ಹುಬ್ಬಳ್ಳಿ: ಉಕ ಭಾಗದಲ್ಲಿ ಹೊಸ ಕೈಗಾರಿಕೆಗಳ ಆರಂಭಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದು, ಅಧಿಕಾರಿ ವರ್ಗ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಹೇಳಿದರು.
ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ(ಕೆಯುಐಡಿಎಫ್‌ಸಿ)ಯಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಈ ಭಾಗದಲ್ಲಿ ಹೊಸ ಕೈಗಾರಿಕೆಗಳ ಆರಂಭಕ್ಕೆ ಬೇಕಾದ ಎಲ್ಲ ಸೌಲಭ್ಯಗಳಿವೆ. ಹೊಸ ಉದ್ದಿಮೆದಾರರನ್ನು ಈ ಭಾಗಕ್ಕೆ ಕರೆತರುವ ಪ್ರಯತ್ನ ಮಾಡುತ್ತೇವೆ. ಇದಕ್ಕೆ ಪೂರಕವಾಗಿ ಎಲ್ಲ ಇಲಾಖೆಯ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಇಲ್ಲಿನ ಕೈಗಾರಿಕೆ ಗಮನಾರ್ಹ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕು ಎಂದರು.
ಮಾರ್ಗಸೂಚಿ ಸರಿಯಿಲ್ಲ: ಕೆಐಎಡಿಬಿ ನಿವೇಶನಗಳಿಗೆ ಹೋಲಿಸಿದರೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ನಿವೇಶನಗಳು ಸಾಕಷ್ಟು ದುಬಾರಿಯಾಗಿವೆ. ವರ್ಷದಿಂದ ವರ್ಷಕ್ಕೆ ದರ ಹೆಚ್ಚಿಸುತ್ತಿರುವುದು ಇದು ಸರಿಯಾದ ಮಾರ್ಗಸೂಚಿಯಲ್ಲ. ಕೈಗಾರಿಕೆಗಳ ನಿವೇಶನ ದುಬಾರಿಯಾಗುವುದರಿಂದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಸಾಧ್ಯವಿಲ್ಲ. ಒಂದು ಎಕರೆ ಭೂಮಿಗೆ 3 ಕೋಟಿ ರೂ. ನಿಗದಿ ಮಾಡಿರುವುದರಿಂದ ಸಣ್ಣ ಕೈಗಾರಿಕೆಗಳ ಆರಂಭ ಅಸಾಧ್ಯವಾಗಿದೆ. ಎರಡು ವರ್ಷಗಳಿಂದ ಕೆಐಎಡಿಬಿ ನಿವೇಶನಗಳಿಗೆ ಹೆಚ್ಚು ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳಿಗಾಗಿ ಕಾಯುತ್ತಿರುವುದು ಸರಿಯಲ್ಲ. ಇದರಿಂದ ಕೈಗಾರಿಕಾಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಇಂತಹ ಹಲವು ಸಮಸ್ಯೆಗಳ ಕುರಿತು ಆ. 30ರಂದು ರಾಜ್ಯದ ಮಟ್ಟದಲ್ಲಿ ನಡೆಯಲಿರುವ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧರಿಸಲಾಗುವುದು.
ಟೌನ್‌ಶಿಪ್‌ಗೆ ಪ್ರಸ್ತಾವನೆ: ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಪಿ. ನಾಗೇಶ ಮಾತನಾಡಿ, ತಾರಿಹಾಳ ಕೈಗಾರಿಕಾ ಪ್ರದೇಶವನ್ನು ಟೌನ್‌ಶಿಪ್ ಎಂದು ಪರಿವರ್ತಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲ ಮಾಹಿತಿಗಳ ಸ್ಪಷ್ಟನೆ ಕೇಳಲಾಗಿದ್ದು, ಅದನ್ನು ಒದಗಿಸಲಾಗುವುದು. ಇಲ್ಲಿನ ರಾಜ್ಯ ಹಣಕಾಸು ನಿಗಮದ ಡಿಜಿಎಂ ಹುದ್ದೆಯನ್ನು ರದ್ದುಗೊಳಿಸಿ ಎಜಿಎಂ ಹುದ್ದೆಗೆ ಸೀಮಿತಗೊಳಿಸಲಾಗಿದೆ. ಈ ಹುದ್ದೆಗೆ 2 ಕೋಟಿ ರೂ. ಕೈಗಾರಿಕೆ ಸಾಲ ಮಾತ್ರ ಮಂಜೂರು ಮಾಡಲು ಅವಕಾಶವಿದೆ. ಹಿಂದಿನಂತೆ ಡಿಜಿಎಂ ಹುದ್ದೆ ಮುಂದುವರಿಸಿದರೆ 5 ಕೋಟಿ ರೂ. ವರೆಗೆ ಮಂಜೂರು ಮಾಡಬಹುದಾಗಿದೆ. ಈ ಹುದ್ದೆ ರದ್ದಾಗಿರುವ ಪರಿಣಾಮ ಬೆಂಗಳೂರಿಗೆ ಓಡಾಡುವಂತಾಗಿದೆ ಎಂದು ವಿವರಿಸಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಕೆಐಡಿಬಿ ಅಧಿಕಾರಿ ಮನೋಹರ ವಡ್ಡರ ಇನ್ನಿತರರಿದ್ದರು.