ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಅಳಗಂಚಿಯಲ್ಲಿರುವ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಮೀಸಲು ಕ್ಷೇತ್ರದಲ್ಲಿ ಬೆಳೆದಿರುವ ಕಬ್ಬನ್ನು ವಯೋಮಾನದ ಹಿರಿತನದ ಆಧಾರದ ಮೇಲೆ ಖರೀದಿಸಲು ಸಕ್ಕರೆ ಕಾರ್ಖಾನೆಗೆ ಜಿಲ್ಲಾಧಿಕಾರಿ ರಂದೀಪ್ ಡಿ.ಆದೇಶಿಸಿದ್ದಾರೆ.
ಕಾರ್ಖಾನೆ ವ್ಯಾಪ್ತಿಯ ಕಬ್ಬು ಕಟಾಯಿಸದೆ ಮಂಡ್ಯ ಮತ್ತು ಇತರೆ ಜಿಲ್ಲೆಗಳಿಂದ ಕಬ್ಬನ್ನು ಖರೀದಿಸುತ್ತಿದ್ದು ಇದರಿಂದ ಮೀಸಲು ಕ್ಷೇತ್ರದೊಳಗೆ ಕಬ್ಬು ಬೆಳೆದಿರುವ ರೈತರಿಗೆ ಅಪಾರ ತೊಂದರೆ ಮತ್ತು ನಷ್ಟ ಉಂಟಾಗಿದೆ ಎಂಬ ದೂರು ಹಿನ್ನೆಲೆಯಲ್ಲಿ ಹೊರ ಜಿಲ್ಲೆಯ ಕಬ್ಬನ್ನು ಖರೀದಿಸದಂತೆ ಮತ್ತು ಜಿಲ್ಲೆಯ ಒಳಗಿನ ಮೀಸಲು ಕ್ಷೇತ್ರದಲ್ಲಿ ಬೆಳೆದಿರುವ ಕಬ್ಬು ಹೊರತುಪಡಿಸಿ, ಅಳಗಂಚಿಯಲ್ಲಿರುವ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯವರು ಆದೇಶದಂತೆ ಮಂಡ್ಯ ಮತ್ತು ಹೊರ ಜಿಲ್ಲೆಗಳಿಂದ ಕಬ್ಬು ಖರೀದಿಸುವುದನ್ನು ನಿಷೇಧಿಸಿದೆ.
ಸಕ್ಕರೆ ಕಾರ್ಖಾನೆ ನಿಯಮ ಮೀರಿ ವಹಿವಾಟು ನಡೆಸಿದರೆ ಕರ್ನಾಟಕ ಕಬ್ಬು ನಿಯಂತ್ರಣ ಕಾಯ್ದೆ 2013 ಮತ್ತು ಕಬ್ಬು ನಿಯಂತ್ರಣ ಆದೇಶ 1960 ಹಾಗೂ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಕಾನೂನು ಕ್ರಮಕೈಗೊಳ್ಳಲು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮೈಸೂರು ಜಿಲ್ಲೆಯ ಆಹಾರ ನಾಗರಿಕ ಸರಬರಾಜು ಇಲಾಖೆ ಹಿರಿಯ ಉಪ ನಿರ್ದೇಶಕರು, ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರರ್‌ಗಳಿಗೆ ಆದೇಶ ನೀಡಿದ್ದಾರೆ.
ಜಿಲ್ಲೆಯ ಎಲ್ಲಾ ತಹಶೀಲ್ದಾರರು ಮತ್ತು ಪೊಲೀಸ್ ಅಧಿಕಾರಿಗಳು ಜಿಲ್ಲೆಯ ಗಡಿ ಭಾಗಗಳಲ್ಲಿ ಮತ್ತು ತನಿಖಾ ಠಾಣೆಗಳಲ್ಲಿ ಅಕ್ರಮ ಕಬ್ಬು ಸಾಗಾಣಿಕೆ ಮಾಡುವ ವಾಹನಗಳನ್ನು ಜಪ್ತಿಮಾಡಿ ಅಗತ್ಯ ವಸ್ತುಗಳ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ತನಿಖೆಗೆ ಆದೇಶ: ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಬೆಳೆಗಾರರಿಂದ ಕಬ್ಬು ಖರೀದಿಸುವಾಗ ಕಾರ್ಖಾನೆಯಲ್ಲಿ ತೂಕದ ಯಂತ್ರಗಳಲ್ಲಿ ನಿಖರ ತೂಕ ಬರುತ್ತಿಲ್ಲವೆಂದು ಕಬ್ಬು ಬೆಳೆಗಾರರು ಮತ್ತು ರೈತ ಮುಖಂಡರು ಆರೋಪಿಸಿದ್ದರು. ಹೀಗಾಗಿ ಕಾರ್ಖಾನೆಯಲ್ಲಿ ಬಳಸುತ್ತಿರುವ ತೂಕ ಮತ್ತು ಅಳತೆ ಮಾಪಕ ಪರಿಶೀಲಿಸಿ ವರದಿ ಮಾಡಲು ಮೈಸೂರು ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಒಂದು ತನಿಖಾ ತಂಡವನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ರಂದೀಪ್ ಆದೇಶ ಹೊರಡಿಸಿದ್ದಾರೆ.
ತನಿಖಾ ತಂಡದ ಸದಸ್ಯರಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಉಪ ನಿಯಂತ್ರಕರು, ಪ್ರಾದೇಶಿಕ ಸಾರಿಗೆ ಅಧಿಕಾರಿ, ಚೆಸ್ಕಾಂನ ಕಾರ್ಯಪಾಲಕ ಎಂಜಿನಿಯರ್ ಒಳಗೊಂಡ ತನಿಖಾ ತಂಡ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ತೂಕ ಮತ್ತು ಅಳತೆ ವಿಷಯಗಳನ್ನು ತನಿಖೆ ಮಾಡಿ ಒಂದು ವಾರದಲ್ಲಿ ವರದಿ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.