಿಗಳನ್ನು ಒಳಗೊಂಡ ಕರಪತ್ರ ಸಿದ್ಧಪಡಿಸಿಕೊಂಡು, ಧ್ವನಿವರ್ಧಕದ ಮೂಲಕ ಬೀದಿಬೀದಿಗಳಲ್ಲಿ ಬಹಿರಂಗ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next