Advertisement

ಪ್ರೊಕಬಡ್ಡಿ: ಬೆಂಗಾಲ್‌ ಫೈನಲ್‌ ಹಿಂದೆ ಕನ್ನಡಿಗ ಕೋಚ್‌

09:51 PM Oct 17, 2019 | Team Udayavani |

ಬೆಂಗಳೂರು: ಕಳೆದ ವರ್ಷ ಬೆಂಗಳೂರು ಬುಲ್ಸ್‌ ತಂಡವನ್ನು ಚಾಂಪಿಯನ್‌ ಆಗಿ ಮೆರೆಸಿದ್ದ ಕನ್ನಡಿಗ ಕೋಚ್‌ ಬಿ.ಸಿ. ರಮೇಶ್‌ ಈ ಸಲ ಬೆಂಗಾಲ್‌ ವಾರಿಯರ್ ತಂಡವನ್ನು ಪ್ರೊ ಕಬಡ್ಡಿ ಚಾಂಪಿಯನ್‌ ಆಗಿ ಮೆರೆಸುವ ಸನಿಹದಲ್ಲಿದ್ದಾರೆ.

Advertisement

ಶನಿವಾರ ದಬಾಂಗ್‌ ಡೆಲ್ಲಿ ವಿರುದ್ಧ ಬೆಂಗಾಲ್‌ ಫೈನಲ್‌ ಆಡಲಿದೆ. ಈ ಮುಖಾಮುಖೀ ಕುತೂಹಲ ಕೆರಳಿಸಿದೆ. ಸತತ 2ನೇ ಯಶಸ್ಸು ಗಿಟ್ಟಿಸಿಕೊಳ್ಳಲು ಬಿ.ಸಿ. ರಮೇಶ್‌ ತುದಿಗಾಲಲ್ಲಿ ನಿಂತಿದ್ದಾರೆ.

ಈ ಸಂದರ್ಭದಲ್ಲಿ ಬಿ.ಸಿ.ರಮೇಶ್‌ “ಉದಯವಾಣಿ’ ಜತೆ ಮಾತನಾಡಿದ್ದಾರೆ. ತಂಡದ ಸಿದ್ಧತೆ, ಕಾರ್ಯತಂತ್ರ, ತಾರಾ ಆಟಗಾರರ ಪ್ರದರ್ಶನ ಸೇರಿದಂತೆ ಹಲವು ವಿಚಾರದ ಕುರಿತು ವಿವರಿಸಿದ್ದಾರೆ.

ಫೈನಲ್‌ ತಲುಪಿದ್ದೀರಿ, ಕಪ್‌ ಗೆಲ್ಲುವ ವಿಶ್ವಾಸ ನಿಮಗಿದೆಯೆ?
– ನೋಡಿ… ಕಪ್‌ ಗೆಲ್ಲುತ್ತೇವೆ ಎಂದು ಅತಿಯಾದ ಆತ್ಮವಿಶ್ವಾಸವನ್ನು ಈಗಲೇ ವ್ಯಕ್ತಪಡಿಸುವುದು ತಪ್ಪಾಗುತ್ತದೆ. ತಂಡ, ಆಟಗಾರರು ಆ ದಿನ ನೀಡುವ ಪ್ರದರ್ಶನದ ಮೇರೆಗೆ ನಮ್ಮ ಸೋಲು-ಗೆಲುವು ನಿರ್ಧರಿತವಾಗುತ್ತದೆ. ಹಾಗಾಗಿ ಈಗಲೇ ಎಲ್ಲವನ್ನು ನಿರ್ಧರಿಸಲಾಗದು.

ಎದುರಾಳಿ ಡೆಲ್ಲಿ ತಂಡ ಎಷ್ಟು ಅಪಾಯಕಾರಿ?
– ಕೂಟದ ಆರಂಭದಿಂದಲೂ ದಬಾಂಗ್‌ ಡೆಲ್ಲಿ ಅಮೋಘ ನಿರ್ವಹಣೆ ನೀಡಿದೆ. ಹಾಗಾಗಿ ಆ ತಂಡವನ್ನು ಲಘುವಾಗಿ ಪರಿಗಣಿಸುವ ಪ್ರಶ್ನೆಯೇ ಇಲ್ಲ. ಡೆಲ್ಲಿ ವಿರುದ್ಧ ನಾವು ಆಡಿದ ಮೊದಲ ಪಂದ್ಯ ಟೈ ಆಗಿತ್ತು, ಮತ್ತೂಂದು ಪಂದ್ಯದಲ್ಲಿ ನಾವು ಅವರನ್ನು ಭರ್ಜರಿಯಾಗಿ ಸೋಲಿಸಿದ್ದೇವೆ. ಹೀಗಾಗಿ ಅವರಿಗಿಂತ ಹೆಚ್ಚು ಆತ್ಮವಿಶ್ವಾಸ ನಮ್ಮದು ಎನ್ನುವುದು ನನ್ನ ಅಭಿಪ್ರಾಯ.

Advertisement

ನಿಮ್ಮ ತಂಡದ ತಾರಾ ಆಟಗಾರರ ಬಗ್ಗೆ ಎಷ್ಟು ನಂಬಿಕೆ ಇದೆ?
– ಬೆಂಗಾಲ್‌ ಯಾವತ್ತೂ ತಾರಾ ಆಟಗಾರರನ್ನು ಅವಲಂಬಿಸುವುದಿಲ್ಲ, ನಮ್ಮಲ್ಲಿ ಎಲ್ಲರೂ ತಾರಾ ಆಟಗಾರರೇ. ಹಿಂದಿನ ಪಂದ್ಯಗಳ ಫ‌ಲಿತಾಂಶ ನೋಡಿ. ನಮ್ಮಲ್ಲಿ ಒಬ್ಬರಲ್ಲದಿದ್ದರೆ ಮತ್ತೂಬ್ಬರು ಉತ್ತಮ ನಿರ್ವಹಣೆ ನೀಡಿದ್ದಾರೆ. ಹೀಗಾಗಿ ಇಲ್ಲಿ ತನಕ ಬಂದಿದ್ದೇವೆ.

ಬೆಂಗಾಲ್‌ ತಂಡದಲ್ಲಿರುವ 5 ಜನ ಕನ್ನಡಿಗರ ಪಾತ್ರವೇನು?
– ಕೋಚ್‌ ಆಗಿ ನಾನು ಕೆಲಸ ಮಾಡುತ್ತಿದ್ದೇನೆ. ಉಳಿದಂತೆ ಸುಕೇಶ್‌ ಹೆಗ್ಡೆ, ಅವಿನಾಶ್‌ ನಮ್ಮ ರಾಜ್ಯದವರು. ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಜೀವಾ ಕುಮಾರ್‌, ಕೆ. ಪ್ರಪಂಜನ್‌ ಹೊರ ರಾಜ್ಯದವರಾದರೂ ಕರ್ನಾಟಕದಲ್ಲೇ ನೆಲೆಸಿದ್ದಾರೆ. ಅವರಿಬ್ಬರೂ ಹಲವು ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಸಮರ್ಥ ಕೋಚ್‌ ಆಗಿದ್ದರೂ ಕನ್ನಡಿಗರಾದ ನಿಮ್ಮನ್ನು ಬುಲ್ಸ್‌ ಕಡೆಗಣಿಸಿತೇ?
– ಈ ಬಗ್ಗೆ ನಾನು ಹೆಚ್ಚಿಗೇನೂ ಮಾತನಾಡಲಾರೆ. ಒಂದಂತೂ ಹೇಳಬಲ್ಲೆ, ಆ ತಂಡವನ್ನು ಕಟ್ಟಲು ಪ್ರಾಮಾಣಿಕೆ ಪ್ರಯತ್ನ ನಡೆಸಿದ್ದೆ, ಅದರಲ್ಲಿ ಯಶಸ್ವಿಯೂ ಆದೆ. ಉಳಿದ ವಿಷಯಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.

ಫೈನಲ್‌ ಪಂದ್ಯಕ್ಕೆ ತಯಾರಿ ಹೇಗಿದೆ?
– ಪ್ರೊ ಕಬಡ್ಡಿ 7ನೆ ಆವೃತ್ತಿ ಹರಾಜಿಗೂ ಮೊದಲೇ ಯಾವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಪಟ್ಟಿ ಮಾಡಿಕೊಂಡಿದ್ದೆ. ಅದರಂತೆ ಅವರನ್ನು ಖರೀದಿಯೂ ಮಾಡಿದೆವು. ಈಗ ಉತ್ತಮ ಫ‌ಲಿತಾಂಶ ನಿಮ್ಮ ಮುಂದಿದೆ. ಫೈನಲ್‌ನಲ್ಲಿ ನಮ್ಮ ಆಟ ಆಡುತ್ತೇವೆ, ದೇವರ ದಯೆಯಿಂದ ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ.

ಬುಲ್ಸ್‌ಗೆ ಬೇಡವಾದ ಬಿ.ಸಿ. ರಮೇಶ್‌
ಬಿ.ಸಿ.ರಮೇಶ್‌ ರಂತಹ ದಿಗ್ಗಜರನ್ನು ತಂಡದ ಕೋಚ್‌ ಆಗಿ ಮುಂದುವರಿಸದೆ ಹೊರ ರಾಜ್ಯದವರಿಗೆ ಮಣೆ ಹಾಕಿದ ಬೆಂಗಳೂರು ಫ್ರಾಂಚೈಸಿ ಟೀಕೆಗೆ ಗುರಿಯಾಗಿದೆ. 6ನೇ ಆವೃತ್ತಿಯಲ್ಲಿ ಬುಲ್ಸ್‌ಗೆ ಬಿ.ಸಿ.ರಮೇಶ್‌ ಯಶಸ್ವಿ ಮಾರ್ಗದರ್ಶನ ನೀಡಿದ್ದರು. ಮೊದಲ ಸಲ ಬೆಂಗಳೂರು ಪ್ರೊ ಕಬಡ್ಡಿ ಚಾಂಪಿಯನ್‌ ಆಗಿ ಮೆರೆದಿತ್ತು. ಇಷ್ಟೆಲ್ಲ ಸಾಧನೆ ಮಾಡಿದರೂ 7ನೇ ಆವೃತ್ತಿ ವೇಳೆ ಬೆಂಗಳೂರು ತಂಡದಲ್ಲಿ ರಮೇಶ್‌ಗೆ ಸ್ಥಾನ ಸಿಗಲಿಲ್ಲ. ಅವರನ್ನು ಉಳಿಸಿಕೊಳ್ಳಲು ಬುಲ್ಸ್‌ ಆಡಳಿತ ಮಂಡಳಿ ಪ್ರಯತ್ನ ನಡೆಸಲೇ ಇಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು.

-ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next