Advertisement

ಮೆಸ್ಕಾಂ ಕಾಮಗಾರಿಗೂ ಯೋಜನೆ ವಿವರ ಫ‌ಲಕ: ಮನವಿ

02:39 PM Mar 24, 2022 | Team Udayavani |

ಕೋಟ: ಮೆಸ್ಕಾಂ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳು ನಡೆಯುವಾಗ ಯೋಜನೆಯ ವಿವರವನ್ನು ಫಲಕಗಳ ಮೂಲಕ ಬಹಿರಂಗ ಗೊಳಿಸಬೇಕು ಎಂದು ಕೋಟದಲ್ಲಿ ಮಾ. 23ರಂದು ನಡೆದ ಮೆಸ್ಕಾಂ ಜನ ಸಂಪರ್ಕ ಸಭೆಯಲ್ಲಿ ಮನವಿ ಸಲ್ಲಿಸಲಾಗಿದೆ.

Advertisement

ಎಲ್ಲ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳೂ ಯಾವ ಅನುದಾನ ದಲ್ಲಿ ನಡೆಯುತ್ತಿದೆ, ಯಾರ ಶಿಫಾರಸಿನ ಮೇರೆಗೆ ನಡೆಯುತ್ತಿದೆ. ಗುತ್ತಿಗೆದಾರರು ಯಾರು ಎನ್ನುವ ಮಾಹಿತಿಯನ್ನು ಫಲಕದಲ್ಲಿ ಅಳವಡಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಪಾರದರ್ಶಕತೆ ಹಾಗೂ ಅಸಮರ್ಪಕ ಕಾಮಗಾರಿ ತಡೆ ಸ್ವಲ್ಪ ಮಟ್ಟಿಗೆ ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಮೆಸ್ಕಾಂ ಕೂಡ ಈ ಸಂಪ್ರದಾಯವನ್ನು ಪಾಲಿಸಬೇಕು ಎಂದು ರಾಘವೇಂದ್ರ ಐರೋಡಿ ಮನವಿ ಮಾಡಿದರು.

ಐರೋಡಿಯ ಸಿಗಡಿಪೋಂಡ್‌ ಪ್ರದೇಶ ದಲ್ಲಿ ಸುಮಾರು 28ಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್‌ ವೋಲ್ಟೇಜ್ ಸಮಸ್ಯೆ ಇದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. 100 ವೋಲ್ಟ್ನ ಹೆಚ್ಚುವರಿ ವಿದ್ಯುತ್‌ ಪರಿವರ್ತಕ ಈ ಭಾಗದಲ್ಲಿ ಅಳವಡಿಸಿದರೂ ಈ ಭಾಗಕ್ಕೆ ಸಂಪರ್ಕ ದೊರೆತಿಲ್ಲ. ಸಮಸ್ಯೆ ಶೀಘ್ರ ಪರಿಹರಿಸಬೇಕೆಂದು ಸುಮಾರು 20ಕ್ಕೂ ಹೆಚ್ಚು ಗ್ರಾಮಸ್ಥರು ಆಗ್ರಹಿಸಿದರು.

ಸಾರ್ವಜನಿಕ ಆಕ್ಷೇಪಣೆ ಇರುವುದರಿಂದ ವೋಲ್ಟೇಜ್ ಸಮಸ್ಯೆ ಪರಿಹರಿಸಲು ತೊಡಕಾಗಿದೆ. ಮುಂದೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಮೆಸ್ಕಾಂ ಇಲಾಖೆಯ ಎ.ಇ.ಟಿ. ಶ್ರೀಕಾಂತ್‌, ಡಿ.ಸಿ.ಎ. ರಮೇಶ್‌. ಎ.ಇ.ಇ. ಪ್ರತಾಪ್‌, ಎಸ್‌.ಒ.ಗಳಾದ ವೈಭವ ಶೆಟ್ಟಿ, ಮಹೇಶ್‌, ಪ್ರಶಾಂತ್‌, ಕೋಟತಟ್ಟು ಗ್ರಾ.ಪಂ. ಸದಸ್ಯ ರವೀಂದ್ರ ತಿಂಗಳಾಯ, ಸ್ಥಳೀಯರಾದ ಶ್ರೀಕಾಂತ್‌ ಶೆಣೈ ಉಪಸ್ಥಿತರಿದ್ದರು. ಎಸ್‌.ಇ. ನರಸಿಂಹ ಪಂಡಿತ್‌, ಎ.ಒ.ಒ. ಸಂತೋಷ್‌, ಇ.ಇ. ರಾಕೇಶ್‌ ಗ್ರಾಹಕರೊಂದಿಗೆ ಆನ್‌ಲೈನ್‌ ಮೂಲಕ ಸಂವಾದ ನಡೆಸಿದರು.

Advertisement

ಸ್ಪನ್‌ ಪೋಲ್‌ ಅಳವಡಿಕೆಗೆ ಮನವಿ

ಸಾಲಿಗ್ರಾಮ ಭಾಗದಲ್ಲಿ ವಿದ್ಯುತ್‌ ಕಂಬಗಳಲ್ಲಿ ಹತ್ತಾರು ವೈಯರ್‌ಗಳು ಜೋತುಬೀಳುತ್ತಿದ್ದು ಕೆಲವು ಕಡೆ ಅಪಾಯಕಾರಿ ಸ್ಥಿತಿಯಲ್ಲಿದೆ. ಆದ್ದರಿಂದ ಇವುಗಳನ್ನು ತೆರವುಗಳಿಸಿ ಸ್ಪನ್‌ ಪೋಲ್‌ ಅಳವಡಿಸಿ ಹಾಗೂ ವಿದ್ಯುತ್‌ ಕಂಬಕ್ಕೆ ಅಳವಡಿಸಿದ ಖಾಸಗಿ ಜಾಹೀರಾತು ಫಲಕ, ವೈಯರ್‌ಗಳನ್ನು ತೆರವುಗೊಳಿಸಬೇಕು, ಸರಕಾರಿ ಜಾಗದಲ್ಲಿ ರಸ್ತೆಗೆ ತಾಗಿಕೊಂಡು ಅಳವಡಿಸಿದ ಖಾಸಗಿ ವಿದ್ಯುತ್‌ ಪರಿವರ್ತಕಗಳನ್ನು ತೆರವುಗೊಳಿಸಬೇಕು ಎಂದು ನಾಗರಾಜ್‌ ಗಾಣಿಗ ಸಾಲಿಗ್ರಾಮ ಮನವಿ ಮಾಡಿದರು.

ನಿರ್ಣಯ ಅನುಷ್ಠಾನವಾಗಲಿ

ಕೋಟದಲ್ಲಿ ಎ.ಇ.ಇ. ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸುವಂತೆ ನಾಲ್ಕು ವರ್ಷದಿಂದ ಬೇಡಿಕೆ ಸಲ್ಲಿಸಲಾಗುತ್ತಿದೆ ಹಾಗೂ ಮೆಸ್ಕಾಂ ಸರ್ವಿಸ್‌ ಸ್ಟೇಷನ್‌ನಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ , ಮೂಲ ಸೌಕರ್ಯಗಳು ಇಲ್ಲದಿರುವುದರಿಂದ ಕಾರ್ಯ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ ಎಂದು ಹಲವು ಸಭೆಯಲ್ಲಿ ಪ್ರಸ್ತಾವಿಸಲಾಗಿದೆ. ಆದರೆ ಈ ಸಮಸ್ಯೆ ಬಗೆಹರಿದಿಲ್ಲ. ಸಭೆಯ ನಿರ್ಣಯ ಅನುಷ್ಠಾನವಾಗದಿದ್ದರೆ ಜನ ಸಂಪರ್ಕ ಸಭೆಗಳು ವ್ಯರ್ಥ ಎಂದು ಸಾಮಾಜಿಕ ಹೋರಾಟಗಾರ ಕೋಟ ಗಿರೀಶ್‌ ನಾಯಕ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next