ಹಿರೇಕೆರೂರ: ತಾಲೂಕಿನಲ್ಲಿ ಕಳೆದ ವಾರ ಉತ್ತಮ ಮಳೆಯಾಗಿರುವುದರಿಂದ ರೈತರು ಹತ್ತಿ ಗಿಡಗಳನ್ನು ಕೀಳುವ, ರಂಟೆ ಹೊಡೆಯುವ, ಕುಂಟೆ ಹೊಡೆದು ಸಮತಟ್ಟು ಮಾಡುವ ಕಾಯಕ ಚುರುಕುಗೊಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕದ ಕೀಟದ ಬಾಧೆ ಹೆಚ್ಚುತ್ತಿದೆ. ಇದರ ಹತೋಟಿಗಾಗಿ ಆಯಾ ವಲಯದ ಕೀಟ ನಿರೋಧಕ ತಳಿಗಳನ್ನು ರೈತರು ಬಳಸಬೇಕು. ಬಿ.ಟಿ.ಹತ್ತಿ ಹೊಲದ ಸುತ್ತ ನಾನ್ ಬಿ.ಟಿ.ಹತ್ತಿಯನ್ನು ಬೆಳೆಯುವ ಮೂಲಕ ಬಿ.ಟಿ.ಹತ್ತಿ ಬೆಳೆಯಲ್ಲಿ ಕೀಟ ನಿರೋಧಕತೆ ಹೆಚ್ಚಿಸಬಹುದು. ಹಿಂದಿನ ವರ್ಷ ಬೆಳೆದ ಹತ್ತಿ ಕಟ್ಟಿಗೆಯನ್ನು ಹೊಲದಲ್ಲಿ ಹಾಗೆಯೇ ಬಿಡದೆ ಜಮೀನಿನಲ್ಲಿ ಕ್ರೋಢೀಕರಿಸಿ ಹೊಲದಿಂದ ಆಚೆಗೆ ಸುಡುವ ಮೂಲಕ ಈ ಕೀಟದ ಮೊಟ್ಟೆಗಳನ್ನು ನಾಶಪಡಿಸಿ ಕೀಟದ ಹತೋಟಿ ಮಾಡಬಹುದಾಗಿದೆ ಎಂದು ಕೃಷಿ ಅಧಿಕಾರಿ ಮಾರುತಿ ಅಂಗರಗಟ್ಟಿ ರೈತರಿಗೆ ಸಲಹೆ ನೀಡಿದ್ದಾರೆ.
2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಖಂಡ ಹಿರೇಕೆರೂರ (ರಟ್ಟೀಹಳ್ಳಿ ತಾಲೂಕು ಸೇರಿ) ತಾಲೂಕಿನಲ್ಲಿ ಒಟ್ಟು 58 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬಹುದು. ಇದರಲ್ಲಿ ಸುಮಾರು 38-40 ಸಾವಿರ ಹೆಕ್ಟೇರ್ ನಲ್ಲಿ ಗೋವಿನ ಜೋಳ ಹಾಗೂ ಸುಮಾರು 14-15 ಸಾವಿರ ಹೆಕ್ಟೇರ್ ನಲ್ಲಿ ಬಿ.ಟಿ.ಹತ್ತಿ ಬಿತ್ತನೆಯಾಗಬಹುದೆಂದು ಅಂದಾಜಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಎಂ.ವಿ. ತಿಳಿಸಿದರು.
Advertisement
ಮುಂಗಾರು ಪೂರ್ವ ಮಳೆ ರೈತರಲ್ಲಿ ಭರವಸೆ ಮೂಡಿಸಿದೆ. ಹೀಗಾಗಿ ಖುಷಿಯಿಂದ ಕೃಷಿಯಲ್ಲಿ ತೊಡಗುತ್ತಿದ್ದಾರೆ. ಕಳೆದ ವರ್ಷ ಗೋವಿನ ಜೋಳ ಬಿತ್ತನೆ ಮಾಡಿದ್ದ ಹೊಲಗಳ ರಂಟೆ ಹೊಡೆದು ಬಿತ್ತನೆಗೆ ಸಿದ್ಧಪಡಿಸುತ್ತಿದ್ದರೆ, ಬಿ.ಟಿ. ಹತ್ತಿ ಹಾಕಿದ್ದ ಹೊಲಗಳಲ್ಲಿ ಹತ್ತಿ ಗಿಡಗಳನ್ನು ಕೀಳುವ ಜೊತೆಗೆ ಹೊಲಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಿದ್ದಾರೆ. ಕೂಲಿಕಾರರ ಸಮಸ್ಯೆಯಿಂದ ಹೆಚ್ಚು ರೈತರು ಟ್ರ್ಯಾಕ್ಟರ್‌ನಲ್ಲಿ ಕುಂಟೆ ಹೊಡೆಸಿ ಹತ್ತಿ ಗಿಡಗಳನ್ನು ಕೀಳಿಸಿ ಹೊಲ ಸ್ವಚ್ಛಗೊಳಿಸುತ್ತಿದ್ದಾರೆ.