Advertisement

ಮಗನ ಮೇಲಾಣೆ ಸಾಲಮನ್ನಾ ಮಾಡುವೆ

12:30 AM Dec 29, 2018 | Team Udayavani |

ಬಾಗಲಕೋಟೆ: “ನನಗೆ ಇರುವವನು ಒಬ್ಬನೇ ಮಗ. ಅವನ ಮೇಲೆ ಆಣೆ ಮಾಡಿ ಹೇಳುತ್ತೇನೆ. ಯಾರು ಏನೇ ಅಪಪ್ರಚಾರ ನಡೆಸಿದರೂ ರೈತರು ನನ್ನ ಮೇಲೆ ಅಪನಂಬಿಕೆ ಇಡಬೇಡಿ. ನನಗೆ ಸಹಕಾರ ಕೊಡಿ. ಸರ್ಕಾರ ಬೀಳಿಸಲು ನಾನು ಬಿಡುವುದಿಲ್ಲ. ರೈತರನ್ನು ಸಾಲದಿಂದ ಋಣಮುಕ್ತರನ್ನಾಗಿ ಮಾಡಿಯೇ ನಾನು ಅಧಿಕಾರ ಬಿಡುತ್ತೇನೆ. ಅಲ್ಲಿಯವರೆಗೆ ಸರ್ಕಾರ ಬೀಳುವುದೂ ಇಲ್ಲ” ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ನವನಗರದ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ರೈತರ ಸಾಲ ಮನ್ನಾ ಯೋಜನೆಯ ಋಣಮುಕ್ತ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು. ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದ ಸಾಲ ಮನ್ನಾ ಅಥವಾ ಬಡ್ಡಿ ಮನ್ನಾ ಮಾಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಆದರೂ, ಒಂದು ದೊಡ್ಡ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದ ರೈತರ ಸಾಲ ಮನ್ನಾ ಮಾಡಿದರೆ ಅದು ರೈತರಿಗೆ ತಲುಪಬೇಕು. ಯಾರೋ ಮಧ್ಯವರ್ತಿಗಳು, ಶ್ರೀಮಂತರು ಇದರ ಲಾಭ ಪಡೆಯಬಾರದೆಂಬ ಉದ್ದೇಶದಿಂದ ಕೇವಲ ಮೂರು ದಾಖಲೆ ಪಡೆದು ಪ್ರಕ್ರಿಯೆ ಆರಂಭಿಸಿದ್ದೇವೆ. 46 ಸಾವಿರ ಕೋಟಿ ಮನ್ನಾ ಹಣ ಸಾರ್ಥಕವಾಗಬೇಕು ಎಂಬುದು ನನ್ನ ಆಶಯ. ಇಂದು ಅಧಿಕೃತವಾಗಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ಕೊಡುತ್ತಿದ್ದೇವೆ ಎಂದರು.

ರಾಷ್ಟ್ರೀಕೃತ ಮತ್ತು ಸಹಕಾರಿ ಸಂಘಗಳು ಸೇರಿ ಒಟ್ಟು 44 ಲಕ್ಷ ರೈತರು 46 ಸಾವಿರ ಕೋಟಿ ಸಾಲ ಪಡೆದಿದ್ದಾರೆ. ಈ 44 ಲಕ್ಷ ರೈತರ ಮನೆ ಮನೆಗೂ ಸಾಲ ಮನ್ನಾ ಯೋಜನೆಯ ಋಣಮುಕ್ತ ಪ್ರಮಾಣ ಪತ್ರ ಕಳುಹಿಸುತ್ತೇನೆ. ಮಾರ್ಚ್‌ ಅಂತ್ಯದ ವೇಳೆಗೆ ಸಹಕಾರಿ ಸಂಘಗಳ ಅಷ್ಟೂ ಸಾಲ ಮನ್ನಾ ಮಾಡಿ, ರೈತರನ್ನು ಋಣಮುಕ್ತರನ್ನಾಗಿ ಮಾಡುತ್ತೇನೆ ಎಂದರು.

“ನಾನು ಉತ್ತರ ಕರ್ನಾಟಕದ ವಿರೋಧಿ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಸಾಲಮನ್ನಾ ಯೋಜನೆಯಿಂದ ಉತ್ತರ ಕರ್ನಾಟಕದ ಶೇ.62.43ರಷ್ಟು ರೈತರಿಗೆ ಲಾಭವಾಗಲಿದೆ. ಹಾಗಾದರೆ, ನಾನು ಉತ್ತರದ ವಿರೋಧಿ ಹೇಗೆ ಆಗುತ್ತೇನೆ’ ಎಂದು ಪ್ರಶ್ನಿಸಿದರು.

ಫೆಬ್ರವರಿಯಲ್ಲೇ ಬಜೆಟ್‌ ಮಂಡನೆ:
ಫೆಬ್ರವರಿ ಬಳಿಕ ಲೋಕಸಭೆ ಚುನಾವಣೆ ಬರಲಿದೆ. ಹೀಗಾಗಿ, ನಾನು ಫೆಬ್ರವರಿಯಲ್ಲೇ ಬಜೆಟ್‌ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದು, ಬಜೆಟ್‌ನಲ್ಲಿ 20 ಸಾವಿರ ಕೋಟಿಯನ್ನು ರೈತರ ಸಾಲಮನ್ನಾ ಯೋಜನೆಗೆ ಮೀಸಲಿಡಲಾಗುವುದು. ಈ ವರ್ಷ ಆರಂಭದಲ್ಲಿ 6,500 ಕೋಟಿ ಹಾಗೂ ಹೆಚ್ಚುವರಿ ಬಜೆಟ್‌ನಲ್ಲಿ 2,500 ಕೋಟಿ ಸೇರಿ ಒಟ್ಟು 9 ಸಾವಿರ ಕೋಟಿ ರೂ. ಸಾಲಮನ್ನಾ ಯೋಜನೆಗೆ ಬಳಕೆ ಮಾಡಲಾಗುತ್ತಿದೆ. ರೈತರ ಸಾಲಮನ್ನಾ ಯೋಜನೆಗಾಗಿ ಅನ್ನಭಾಗ್ಯ, ಕ್ಷೀರಭಾಗ್ಯ ಅಥವಾ ಇನ್ಯಾವುದೇ ಯೋಜನೆಯ ಹಣ ಕಡಿತ ಮಾಡಿಲ್ಲ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next