Advertisement

ಮರ್ಣೆ ಗ್ರಾ.ಪಂ. ಜನರಿಗಿನ್ನು ಶುದ್ಧ ನೀರು ಲಭ್ಯ

12:15 AM Jan 20, 2020 | Sriram |

ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎಲ್ಲೆಡೆಯೂ ಇದ್ದಿದ್ದೇ. ಮರ್ಣೆ ಗ್ರಾ.ಪಂ. ಕೂಡ ಇಂತಹ ಸಮಸ್ಯೆ ಕೊನೆಗಾಣಿಸಲು ಹೊಸ ನೀರಿನ ಘಟಕ ಮತ್ತು ಶುದ್ಧೀಕರಣ ಯಂತ್ರವನ್ನೂ ಸ್ಥಾಪಿಸಿದೆ. ಇದು ನೀರು ಪೂರೈಕೆಯೊಂದಿಗೆ ಗ್ರಾಮಸ್ಥರ ಆರೋಗ್ಯದ ಬಗ್ಗೆಯೂ ಗ್ರಾ.ಪಂ.ಗಿರುವ ಕಾಳಜಿಯನ್ನು ತೋರಿಸುತ್ತದೆ.

Advertisement

ಅಜೆಕಾರು: ಮರ್ಣೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಪ್ರತೀ ವರ್ಷ ಬೇಸಗೆಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು ನೀರು ಪೂರೈಸುವುದೇ ಪಂಚಾಯತ್‌ ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿತ್ತು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಚಿಂತನೆ ನಡೆಸಿದ ಪಂಚಾಯತ್‌ ಆಡಳಿತ ಹೊಳೆಯ ನೀರನ್ನು ಟ್ಯಾಂಕ್‌ಗೆ ಹಾಯಿಸಿ ಅಲ್ಲಿಂದ ಶುದ್ಧೀಕರಣ ಘಟಕಕ್ಕೆ ವರ್ಗಾಯಿಸಿ ಕುಡಿಯುವ ನೀರು ಪೂರೈಕೆಗೆ ಯೋಜನೆ ರೂಪಿಸಿದೆ. ಈ ಮೂಲಕ ಕಾರ್ಕಳ ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಿದ ಪ್ರಥಮ ಪಂಚಾಯತ್‌ ಎಂಬ ಹೆಗ್ಗಳಿಕೆಗೂ ಮರ್ಣೆ ಪಾತ್ರವಾಗಿದೆ.

ನೀರಿನ ಕೊರತೆ
ಗ್ರಾಮದ ದೆಪ್ಪುತ್ತೆ ಭಾಗದಲ್ಲಿ ಬೇಸಗೆಯಲ್ಲಿ ಸುಮಾರು 250ರಷ್ಟು ಮನೆಗಳಿಗೆ ಕುಡಿಯುವ ನೀರಿನ ಕೊರತೆ ಕಾಡುತ್ತಿತ್ತು. ಇದಕ್ಕಾಗಿ ದಬುìಜೆ ಹೊಳೆಯಿಂದ ಪಂಪ್‌ ಮೂಲಕ ಟ್ಯಾಂಕ್‌ಗೆ ನೀರನ್ನು ಹಾಯಿಸಿ ಅಲ್ಲಿಂದ ಶುದ್ಧೀಕರಣ ಘಟಕಕ್ಕೆ ವರ್ಗಾಯಿಸಿ ನಂತರ ಓವರ್‌ ಹೆಡ್‌ ಟ್ಯಾಂಕ್‌ ಮೂಲಕ ಮನೆಗಳಿಗೆ ಪೂರೈಸುವ ಕಾರ್ಯ ಈಗಾಗಲೇ ಪ್ರಾರಂಭಗೊಂಡಿದೆ.

4 ಲಕ್ಷ ರೂ. ವೆಚ್ಚ
ಹೊಳೆಯ ನೀರಿನಲ್ಲಿರುವ ಕಸ-ಕಡ್ಡಿ, ಕಲ್ಮಶಗಳನ್ನು ಪ್ರತ್ಯೇಕಿಸುವ ಕೆಲಸವನ್ನು ಶುದ್ಧೀಕರಣ ಘಟಕ ಮಾಡುತ್ತದೆ. ಇದರ ಸ್ಥಾಪನೆಗೆ ಪಂಚಾಯತ್‌ 4 ಲಕ್ಷ ರೂ. ವೆಚ್ಚ ಮಾಡಿದೆ. ಇನ್ನೂ ಹಲವೆಡೆ ಅಳವಡಿಸುವ ಯೋಜನೆ ಇದೆ.

ಎರಡು ದಿನಗಳಿಗೊಮ್ಮೆ ನೀರು
ದೆಪ್ಪುತ್ತೆ ಭಾಗದಲ್ಲಿ ತೆರೆದ ಬಾವಿ ಸಹಿತ ಎಲ್ಲ ಜಲಮೂಲಗಳಲ್ಲಿ ಜನವರಿ- ಫೆಬ್ರವರಿ ವೇಳೆಗೆ ಅಂತರ್ಜಲ ಬತ್ತುತ್ತಿದ್ದು, ಪ್ರತಿ ವರ್ಷ ಕುಡಿಯುವ ನೀರು ಟ್ಯಾಂಕರ್‌ ಮೂಲಕ ಪೂರೈಸಲಾಗುತ್ತಿತ್ತು. ಈ ಬಾರಿ ಸಮರ್ಪಕ ವ್ಯವಸ್ಥೆ, ಶುದ್ಧೀಕರಣ ಘಟಕವೂ ನಿರ್ಮಾಣವಾಗುವುದರಿಂದ ಪ್ರತಿ ಕಾಲೋನಿಗೆ ಎರಡು ದಿನಗಳಿಗೊಮ್ಮೆ ಒಂದು ಗಂಟೆ ನೀರು ಪೂರೈಕೆ ಮಾಡುವ ಗುರಿಯನ್ನು ಹೊಂದಲಾಗಿದೆ. ಇದರಿಂದ ಇನ್ನು ಮುಂದೆ ಬೇಸಗೆಯಲ್ಲಿ ಟ್ಯಾಂಕರ್‌ ನೀರು ಸಾಗಾಟ ತಪ್ಪಲಿದೆ.

Advertisement

ಸ್ವಯಂಚಾಲಿತ ವ್ಯವಸ್ಥೆ
ಇನ್ನು, ಆರನೇ ವಾರ್ಡ್‌ಗೆ ಕುಡಿಯುವ ನೀರು ಪೂರೈಸಲು ಸುಮಾರು ಐದು ಕಿ.ಮೀ. ದೂರದ ಕಿರಿಂಚಿ ಬೈಲು ಹೊಳೆಯಿಂದ ನೀರು ತರಬೇಕಾಗಿದೆ. ಇದಕ್ಕಾಗಿ ಪಂಚಾಯತ್‌ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ವಿದ್ಯುನ್ಮಾನ ಉಪಕರಣಗಳನ್ನು ಅಳವಡಿಸಿ ಹೊಳೆ ಬದಿಯಲ್ಲಿರುವ ಪಂಪ್‌ ಅನ್ನು ಮೊಬೈಲ್‌ ಆ್ಯಪ್‌ ಮೂಲಕ ಚಾಲೂ ಮಾಡುವ ವ್ಯವಸ್ಥೆಯನ್ನು ಹೊಂದಲಾಗಿದೆ. ಇದರಿಂದ ಪಂಚಾಯತ್‌ ನೀರು ಪೂರೈಕೆ ಕರಾರುವಾಕ್ಕಾಗಿ ನಡೆಯಲು ಸಾಧ್ಯವಾಗಿದೆ.

ಕಾರ್ಕಳ ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಿದ ಪ್ರಥಮ ಪಂಚಾಯತ್‌ ಎಂಬ ಹೆಗ್ಗಳಿಕೆಗೂ ಮರ್ಣೆ ಪಾತ್ರವಾಗಿದೆ.

ಶಾಶ್ವತ ಪರಿಹಾರ
ಪ್ರತಿ ವರ್ಷ ದೆಪ್ಪುತ್ತೆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶುದ್ಧ ಹೊಳೆಯಿಂದ ನೀರನ್ನು ಟ್ಯಾಂಕ್‌ಗೆ ರವಾನಿಸಿ ಫಿಲ್ಟರ್‌ ಮೂಲಕ ನೀರನ್ನು ಶುದ್ಧೀಕರಿಸಿ ಓವರ್‌ ಹೆಡ್‌ ಟ್ಯಾಂಕ್‌ಗೆ ಹಾಯಿಸಿ ನೀರು ಪೂರೈಸಲಾಗುತ್ತಿದೆ.
-ದಿನೇಶ್‌ ಕುಮಾರ್‌,
ಅಧ್ಯಕ್ಷರು,ಗ್ರಾಮ ಪಂಚಾಯತ್‌ ಮರ್ಣೆ

ಸಮಸ್ಯೆಗೆ ಮುಕ್ತಿ
ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಪಂಚಾಯತ್‌ ಅಧ್ಯಕ್ಷ ದಿನೇಶ್‌ ಕುಮಾರ್‌ ಹಾಗೂ ಸದಸ್ಯರ ಮುತುವರ್ಜಿಯಿಂದ ಈಗ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ದೊರಕಿದೆ.
-ಜಯಲಕ್ಷ್ಮೀ ಎಸ್‌. ಶೆಟ್ಟಿ ದೆಪ್ಪುತ್ತೆ,ಸ್ಥಳೀಯರು

ಮಾದರಿ ಘಟಕ
ಮರ್ಣೆ ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಮಾದರಿ ಶುದ್ಧೀಕರಣ ಘಟಕ ಮಾಡಿ ನೀರು ಪೂರೈಸುವ ಯೋಜನೆ ಪ್ರಾರಂಭಗೊಂಡಿದೆ.
-ಸದಾನಂದ ನಾಯಕ್‌,
ಸಹಾಯಕ ಎಂಜಿನಿಯರ್‌,ಪಂಚಾಯತ್‌ ರಾಜ್‌ ಇಲಾಖೆ

ಮೂಲಸೌಕರ್ಯ
ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೊಸ ಟ್ಯಾಂಕ್‌ ಜತೆಗೆ ಶುದ್ಧೀಕರಣ ಘಟಕದ ಸ್ಥಾಪನೆ ಉತ್ತಮ ಬೆಳವಣಿಗೆ.

ಕಾಲೊನಿಗಳಿಗೆ ಅನುಕೂಲ
ಅಂಬೇಡ್ಕರ್‌ ಭವನ ಕಾಲೊನಿ, ಪಿಲಿಚಾವಂಡಿ ರಸ್ತೆ ಕಾಲೋನಿ, ಐದು ಸೆಂಟ್ಸ್‌ನ ಎರಡು ಕಾಲೊನಿ, ನೀರಪಲ್ಕೆ ಕಾಲೊನಿಯ ನಾಗರಿಕರಿಗೆ ನೀರಿನ ಘಟಕದಿಂದ ಬಹಳಷ್ಟು ಅನುಕೂಲಕರವಾಗಲಿದೆ. ನೀರಿನ ಅಭಾವಕ್ಕೂ ಮುಕ್ತಿ ಸಿಗಲಿದೆ.

– ಜಗದೀಶ ಅಜೆಕಾರು

Advertisement

Udayavani is now on Telegram. Click here to join our channel and stay updated with the latest news.

Next